ಚಿತ್ರದುರ್ಗ,
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪುರ ಹಾಗೂ ಲಕ್ಷ್ಮೀಸಾಗರ ಕೆರೆಗಳ ಹೂಳು ತೆಗೆಯುವ ಕಾಮಗಾರಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಲಾಮೃತ ಯೋಜನೆ ನೀರಿನ ಸಂರಕ್ಷಣೆಯ ದೃಷ್ಟಿಯಲ್ಲಿ ಸರ್ಕಾರದ ಸದುದ್ದೇಶದ ಯೋಜನೆಯಾಗಿದ್ದು, ಯಾವುದೇ ಲೋಪವಾಗದಂತೆ ಗ್ರಾಮ ಪಂಚಾಯಿತಿ ಸಮಿತಿಯಡಿಯಲ್ಲಿ ರೈತರು ಕೆರೆಯಲ್ಲಿರುವ ಫಲವತ್ತಾದ ಮಣ್ಣನ್ನು ತಮ್ಮ ಜಮೀನುಗಳಿಗೆ ಸದ್ಭಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಜಲಾಮೃತ ಯೋಜನೆಯ ಅನುಷ್ಠಾನದ ಪ್ರಮುಖ ಅಂಶವಾದ ಜಲಮೂಲಗಳ ಪುನರುಜ್ಜೀವನ ಹಾಗೂ ನಿರ್ಮಾಣಕ್ಕೆ ಒತ್ತು ಕೊಡುವ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗಾಗಿ ಮೊದಲ ಹಂತವಾಗಿ ಜಿಲ್ಲೆಯ 31 ಕೆರೆಗಳನ್ನು ಗುರುತಿಸಲಾಗಿದೆ. ಗ್ರಾಮ ಪಂಚಾಯಿತಿ ಜಲಾಮೃತ ಸಮಿತಿಯ ಮೇಲ್ವಿಚಾರಣೆಯಲ್ಲಿ ನಡೆಯುವ ಕೆರೆ ಹೂಳೆತ್ತುವ ಮಣ್ಣನ್ನು ನಿಗದಿಪಡಿಸಿದ (ಟ್ರಾಕ್ಟರ್ ಒಂದಕ್ಕೆ 20 ರೂ ಮತ್ತು ಟ್ರಕ್ ಒಂದಕ್ಕೆ 30 ರಿಂದ 40 ರೂ..ಗಳು) ವಂತಿಕೆಯನ್ನು ಕಟ್ಟಿ ಸ್ವಂತ ಖರ್ಚಿನಲ್ಲಿ ತಮ್ಮ ಜಮೀನುಗಳಿಗೆ ಬಳಸಬಹುದಾಗಿದ್ದು, ರೈತರು ಅದರ ಸದುಪಯೋಗ ಪಡೆಯಬಹುದಾಗಿದೆ. ಅಲ್ಲದೆ ರೈತರು ನೀಡಿದ ವಂತಿಕೆ ಹಣವನ್ನು ಮುಂದೆ ಕೆರೆಯ ಅಭಿವೃದ್ಧಿಗೆ ಮೀಸಲಿಡಲಾಗುತ್ತದೆ ಎಂದು ಪಿಡಿಒ ಸಿ.ಎಲ್. ಬಸವರಾಜ್ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮ, ಜಿ.ಪಂ. ಸದಸ್ಯ ಆರ್. ಕೃಷ್ಣಮೂರ್ತಿ, ಜಿಲ್ಲಾ ಐಇಸಿ ಸಂಯೋಜಕ ಎಂ.ಎಸ್.ರವೀಂದ್ರನಾಥ್, ತಾಲ್ಲೂಕು ಪಂಚಾಯಿತಿ ಇಒ ಕೃಷ್ಣನಾಯ್ಕ್, ನರೇಗಾ ಸಹಾಯಕ ನಿರ್ದೇಶಕ ಪಿ.ಟಿ.ಧನಂಜಯ, ತಾಂತ್ರಿಕ ಸಹಾಯಕ ಪಿ.ಟಿ.ದಿನೇಶ್, ಕೆಂಚೇಗೌಡ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ