ಗಾಂಜಾ ಮಾರಲು ಬಂದು ಬೈಕ್ ಕದ್ದ ಕಳ್ಳರ ಬಂಧನ..!!

ಬೆಂಗಳೂರು

     ಗಾಂಜಾ ಮಾರಾಟ ಮಾಡಲು ಬಂದು ಬೈಕ್ ಕಳವು ಮಾಡಿ ತಮಿಳುನಾಡಿನಲ್ಲಿ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದ್ದ 8 ಮಂದಿಯ ಗಾಂಜಾ ಗ್ಯಾಂಗ್‍ನ್ನು ಬಂಧಿಸಿ 20.2 ಲಕ್ಷ ಮೌಲ್ಯದ 25 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

       ತಮಿಳುನಾಡಿನ ಕೃಷ್ಣಗಿರಿಯ ಬೇರಿಕಿಯ ಪರಮೇಶ್ ಅಲಿಯಾಸ್ ಬಾಪು (21), ಸೈಯದ್ ಫಾರೂಕ್ (21), ಬಸವರಾಜ್ (20), ಬಾಲಾಜಿ (18), ತೀರ್ಥಂನ ತಿಮ್ಮರಾಜು ಅಲಿಯಾಸ್ ತಿಮ್ಮ (33), ಮಡತ್ತೂರ್‍ನ ಅರುಣ್ (21), ನಂದಿನಿ ಲೇಔಟ್‍ನ ವಿಜಯಾನಂದ ನಗರದ ರಾಹುಲ್ ಅಲಿಯಾಸ್ ಸೈಯದ್ ಸಾದಿಕ್ (19) ಹಾಗೂ ಕೂಲಿನಗರದ ದಾವೂದ್ (19) ಬಂಧಿತ ಗ್ಯಾಂಗ್‍ನ ಆರೋಪಿಗಳಾಗಿದ್ದಾರೆ.

       ಬಂಧಿತರಿಂದ ವಿವಿಧ ಕಂಪನಿಯ 25 ದ್ವಿಚಕ್ರ ವಾಹನಗಳು, 400 ಗ್ರಾಂ ಗಾಂಜಾ, 800 ರೂ. ನಗದು ಸೇರಿದಂತೆ 20.2 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗಿದೆ .ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ನಗರಕ್ಕೆ ಗಾಂಜಾ ಮಾರಾಟ ಮಾಡಲು ಬರುತ್ತಿದ್ದು, ಮಾರಾಟ ಮುಗಿದ ನಂತರ ಬೈಕ್, ಸ್ಕೂಟರ್‍ಗಳನ್ನು ಕಳವು ಮಾಡಿ ಕೃಷ್ಣಗಿರಿಗೆ ತೆಗೆದುಕೊಂಡು ಹೋಗಿ 1 ಲಕ್ಷ ಬೆಲೆಯ ಬೈಕ್‍ನ್ನು ಕೇವಲ 10 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

       ಮತ್ತೆ ನಗರಕ್ಕೆ ಆಗಮಿಸಿ ಗಾಂಜಾ ಮಾರಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು.ನಂದಿನಿ ಲೇಔಟ್‍ನ ಕೂಲಿ ನಗರದ ದೊಡ್ಡಮ್ಮ ದೇವಸ್ಥಾನದ ಬಳಿ ನಂದಿನಿ ಲೇಔಟ್‍ನ ಇನ್ಸ್‍ಪೆಕ್ಟರ್ ಲೋಹಿತ್ ಮತ್ತವರ ಸಿಬ್ಬಂದಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ವಿಚಾರಣೆ ನಡೆಸಿದಾಗ ಇನ್ನಿತರ ನಾಲ್ವರ ಜತೆ ಸೇರಿ ಗ್ಯಾಂಗ್ ಕಟ್ಟಿಕೊಂಡು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದನ್ನು ಬಾಯ್ಬಿಟ್ಟಿದ್ದಾರೆ.

     ಆರೋಪಿಗಳಲ್ಲಿ ಮೂವರು ಈಗಾಗಲೇ ಬೈಕ್ ಕಳವು ಕೃತ್ಯದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಗ್ಯಾಂಗ್‍ನ ಬಂಧನದಿಂದ ಅತ್ತಿಬೆಲೆ, ಹೆಬ್ಬಗೋಡಿ, ಕಾಡುಗೋಡಿಯ ತಲಾ 2, ಅನ್ನಪೂರ್ಣೇಶ್ವರಿ ನಗರ, ವಿಜಯನಗರ, ಮೈಕೋ ಲೇಔಟ್, ರಾಮಮೂರ್ತಿ ನಗರದ ತಲಾ 1 ಸೇರಿ 11 ಬೈಕ್‍ಗಳ ಕಳವು ಪ್ರಕರಣ ಪತ್ತೆಯಾಗಿದ್ದು, ಉಳಿದ ಬೈಕ್‍ಗಳ ಮಾಲೀಕರ ಪತ್ತೆ ಕಾರ್ಯ ನಡೆದಿದೆ ಎಂದು ಶಶಿಕುಮಾರ್ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link