‘ತುರ್ತು ಪರಿಸ್ಥಿತಿ ಪ್ಲಸ್ ‘ ಜಾರಿಗೊಳಿಸಿದ್ದಾರೆ : ಯೋಗೇಂದ್ರ ಯಾದವ್

ಬೆಂಗಳೂರು

           ದೇಶದ ಎಲ್ಲ ಕಂಪ್ಯೂಟರ್ ಗಳ ಮಾಹಿತಿ ಮೇಲೆ ಕಣ್ಗಾವಲು ಇರಿಸಲು 10 ಸಂಸ್ಥೆಗಳಿಗೆ ಅಧಿಕಾರಿ ನೀಡಿರುವ ಕೇಂದ್ರ ಸರ್ಕಾರದ ಕ್ರಮದಿಂದ ದೇಶದಲ್ಲಿ ತುರ್ತು ಪರಿಸ್ಥಿತಿಗೂ ಮೀರಿದ ಸ್ಥಿತಿ ಎದುರಾಗಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಸಂಸ್ಥಾಪಕ ಯೋಗೇಂದ್ರ ಯಾದವ್ ಹೇಳಿದ್ದಾರೆ.

          ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದ ಪ್ರೇರಣೆ ಪಡೆದಿರುವ ಮೋದಿ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ತುರ್ತು ಪರಿಸ್ಥಿತಿ ಪ್ಲಸ್ ‘ ಜಾರಿಗೊಳಿಸಿದ್ದಾರೆ ಎಂದು ಅವರು ಆರೋಪಿಸಿದರು.

            ದೇಶದ ಕಂಪ್ಯೂಟರ್ ಚಟುವಟಿಕೆಗಳ ಮೇಲೆ ನಿಗಾ ಇಡಲು 10 ಸಂಸ್ಥೆಗಳಿಗೆ ಅನುಮತಿ ನೀಡಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ ಇನ್ನೂ ಹೆಚ್ಚಿನ ಸಂಸ್ಥೆಗಳಿಗೆ ಈ ಜವಾಬ್ದಾರಿ ನೀಡಿರಬಹುದು. ನಮ್ಮ ಗಮನಕ್ಕೆ ಬಂದಿಲ್ಲವಷ್ಟೇ. ಇದು ಅಧಿಕಾರದ ದುರ್ಬಳಕೆಯಲ್ಲದೆ ಮತ್ತೇನು ಆಲ್ಲ ಎಂದು ಟೀಕಿಸಿದರು.

           ದೇಶದ ಯಾವುದೇ ಕಂಪ್ಯೂಟರ್ ನ ಮಾಹಿತಿಯ ಮೇಲೆ ಸಂಪೂರ್ಣ ಕಣ್ಗಾವಲು ಇರಿಸುವ ಮುಕ್ತ ಅಧಿಕಾರವನ್ನು ಐಬಿ, ರಾ ಹಾಗೂ ಸಿಬಿಐ ಸೇರಿ 10 ಸಂಸ್ಥೆಗಳಿಗೆ ನೀಡುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಗುರುವಾರ ತಡರಾತ್ರಿ ಪ್ರಕಟಿಸಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ರಲ್ಲಿನ ಮಾಹಿತಿ ತಂತ್ರಜ್ಞಾನ (ಮಧ್ಯ ಪ್ರವೇಶ, ನಿಗಾ ಹಾಗೂ ಸುರಕ್ಷತೆ) ನಿಯಮಗಳ ಅನ್ವಯ ಈ ಆದೇಶ ಹೊರಡಿಸಲಾಗಿದೆ.

          ಇದರ ಪ್ರಕಾರ, ಎಲ್ಲರೂ ತಮ್ಮ ಕಂಪ್ಯೂಟರ್ ನ ಮಾಹಿತಿಯನ್ನು ಈ ಹತ್ತು ಸಂಸ್ಥೆಗಳಿಗೆ ನೀಡಲು ಬದ್ಧರಾಗಿರಬೇಕು. ಸಹಕರಿಸದವರಿಗೆ 7 ವರ್ಷಗಳ ಸಜೆ ಹಾಗೂ ದಂಡ ವಿಧಿಸಲು ಅಧಿಸೂಚನೆ ಅವಕಾಶ ಕಲ್ಪಿಸಿದೆ. ಈ ಕುರಿತು ಪ್ರತಿ ಪಕ್ಷಗಳಿಂದ ಭಾರಿ ಟೀಕೆ ವ್ಯಕ್ತವಾಗಿದೆ.

          ಮಹಾರಾಷ್ಟ್ರದಲ್ಲಿ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ 2019ರ ಜನವರಿ 30ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಮುಂದಾಗಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಬಾಹ್ಯ ಬೆಂಬಲ ನೀಡುವುದಾಗಿ ಯೋಗೇಂದ್ರ ಯಾದವ್ ಹೇಳಿದರು.

         ಅಣ್ಣಾ ಹಜಾರೆ ಅವರ ಸತ್ಯಾಗ್ರಹಕ್ಕೆ ಯಾವಾಗಲೂ ನಮ್ಮ ಬೆಂಬಲವಿದೆ. ಆದರೆ, ಸತ್ಯಾಗ್ರಹಕ್ಕೆ ಯಾವುದೇ ರಾಜಕೀಯ ಪಕ್ಷದ ಬೆಂಬಲದ ಅಗತ್ಯವಿಲ್ಲ ಎಂದು ಅಣ್ಣಾ ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ನಮ್ಮದು ರಾಜಕೀಯ ಪಕ್ಷವಾಗಿರುವುದರಿಂದ ಕೇವಲ ಬಾಹ್ಯ ಬೆಂಬಲ ನೀಡುತ್ತೇವೆ ಎಂದರು.

           ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ದೇಶದ ದಾರಿ ತಪ್ಪಿಸುತ್ತಿದೆ. ಲೋಕಪಾಲ ಮಸೂದೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿ, ಇಲ್ಲಿಯವರೆಗೆ ಲೋಕಪಾಲರ ಆಯ್ಕೆ ಸಮಿತಿ ಕೂಡ ರಚಿಸಿಲ್ಲ. ಅಧಿಕೃತ ವಿಪಕ್ಷ ನಾಯಕರಿಲ್ಲದ ಕಾರಣ ವಿಳಂಬವಾಗುತ್ತಿದೆ ಎಂಬ ಕಾರಣ ನೀಡುತ್ತಿದೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದ್ದರೆ, ಕಾಯ್ದೆಗೆ ತಿದ್ದುಪಡಿ ತರುವುದು ಐದು ನಿಮಿಷದ ಕೆಲಸವಷ್ಟೆ. ಸುಪ್ರೀಂಕೋರ್ಟ್ ಕೂಡ ಇದಕ್ಕೆ ಅನುಮತಿ ನೀಡಿದೆ. ಇಷ್ಟಾದರೂ, ಇಲ್ಲಿಯವರೆಗೆ ಯಾವುದೇ ಬೆಳವಣಿಗೆಯಾಗಿಲ್ಲ ಎಂದು ಆರೋಪಿಸಿದರು.

             ಈ ಹಿಂದೆ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದಿಂದ ಬೇಸತ್ತ ಜನರು ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಆದರೆ, ಬಿಜೆಪಿ ಪಕ್ಷ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಿ, ಉತ್ತಮ ಅಧಿಕಾರಗಳ ಮೇಲೆ ಕ್ರಮ ಕೈಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ಕೂಡ ಹೋರಾಟ ಆರಂಭಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap