ಹುಳಿಯಾರು
ಆರ್ ಟಿ ಸಿಯಲ್ಲಿನ ಬೆಳೆ ಕಾಲಂ ಗೊಂದಲಕ್ಕೆ ತೆರೆ ಎಳೆಯಲಾಗಿದ್ದು ಸ್ವತಹ ರೈತರೇ ತಮ್ಮ ಜಮೀನಿನ ಸರ್ವೆ ನಂಬರ್, ಹಿಸ್ಸಾ ನಂಬರ್ ವಾರು ಬೆಳದ ವಿವಿಧ ಬೆಳೆಗಳ ವಿವರ ಮತ್ತಿತರ ಮಾಹಿತಿಯನ್ನು ಫೋಟೋ ಸಹಿತ ಬೆಳೆ ಸಮೀಕ್ಷೆ ಆಪ್ ನಲ್ಲಿ ಅಪ್ಲೋಡ್ ಮಾಡಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ನಡೆದ ಕೊಬ್ಬರಿ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಳೆದ ಸಾಲಿನಲ್ಲಿ ನಿಯೋಜಿತ ಖಾಸಗಿ ವ್ಯಕ್ತಿಗಳಿಂದ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿತ್ತು. ಆದರೆ ಕೆಲವೊಂದು ಸಮಸ್ಯೆಯಿಂದಾಗಿ ಆರ್‍ಟಿಸಿ ಎಲ್ಲಿ ಬೆಳೆ ಕಾಲಂನಲ್ಲಿ ಬೆಳೆ ನಮೂದಾಗದ ಕಾರಣ ಕೆಲ ರೈತರಿಗೆ ಸಮಸ್ಯೆಗೆ ಕಾರಣವಾಗಿತ್ತು. ಬೆಳೆ ದೃಢೀಕರಣ ಪತ್ರ ಪಡೆಯಲು ಇಲಾಖೆಗೆ ಹಲವಾರು ಬಾರಿ ಅಲೆಯಲು ಕಾರಣವಾಗಿತ್ತು.
ಸಮಸ್ಯೆ ಮನಗಂಡ ಸರ್ಕಾರ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಬಾರಿ ರೈತರು ತಾವು ಬೆಳೆದ ಬೆಳೆಗಳ ಸಮೀಕ್ಷೆ ಮಾಡಲು ಅನುಮತಿ ನೀಡಿದ್ದು ರೈತರ ಬೆಳೆ ಸಮೀಕ್ಷೆ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ಲೋಡ್ ಮಾಡಿಕೊಂಡು ಸ್ವಯಂ ಬೆಳೆ ಸಮೀಕ್ಷೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಬೆಳೆ ಸಮೀಕ್ಷೆ ಯೋಜನೆ ಆ.7ರಿಂದ ಜಾರಿಗೆ ಬಂದಿದ್ದು ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಸರ್ವೆ ನಂಬರ್, ನೀರಾವರಿ ಮಾಹಿತಿಯನ್ನು ದಾಖಲಿಸಲು ಆ.24ರವರೆಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳುಗಳನ್ನು ಸಂಪರ್ಕಿಸುವಂತೆ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ