ದಾವಣಗೆರೆ:
ಮೋದಿ ಸರ್ಕಾರ ನಡೆಸಿರುವ ನಿರ್ದಿಷ್ಠ ದಾಳಿ, ಏರ್ ಸ್ಟ್ರೈಕ್ನಿಂದ ವಿಚಲಿತರಾಗಿರುವ ಕಾಂಗ್ರೆಸ್ ಮುಖಂಡರು ಸೋಲಿನ ಭೀತಿಯಿಂದಾಗಿ ಯಡಿಯೂರಪ್ಪನವರು ರಾಷ್ಟ್ರ ನಾಯಕರಿಗೆ ಕಪ್ಪ ಸಲ್ಲಿಸಿದಾರೆಂಬುದಾಗಿ ಸುಳ್ಳಿನ ಕಂತೆಯಿಂದ ಕೂಡಿರುವ ನಕಲಿ ಡೈರಿ ಬಿಡುಗಡೆ ಮಾಡಿದ್ದಾರೆಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಬಿಜೆಪಿ ವರಿಷ್ಠರಿಗೆ ಸಾವಿರಾರು ಕೋಟಿ ಹಣ ನೀಡಿದ್ದಾರೆಂಬ ಸುಳ್ಳಿನಿಂದ ಕೂಡಿರುವ ನಕಲಿ ಡೈರಿ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ಸಿನವರು ತಾವು ಯಾವ ಮಟ್ಟಕ್ಕಾದರೂ ಇಳಿಯಬಲ್ಲೆವೆಂಬುದನ್ನು ತೋರಿಸಿದ್ದಾರೆ. ಕಳ್ಳರು, ಲೂಟಿಕೋರರ ಪಕ್ಷವಾದ ಕಾಂಗ್ರೆಸ್ಸಿನ ಇಂತಹ ಮಿಥ್ಯಾರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ ಗುಂಡೂರಾವ್, ಸಿಎಂ ಕುಮಾರಸ್ವಾಮಿ ಧ್ವನಿಗೂಡಿಸಿದ್ದು, ನಕಲಿ ಡೈರಿ ಬಿಡುಗಡೆ ಮಾಡಿದ ಕಾಂಗ್ರೆಸ್ಸಿನ ನಾಯಕರ ವಿರುದ್ಧ ಯಡಿಯೂರಪ್ಪನವರು ಶೀಘ್ರವೇ ಮಾನನಷ್ಟ ಮೊಕದ್ದಮೆ ಹೂಡಲಿದ್ದಾರೆಂದು ಎಚ್ಚರಿಸಿದರು.
ಯಡಿಯೂರಪ್ಪ 3 ವರ್ಷ ಸಿಎಂ ಆಗಿದ್ದಾಗ, ಅಲ್ಲಿಂದ ಇಲ್ಲಿವರೆಗೆ 11 ವರ್ಷ ಆಗುವವರೆಗೂ ಕಾಂಗ್ರೆಸ್ಸಿನವರೇನು ಕಡ್ಲೇಪುರಿ ತಿನ್ನುತ್ತಿದ್ದರಾ? ನಕಲಿ ಡೈರಿ ಸೃಷ್ಟಿಸಿದ ಕಾಂಗ್ರೆಸ್ಸಿಗೆ ಮುಖಭಂಗವಾಗುವುದು ನಿಶ್ಚಿತ. ಕಳೆದ ಫೆಬ್ರುವರಿಯಲ್ಲಿ ಆಪರೇಷನ್ ಕಮಲ ಮಾಡಲು ಬಿಜೆಪಿ ತಮ್ಮ ಮನೆಗೆ 5 ಕೋಟಿ ಕಳಿಸಿದೆಯೆಂದಿದ್ದ ಮೈತ್ರಿ ಪಕ್ಷದ ಶಾಸಕರೊಬ್ಬರು ಬಿಜೆಪಿ, ಯಡಿಯೂರಪ್ಪ ಆಪರೇಷನ್ ಕಮಲ ವಿಫಲಗೊಳಿಸಲು ಸುಳ್ಳು ಹೇಳಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದು ಅಧಿಕಾರಕ್ಕಾಗಿ ಮೈತ್ರಿ ಪಕ್ಷಗಳ ನಾಯಕರು ಯಾವ ಮಟ್ಟಕ್ಕಾದರೂ ಇಳಿಯಬಲ್ಲರೆಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲೇ ರಾಜ್ಯದ ಮತದಾರರು ಕಾಂಗ್ರೆಸ್ಸನ್ನು 120ರಿಂದ 79 ಸ್ಥಾನಕ್ಕಿಳಿಸಿದ್ದಾರೆ. ಅಲ್ಲದೇ, ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಕಾಂಗ್ರೆಸ್ ಸ್ಥಾನ ತೋರಿಸಿದ್ದು, ಅಲಿಬಾಬಾ ಮತ್ತು 40 ಜನ ಕಳ್ಳರು ಎಂಬಂತೆ ಫಲಿತಾಂಶ ಕೊಟ್ಟಿದ್ದಾರೆಂದು ವ್ಯಂಗ್ಯವಾಡಿದರು.
ಆದರ್ಶ ಆಪಾರ್ಟ್ಮೆಂಟ್, ಕಲ್ಲಿದ್ದಲು, ಬೋಫೋರ್ಸ್ ಹೀಗೆ ಲಕ್ಷಾಂತರ ಕೋಟಿ ಭ್ರಷ್ಟಾಚಾರ ನಡೆಸಿದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಿಥ್ಯಾರೋಪ, ಟೀಕೆ ಮಾಡುತ್ತಿದೆ. ಮೋದಿ ಟೀಕಿಸಲು ಕಾಂಗ್ರೆಸ್ಸಿಗೆ ಯಾವುದೇ ನೈತಿಕತೆಯೂ ಇಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ನಮ್ಮ ಪಕ್ಷದವರ ಬಗ್ಗೆ ಏಕವಚನ ಬಳಸಿದ್ದು ಖಂಡನೀಯ. ನಮ್ಮವರ ಬಗ್ಗೆ ಹಗುರ ಮಾತನಾಡಿದರೆ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಭಸ್ಮಾಸುರ ಇದ್ದಂತೆ. ಬಿಜೆಪಿಯನ್ನು ದೂರವಿಡಲು ತಮ್ಮ ಮನೆ ಬಾಗಿಲಿಗೆ ಹೋದ ಕಾಂಗ್ರೆಸ್ ಪಕ್ಷದ ತಲೆಯ ಮೇಲೆ ಕೈ ಇಟ್ಟು ನಾಶ ಮಾಡುವ ಗೌಡರು, ತಾವೂ ಕೂಡ ಅದೇ ರೀತಿ ನಾಶವಾಗಲಿದ್ದಾರೆ. ಮೂರೂ ಲೋಕಸಭಾ ಕ್ಷೇತ್ರದಲ್ಲಿ ಅಜ್ಜ, ಮೊಮ್ಮಕ್ಕಳು ಸೋಲಲಿದ್ದು, ರಾಜ್ಯದಲ್ಲಿ ಒಂದೇ ಒಂದು ಕ್ಷೇತ್ರವನ್ನೂ ಜೆಡಿಎಸ್ ಗೆಲ್ಲುವುದಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ.ಶ್ರೀನಿವಾಸ, ಮುಖಂಡರಾದ ಮಂಜುನಾಥ್, ಟಿಂಕರ್ ಮಂಜಣ್ಣ, ಗುರು, ಮಂಜುನಾಥ, ಹಳದಪ್ಪ, ನೀಲಗುಂದ ರಾಜು, ಸೋಗಿ ಗುರು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








