ನಾ ಮಂತ್ರಿ ಸ್ಥಾನ ಕೇಳಲ್ಲ, ಕೊಟ್ರೆ ನಿಭಾಯಿಸುವೆ

ದಾವಣಗೆರೆ:

      ನಾನಾಗಿಯೇ ಎಂದೂ ಮಂತ್ರಿ ಸ್ಥಾನ ಕೇಳಿಲ್ಲ, ಮುಂದೆಯೂ ಕೇಳಲ್ಲ. ನಮ್ಮ ವರಿಷ್ಠರು, ನಾಯಕರು ಕೊಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.

      ಗುರುವಾರ ಸಮೀಪದ ತೊಳಹುಣಸೆ ಬಳಿಯ ದಾವಣಗೆರೆ ವಿವಿ ಆವರಣದಲ್ಲಿ ನಡೆದ ಮತ ಎಣಿಕೆಯ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಿಂದೆಯೂ ಸಚಿವ ಸ್ಥಾನ ಕೇಳಿರಲಿಲ್ಲ, ಈಗಲೂ ಕೇಳಲ್ಲ. ಆದರೆ, ನಮ್ಮ ನಾಯಕರು ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

      ನಾನು, ಸೇರಿದಂತೆ ನಮ್ಮ ನಾಯಕರು ಮೊದಲೇ ತಿಳಿಸಿದ್ದಂತೆ ಬಿಜೆಪಿ ನೇತೃತ್ವದ ಎನ್‍ಡಿಎ ಕೂಟ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದೆ. ನರೇಂದ್ರಮೋದಿಯವರು ಪ್ರಧಾನಿಯಾಗಿ 5 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದಾರೆ. ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದೇನೆ. ಜನ ನನ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದರು.

ನನ್ನ ಕೊನೆ ಚುನಾವಣೆ:

     ಇನ್ನೂ ಗೆಲುವು ಸಾಧಿಸಿದ ನಂತರದಲ್ಲಿ ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಸಿದ್ದೇಶ್ವರ್, ಚುನಾವಣಾ ಪೂರ್ವದಲ್ಲಿ ಹೇಳಿದಂತೆ, ಇದೇ ನನ್ನ ಕೊನೆಯ ಚುನಾವಣೆ ಆಗಿದೆ. ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಆದರೆ, ಪಕ್ಷದಲ್ಲಿದ್ದು ಸಕ್ರಿಯ ರಾಜಕಾರಣದಲ್ಲಿ ಇರುವ ಮೂಲಕ ಪಕ್ಷದ ಸಂಘಟನೆಯಲ್ಲಿ ತೊಡಗುತ್ತೇನೆ. ಜಿಲ್ಲೆಯಲ್ಲಿ ಸಧ್ಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಆಸೆ ಇದೆ ಎಂದರು.

     ನನ್ನ ಹಿಂದಿನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಈಗ ನೀಡಿರುವ 5 ವರ್ಷದ ಅವಧಿಯಲ್ಲಿ ಜನರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಕೆರೆ ಕಟ್ಟೆಗಳ ನಿರ್ಮಾಣ, ಅವುಗಳಿಗೆ ನೀರು ತುಂಬಿಸುವುದು, ಶಿಕ್ಷಣ, ಯುವಕರಿಗೆ ಉದ್ಯೋಗ ದೊರಕಿಸುವುದು ಸೇರಿದಂತೆ ಮೊದಲಾದ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ನನ್ನ ಈ ಗೆಲುವಿನಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷರು, ಶಾಸಕರು, ಕಾರ್ಯಕರ್ತರು ಸೇರಿದಂತೆ ಹಲವಾರು ಮುಖಂಡರು ಶ್ರಮಿಸಿದ್ದಾರೆ. ಇವರಿಗೆ ಹಾಗೂ 1.70 ಸಾವಿರ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ ಮತದಾರರನ್ನು ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

      ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶ್ರಮ, ಅಭಿವೃದ್ಧಿ ಕಾರ್ಯಗಳು ಕಾರಣ. ಯಡಿಯೂರಪ್ಪ ಅವರು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸುತ್ತಾಡಿದರು. ಅವರು 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಾಗಿ ಹೇಳಿದ್ದರು. ಅವರ ನಿರೀಕ್ಷೇಗೂ ಮೀರಿ ಗೆಲುವು ಸಾಧಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap