ಬೆಂಗಳೂರು
ಬೈಕ್‍ನಲ್ಲಿ ಹೋಗುತ್ತಿದ್ದ ಹಣಕಾಸು ಲೇವಾದೇವಿದಾರ ಸೇರಿ ಇಬ್ಬರನ್ನು ಹಿಂದಿನಿಂದ ಕಾರಿನಲ್ಲಿ ಬಂದು ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ ನಾಲ್ಕೂವರೆ ಲಕ್ಷ ನಗದು, ಲ್ಯಾಪ್‍ಟಾಪ್ ಇದ್ದ ಬ್ಯಾಗ್‍ನ್ನು ಕಸಿದು ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾದಹಳ್ಳಿಯಲ್ಲಿ ಸ್ಮಾರ್ಟ್ ಬ್ಯಾಂಕಿಂಗ್ ಮನಿ ಟ್ರಾನ್ಸ್‍ಪರ್ ವ್ಯವಹಾರ ನಡೆಸುತ್ತಿದ್ದ ಬಾಗಲೂರಿನ ಬೈಯ್ಯಪ್ಪನಹಳ್ಳಿ ಜಯರಾಂ ಅವರು ಸಂಬಂಧಿ ನರಸಿಂಹಮೂರ್ತಿ ಅವರ ಜತೆ ಸೋಮವಾರ ರಾತ್ರಿ 8.30ರ ವೇಳೆ ಸಾದಹಳ್ಳಿ ರಸ್ತೆಯಲ್ಲಿ ಬಾಗಲೂರಿನ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಬೈಕ್‍ನ್ನು ಹಿಂದಿಕ್ಕುವಂತೆ ಮಾಡಿ ಕೆಳಗೆ ಬೀಳಿಸಿ ಲ್ಯಾಪ್‍ಟಾಪ್, ನಾಲ್ಕೂವರೆ ಲಕ್ಷ ನಗದು ಹಣವಿದ್ದ ಬ್ಯಾಗ್‍ನ್ನು ಕಸಿದು ಪರಾರಿಯಾಗಿದ್ದಾರೆ.
ಜಯರಾಂ ಅವರು ಮೊದಲ ದಿನ 3 ಲಕ್ಷ 70 ಸಾವಿರ, 2ನೇ ದಿನ 80 ಸಾವಿರ ಸಂಗ್ರಹ ಮಾಡಿದ ಹಣವನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಮನೆಗೆ ಹೋಗುತ್ತಿದ್ದರು. ಸಾದಹಳ್ಳಿ ರಸ್ತೆಯಲ್ಲಿ ಕತ್ತಲಿದ್ದು, ಅದರ ಲಾಭ ಪಡೆದ ದುಷ್ಕರ್ಮಿಗಳು, ಈ ಕೃತ್ಯ ನಡೆಸಿದ್ದಾರೆ ಎಂದು ಡಿಸಿಪಿ ಕಲಾಕೃಷ್ಣ ಸ್ವಾಮಿ ಅವರು ತಿಳಿಸಿದ್ದಾರೆ
ಪರಿಚಯಸ್ಥರೇ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿರುವ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








