ಬಗರ್ ಹುಕುಂ ಸಮಿತಿ ಸಭೆ :ಸಾಗುವಳಿದಾರರಿಗೆ ಯಾವುದೇ ತೊಂದರೆಯಾಗದು: ಶಾಸಕ

ಚಿತ್ರದುರ್ಗ:

     ಬಗರ್‍ಹುಕುಂ ಸಾಗುವಳಿದಾರರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವುದಿಲ್ಲ. ಹಕ್ಕುಪತ್ರಕ್ಕಾಗಿ ಅರ್ಜಿ ಹಾಕಿರುವವರ ಪರವಾಗಿ ನಿಲ್ಲುತ್ತೇನೆ. ಹೆದರಿಕೆ ಬೇಡ ಎಂದು ಸಾಗುವಳಿದಾರರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಧೈರ್ಯ ತುಂಬಿದರು.

    ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಬಗರ್‍ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಅನಧಿಕೃತವಾಗಿ ಸಾಗುವಳಿ ಮಾಡಿರುವವರ ಜಮೀನುಗಳನ್ನು ಸಕ್ರಮ ಮಾಡುವ ಸಂಬಂಧ ಕಾನೂನು ಅಡಿಯಲ್ಲಿ ಚರ್ಚಿಸಲು ಮೊದಲನೇ ಸಭೆ ನಡೆಸಿದ್ದು, ನೆನೆಗುದಿಗೆ ಬಿದ್ದಿರುವ ಅನೇಕ ಅರ್ಜಿಗಳನ್ನು ಪರಿಶೀಲಿಸಿ ಮಾಹಿತಿ ಪಡೆದು ಅರಣ್ಯಭೂಮಿ, ಗ್ರಾಮ ಠಾಣೆ, ಸೇಂದಿ ವನ, ಹುಲ್ಲುಬಂದಿ ಖರಾಬು, ಗೋಮಾಳ ಇವುಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ.

    ಚಿತ್ರದುರ್ಗ ಕಸಬಾ ಹಿರೇಗುಂಟನೂರು ಹೋಬಳಿ ಸೇರಿ ತಾಲ್ಲೂಕಿನಲ್ಲಿ 6103 ಅರ್ಜಿಗಳು ಸ್ವೀಕೃತವಾಗಿದೆ. ಕಸಬಾ 1075 ಅರ್ಜಿ, ಹಿರೇಗುಂಟನೂರು 1421 ಅರ್ಜಿ ನಮೂನೆ-57 ರಲ್ಲಿ 31-7-2020 ಕ್ಕೆ ಪೆಂಡಿಂಗ್ ಇದೆ. ಮುಂದಿನ ಸಭೆಯೊಳಗೆ ಮತ್ತೆಷ್ಟು ಅರ್ಜಿಗಳು ಬರುತ್ತವೆಂಬುದನ್ನು ನೋಡಿಕೊಂಡು ಮತ್ತೊಮ್ಮೆ ಬಗರ್‍ಹಕುಂ ಸಮಿತಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದೆಂದರು.

   ಬಡ ಸಾಗುವಳಿದಾರರಿಗೆ ತೊಂದರೆಯಾಗಲು ಬಿಡಲ್ಲ. ಅಧಿಕಾರಿಗಳು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು. ನಗರಸಭೆ ವ್ಯಾಪ್ತಿಯ ಐದು ಕೀ.ಮೀ.ಒಳಗೆ ಜಮೀನು ಕೊಡಬಾರದೆಂಬ ನಿಬಂಧನೆಯಿದೆ. ಕುಂಚಿಗನಹಾಳ್, ಗೋನೂರು, ಮಾಳಪ್ಪನಹಟ್ಟಿ, ಮೆದೇಹಳ್ಳಿ, ಪಿಳ್ಳೆಕೆರೆನಹಳ್ಳಿ ಇವುಗಳು ಐದು ಕಿ.ಮೀ.ವ್ಯಾಪ್ತಿಯೊಳಗೆ ಬರುವುದರಿಂದ ಸರ್ಕಾರದ ಮಾನದಂಡವೇನಿದೆ ಎನ್ನುವುದನ್ನು ನೋಡಿಕೊಂಡು ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಶಾಸಕರು ಹೇಳಿದರು.ಬಗರ್‍ಹುಕುಂ ಸಮಿತಿ ಸದಸ್ಯ ಕಾರ್ಯದರ್ಶಿ ಚಿತ್ರದುರ್ಗ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಸಮಿತಿಗೆ ನೂತನ ಸದಸ್ಯರುಗಳಾಗಿ ನೇಮಕಗೊಂಡಿರುವ ಪ್ರಸನ್ನ, ಸಿ.ಹೆಚ್.ಮಂಜುನಾಥ್, ರೇಖ ಹಾಗೂ ಕಂದಾಯ ನಿರೀಕ್ಷಕರುಗಳು ಸಭೆಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link