ಇನ್ಫೋಸಿಸ್ ಉದ್ಯೋಗಿಯನ್ನು ಸುಲಿಗೆ ಮಾಡಿದ ಕಳ್ಳರು..!!!

ಬೆಂಗಳೂರು

         ತಮಿಳುನಾಡಿಗೆ ಹೋಗಲು ಸೀಟು ಕಾಯ್ದಿರಿಸಿದ್ದ ಬಸ್ ತಪ್ಪಿದ ಹಿನ್ನಲೆಯಲ್ಲಿ ಮತ್ತೊಂದು ಬಸ್‍ಗಾಗಿ ಕಾಯುತ್ತಿದ್ದ ಇನ್ಫೋಸಿಸ್ ಕಂಪನಿಯ ಸಾಫ್ಟ್‍ವೇರ್ ಇಂಜಿನಿಯರ್ ಅನುರಾಗ್ ಶರ್ಮಾ ಅವರನ್ನು ಅಪಹರಿಸಿ ಹಲ್ಲೆ ನಡೆಸಿ 45 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದ ಮೂವರು ಸುಲಿಗೆಕೋರರು ಪರಪ್ಪನ ಅಗ್ರಹಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

          ಸುಲಿಗೆಕೋರರಾದ ಆನೇಕಲ್‍ನ ಸುರಜಕ್ಕನ ಹಳ್ಳಿಯ ಗಣೇಶ ಅಲಿಯಾಸ್ ಟಚ್ಚು (29), ಹಾರಾಗದ್ದೆಯ ಶ್ರೀಧರ (30), ಉಮೇಶ (20)ನನ್ನು ಬಂಧಿಸಿ ಆರೋಪಿಗಳ ಗ್ಯಾಂಗ್‍ನಲ್ಲಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವೇಣುಗಾಗಿ ತೀವ್ರ ಶೋಧ ನಡೆಸಲಾಗಿದೆ

         ಮನೆಗಳವು ವಾಹನ ಕಳವು ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜೈಲಿಗೆ ಹೋಗಿ ಇತ್ತೀಚೆಗೆ ಬಿಡುಗಡೆಯಾಗಿ ಬಂದಿದ್ದ ಗಣೇಶ ಇತರ ಆರೋಪಿಗಳಾದ ಶ್ರೀಧರ, ಉಮೇಶ ಹಾಗೂ ವೇಣು ಜತೆ ಗ್ಯಾಂಗ್ ಕಟ್ಟಿಕೊಂಡು ಪರಪ್ಪನ ಅಗ್ರಹಾರ, ಸೂರ್ಯನಗರ ಇನ್ನಿತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಲಿಗೆ ಕೃತ್ಯದಲ್ಲಿ ತೊಡಗಿದ್ದರು.

         ಆರೋಪಿ ಗಣೇಶ ತನ್ನ ಗ್ಯಾಂಗ್ ಜತೆ ಸಂಬಂಧಿಯಾದ ಶೋಭರಾಜ್‍ನನ್ನು ದ್ವೇಷದಿಂದ ಕೊಲೆ ಮಾಡಲು ಸಂಚು ರೂಪಿಸಿದ್ದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದು,ಬಂಧಿತ ಆರೋಪಿಗಳಿಂದ ಓಮ್ನಿ ವ್ಯಾನ್ ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

ಬೆದರಿಸಿ ಸುಲಿಗೆ

         ಚೆನ್ನೈನಲ್ಲಿ ಇನ್ಫೋಸಿಸ್ ಕಂಪನಿಯ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದ ಜಾಲಹಳ್ಳಿಯ ಅನುರಾಗ್ ಶರ್ಮಾ ಅವರು ಕಳೆದ ಜ. 1 ರಂದು ಮುಂಜಾನೆ 1 ಗಂಟೆ ಸುಮಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ವೀರಸಂದ್ರ ಕೈಗಾರಿಕಾ ಪ್ರದೇಶದ ಬಳಿ ತಮಿಳುನಾಡಿನ ಕಡೆಗೆ ಹೋಗುವ ಬಸ್‍ಗಾಗಿ ಕಾಯುತ್ತಿದ್ದರು.

          ಈ ವೇಳೆ ಓಮ್ನಿ ವ್ಯಾನ್‍ನಲ್ಲಿ ಬಂದಿದ್ದ ಆರೋಪಿಗಳು, ಡ್ರಾಪ್ ಕೊಡುವುದಾಗಿ ವ್ಯಾನ್‍ನಲ್ಲಿ ಹತ್ತಿಸಿಕೊಂಡು ಸ್ವಲ್ಪ ದೂರ ಹೋದ ನಂತರ ಹಲ್ಲೆ ನಡೆಸಿ, ಕಾಲುಗಳನ್ನು ಕಟ್ಟಿ, ಬೆದರಿಸಿ ಕ್ರೆಡಿಟ್, ಡೆಬಿಟ್ ಕಾರ್ಡುಗಳನ್ನು ಕಸಿದು ಅವುಗಳ ಪಿನ್ ನಂಬರ್ ಪಡೆದು 45 ಸಾವಿರ ಡ್ರಾ ಮಾಡಿಸಿ, ವ್ಯಾನ್‍ನಲ್ಲಿ ಸುತ್ತಾಡಿಸಿ, ಸೂರ್ಯ ನಗರದ ನಾಗನಾಯಕನ ಹಳ್ಳಿ ಬಳಿ ಕೆಳಗೆ ನೂಕಿ ಪರಾರಿಯಾಗಿದ್ದರು.

ಕಾರು ಕಳವು ಕೃತ್ಯ

         ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಅನುರಾಗ್ ಶರ್ಮಾ ಅವರು, ಪರಪ್ಪನ ಅಗ್ರಹಾರ ಪೆÇಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಇನ್ಸ್‍ಪೆಕ್ಟರ್ ಕಿಶೋರ್‍ಕುಮಾರ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

        ಆರೋಪಿಗಳ ಗ್ಯಾಂಗ್‍ನ ಮುಖ್ಯಸ್ಥನಾಗಿದ್ದ ಗಣೇಶ, ನಾಗಮಂಗಲ ಮೂಲದವನಾಗಿದ್ದು, ಚೆನ್ನಮ್ಮನ ಕೆರೆ ಅಚ್ಚುಕಟ್ಟು, ಅನ್ನಪೂರ್ಣೇಶ್ವರಿ ನಗರ, ವಿಜಯನಗರ, ಬಸವೇಶ್ವರ ನಗರ, ಸುಬ್ರಮಣ್ಯಪುರ ಇನ್ನಿತರ ಠಾಣೆಗಳ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇದಲ್ಲದೆ ನಾಗಮಂಗಲದಲ್ಲಿ ಕಾರು ಕಳವು ಮಾಡಿದ ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ.ಆರೋಪಿಗಳ ಬಂಧನದಿಂದ ಪರಪ್ಪನ ಅಗ್ರಹಾರ, ಸೂರ್ಯನಗರದ 2 ಸುಲಿಗೆ, ನಾಗಮಂಗಲದ ಕಾರು ಕಳವು ಸೇರಿ 3 ಪ್ರಕರಣಗಳು ಪತ್ತೆಯಾಗಿದ್ದು, ಕೊಲೆ, ಕೊಲೆಯ ಸಂಚು ವಿಫಲಗೊಳಿಸಲಾಗಿದೆ ಎಂದು ಬೋರಲಿಂಗಯ್ಯ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap