ತುಮಕೂರು:
ಸರ್ಕಾರ ಖಾಸಗಿ ಬಸ್ ಮಾಲೀಕರ ಬೇಡಿಕೆಯಾದ ವಿಮೆ ವಿನಾಯಿತಿ ಹಾಗೂ ಮಾಸಿಕ ಕಂತಿನ ರಿಯಾಯಿತಿಯನ್ನು ನೀಡಿದರೆ ಮಾತ್ರ ಖಾಸಗಿ ಬಸ್‍ಗಳ ಸೇವೆ ಪುನರಾರಂಭವಾಗಲಿದೆ ಎಂದು ತುಮಕೂರು ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ಬಲಶ್ಯಾಮಸಿಂಗ್ ತಿಳಿಸಿದರು.
ನಗರದ ಹೊರವಲಯ ಹಿರೇಹಳ್ಳಿಯಲ್ಲಿ ವಿವಿಧ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಸರ್ಕಾರಕ್ಕೂ ಸಲ್ಲಿಸಿರುವ ಬೇಡಿಕೆಗಳ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಲಾಗಿದ್ದು, ಎಲ್ಲರೂ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ, ಸರ್ಕಾರ ಒಪ್ಪಿದರೆ ಮಾತ್ರ ಸೇವೆ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈಗಾಗಲೇ ಬಸ್ ಮಾಲೀಕರ ಬೇಡಿಕೆಯನ್ನು ತಿಳಿಸಲಾಗಿದೆ, ಬಸ್ ಮೇಲಿನ ತ್ರೈಮಾಸಿಕ ತೆರಿಗೆಗೆ ಡಿಸೆಂಬರ್‍ವರೆಗೆ ವಿನಾಯ್ತಿ ನೀಡಬೇಕು ಮತ್ತು ಜೂನ್ ವರೆಗೆ 50ರಷ್ಟು ತೆರಿಗೆ ಕಟ್ಟಲು ಅವಕಾಶ ನೀಡಬೇಕು, ಹಾಗೆಯೇ ಮಾಸಿಕ ಕಂತು ಹಾಗೂ ವಿಮೆಯಲ್ಲಿ ವಿನಾಯ್ತಿ ನೀಡಿದರೆ ಮಾತ್ರ ಬಸ್‍ಗಳು ಓಡಾಡಲು ಸಾಧ್ಯವಾಗುತ್ತದೆ ಎಂದರು.
ಕೇಂದ್ರ ಸರ್ಕಾರ ಇಂಡಸ್ಟ್ರಿಗಳಿಗೆ 5ರೂ ಕಡಿಮೆಗೆ ಡಿಸೇಲ್ ನೀಡುತ್ತದೆ, ಬಸ್‍ಗಳಿಗೂ ಮಾರುಕಟ್ಟೆ ದರಕ್ಕೆ ಡಿಸೇಲ್ ಮಾರಾಟ ಮಾಡುತ್ತಿದ್ದು, ಇದು ಸೇವೆಯೊಂದಿಗೆ ದುಡಿಮೆಯನ್ನು ಮಾಡುವ ಉದ್ಯಮವಾಗಿದ್ದು, ಕೊರೋನಾದಿಂದಾಗಿ ಜನರ ಬಳಿ ಹಣವಿಲ್ಲ, ಇಂತಹ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಿಸಿ, ಸರ್ಕಾರದ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸುವುದು ಕಷ್ಟವಾಗಲಿದೆ ಎಂದು ಹೇಳಿದರು.
ಸಿಎಂ ಬಿಎಸ್ ವೈ ಖಾಸಗಿ ಬಸ್ ಮಾಲೀಕರ ಸಂಘದ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದಾರೆ, ಇದುವರೆಗೆ ಖಾಸಗಿ ಬಸ್ ಮಾಲೀಕರ ಬೇಡಿಕೆ ಈಡೇರಿಕೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ರಾಜ್ಯದ ಎಲ್ಲ ಜಿಲ್ಲೆಯ ಸದಸ್ಯರನ್ನು ಒಳಗೊಂಡ ನಿಯೋಗವನ್ನು ಮಾಡಿ, ಸಿಎಂ ಅವರನ್ನು ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 8500 ಸಾವಿರ ಖಾಗಿ ಬಸ್‍ಗಳಿವೆ. ಜಿಲ್ಲೆಯಲ್ಲಿ 540 ಬಸ್‍ಗಳಿವೆ. ಪ್ರತಿ ತಿಂಗಳು ಒಂದು ಲಕ್ಷ ನಷ್ಟವನ್ನು ಬಸ್ ಮಾಲೀಕರು ಅನುಭವಿಸುತ್ತಿದ್ದಾರೆ, ಕೆಎಸ್‍ಆರ್‍ಟಿಸಿ ಬಸ್‍ಗಳು ಸಹ ನಷ್ಟ ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಖಾಸಗಿ ಬಸ್ ಕಾರ್ಯಾಚರಣೆ ನಡೆಸುವುದು ಹೇಗೆ? ಈ ಬಗ್ಗೆ ಮುಖ್ಯಮಂತ್ರಿಗಳು ನಮ್ಮ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಸರ್ಕಾರ ಖಾಸಗಿ ಬಸ್‍ಗಳ ಮೇಲೆ ವಿಧಿಸುವ ಟ್ಯಾಕ್ಸ್ ಮತ್ತು ಡಿಸೇಲ್ ಬೆಲೆ ಹೆಚ್ಚಳವಾಗಿದೆ. ಸರ್ಕಾರದ ಮಾರ್ಗಸೂಚಿ ಯಂತೆ ಪ್ರಯಾಣಿಕರನ್ನು ಕರೆದೊಯ್ದರೆ ಬಸ್ ಮಾಲೀಕರು ನಷ್ಟಕ್ಕೆ ಒಳಗಾಗುತ್ತಾರೆ, ಸಾರಿಗೆ ಇಲಾಖೆ ಖಾಸಗಿ ಬಸ್ ಮಾಲೀಕರನ್ನು ಹಾಳುಗೆಡವುತ್ತಿದೆ. ಅನಾರೋಗ್ಯಕಾರಿ ಬೆಲೆ ನಿಗದಿ ಮಾಡಿ ಖಾಸಗಿ ಬಸ್‍ಗಳು ನಷ್ಟ ಅನುಭವಿಸುವಂತೆ ಮಾಡುವುದರ ಜೊತೆಗೆ ಕೆಎಸ್‍ಆರ್‍ಟಿಸಿ ಸಂಸ್ಥೆಯೂ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ಹೇಳಿದರು.
ಸ್ವತಂತ್ರ್ಯ ಪೂರ್ವದಿಂದಲೂ ಖಾಸಗಿ ಬಸ್‍ಗಳುಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬೇರೆ ಚಾಲಕರಿಗೆ ನೀಡಿದಂತೆ ಬಸ್ ಚಾಲಕರಿಗೆ ಪರಿಹಾರ ಧನವನ್ನು ನೀಡಬೇಕೆಂದು ಒತ್ತಾಯಿಸಿದ ಅವರು, ಎರಡು ಮೂರು ದಿನದಲ್ಲಿ ಸಿಎಂ ಭೇಟಿ ಮಾಡುತ್ತೇವೆ ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಬಸ್ ಕಾರ್ಯಾಚರಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಂ.ಎಸ್.ಶಂಕರನಾರಾಯಣ್, ನಿರ್ದೇಶಕರಾದ ಪಿ.ಆರ್.ಮಂಜುನಾಥ್, ಎಸ್.ಬಿ.ಕೃಷ್ಣಮೂರ್ತಿ, ಎ.ಎಸ್.ರುದ್ರಮೂರ್ತಿ ಸೇರಿದಂತೆ ತುಮಕೂರು ಖಾಸಗಿ ಬಸ್ ಮಾಲೀಕರ ಸಂಘದ ನಿರ್ದೇಶಕರುಗಳು ಸದಸ್ಯರು ಮತ್ತು 13 ಜಿಲ್ಲೆಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ