ದಾವಣಗೆರೆ:
ವಿದ್ಯಾರ್ಥಿಗಳು ಜಾತ್ಯಾತೀತವಾಗಿ ಯೋಚಿಸುವ ಗುಣ ಬೆಳೆಸಿಕೊಳ್ಳಬೇಕೆಂದು ದಾವಣಗೆರೆ ವಿವಿಯ ಕುಲಪತಿ ಶರಣಪ್ಪ ವಿ. ಹಲಸೆ ಕರೆ ನೀಡಿದರು.
ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶುಕ್ರವಾರ ಜೆ.ಹೆಚ್.ಪಟೇಲ್ ಕಾಲೇಜಿನಿಂದ ಪದವಿ ಪಡೆದಿರುವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಋಣಾತ್ಮ ಚಿಂತನೆಗಳನ್ನು ತೊಡೆದು, ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡರೆ, ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿರುವ ವಿದ್ವತ್ತು ಹಾಗೂ ಕೌಶಲ್ಯಕಲ್ಕೆ ಒಂದೂ ಬೆಲೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವ ಮೂಲಕ ವಿದ್ವತ್ತು ಮತ್ತು ಕೌಶಲ್ಯ ರೂಢಿಸಿಕೊಳ್ಳಬೇಕೆಂದು ಹೇಳಿದ ಅವರು, ಮನುಷ್ಯ ಪ್ರತಿ ಮೂವತ್ತು ವರ್ಷಕ್ಕೆ ಒಂದು ಪ್ಲಾನ್ ಹಾಕಿಕೊಂಡು, ವೇಳಾಪಟ್ಟಿಯ ಮೂಲಕ ಬದುಕಿದರೆ ಜೀವನ ಸುಗಮವಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ವೇಳಾಪಟ್ಟಿ ಆಧಾರಿಸಿ ಜೀವನ ನಡೆಸುವುದರ ಕಡೆಗೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಹೆತ್ತು-ಹೊತ್ತು ಸಾಕಿರುವ ತಂದೆ-ತಾಯಿಂದರನ್ನು ಹಾಗೂ ಶಿಕ್ಷಣ ನೀಡುವ ಮೂಲಕ ನಮಗೆ ಭವಿಷ್ಯಕೊಟ್ಟ ಶಿಕ್ಷಕರನ್ನು ಮತ್ತು ನಮ್ಮಲ್ಲಿರುವ ಕತ್ತಲು ಆವರಿತ ದಾರಿಗೆ ಜ್ಞಾನ ಎಂಬ ದೀವಿಗೆಯ ಮೂಲಕ ಬೆಳಕು ತೋರಿಸಿದ ಶಾಲಾ-ಕಾಲೇಜುಗಳನ್ನು ಎಂದೂ ಮರೆಯಬಾರದು ಹಾಗೂ ನಿತ್ಯವೂ ಸತ್ಯವನ್ನೇ ನುಡಿಯಬೇಕೆಂದು ಕಿವಿಮಾತು ಹೇಳಿದರು.
ಬಸವಣ್ಣನವರ ಕಾಯಕ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ. ವಿದ್ಯಾರ್ಥಿಗಳಿಗೆ ಓದುವುದೇ, ಶಿಕ್ಷಕರಿಗೆ ಬೋಧನೆ ಮಾಡುವುದೇ ಕಾಯಕವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಓದುವ ಹಾಗೂ ಶಿಕ್ಷಕರು ಪರಿಣಾಮಕಾರಿಯಾಗಿ ಬೋಧನೆ ಮಾಡುವ ಕಾಯಕ ಮಾಡಿದರೆ, ಜೀವನದಲ್ಲಿ ನಾವು ಹಾಕಿಕೊಂಡಿರುವ ಗುರಿ ತಲುಪಲು ಸಾಧ್ಯವಾಗಲಿದೆ ಎಂದರು.
ಕೋಣ-ಕೋಣನಿಗೆ ಒಂದು ದಾರಿ, ಜಾಣ-ಕೋಣನಿಗೆ ಎರಡು ದಾರಿ, ಜಾಣ-ಜಾಣನಿಗೆ ಮೂರು ದಾರಿ ಎಂಬ ಮಾತಿದ್ದು, ಕೋಣ-ಕೋಣ ಪರಸ್ಪರ ಎದುರಾದರೆ, ಇಬ್ಬರೂ ದಾರಿ ಕೊಡದೇ ಗಲಾಟೆ ಮಾಡಿಕೊಳ್ಳುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಕೋಣ-ಕೋಣರಾಗದೇ, ಜಾಣ-ಕೋಣ ಹಾಗೂ ಜಾಣ-ಜಾಣರಾಗಿ ಮುನ್ನಡೆಯಬೇಕು.
ಈ ಸಂದರ್ಭದಲ್ಲಿ ಕಾಲೇಜಿನಿಂದ ಪದವೀಧರರಾಗಿ ಹೊರ ಹೊಮ್ಮಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ದಾವಣಗೆರೆ ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಹೆಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲೆ ಪ್ರತಿಭಾ ಪಿ.ದೊಗ್ಗಳ್ಳಿ ಉಪಸ್ಥಿತರಿದ್ದರು. ಕಾಲೇಜಿನ ಕಾರ್ಯದರ್ಶಿ ದೊಗ್ಗಳ್ಳಿಗೌಡ್ರ ಪುಟ್ಟರಾಜು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳಾದ ಶಬ್ಬೀರ್ ಮತ್ತು ಸೈಯದ್ ಪ್ರಾರ್ಥಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
