ಖಾಸಗೀಕರಣದ ವಿರುದ್ಧ ಧನಿ ಎತ್ತಲು ಇದು ಸಕಾಲ : ಮೇಧಾ ಪಾಟ್ಕರ್

ಬೆಂಗಳೂರು

     ದೇಶ ಆರ್ಥಿಕ ಸಂಕಷ್ಟ ಎದುರಾಗಿದ್ದು ಸಾರ್ವಜನಿಕ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಇಲ್ಲವೇ ಮುಚ್ಚುವ ಹುನ್ನಾರ ನಡೆದಿದ್ದು ಬಿಎಸ್‌ಎನ್‌ಎಲ್ ಸೇರಿ ಸಾರ್ವಜನಿಕ ಉದ್ದಿಮೆಗಳನ್ನು ಒಂದೊಂದಾಗಿ ಖಾಸಗೀಕರಣಗೊಳಿಸುವ ಪ್ರಯತ್ನಗಳ ವಿರುದ್ಧ ಒಗ್ಗೂಡಿ ಹೋರಾಟ ನಡೆಸಬೇಕಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾಪಾಟ್ಕರ್ ಅವರು ಕರೆ ನೀಡಿದ್ದಾರೆ.

     ಕೆನರಾಬ್ಯಾಂಕ್‌ನ ಸ್ಟಾಫ್ ಫೆಡರೇಷನ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಾರ್ವಜನಿಕ ಬ್ಯಾಂಕ್‌ಗಳು ಸಂಕಷ್ಟದಲ್ಲಿದೆ ಸಂವಿಧಾನಕ್ಕೆ ಎದುರಾಗಿರುವ ಅಪಾಯ ಬ್ಯಾಂಕುಗಳಿಗೂ ಎದುರಾಗಿದೆ. ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿದ್ದು, ಕಾರ್ಮಿಕರು ಬೀದಿ ಪಾಲಾಗುವ ಪರಿಸ್ಥಿತಿ ಇದೆ ಎಂದರು.

     ಪ್ರಧಾನಿ ನರೇಂದ್ರಮೋದಿ ಅವರು ‘ಸಬ್ ಕೆ ಸಾಥ್ ಸಬ್ ಕೆ ವಿಕಾಸ್’ ಎಂದು ಹೇಳುತ್ತಾರೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿ ಬ್ಯಾಂಕುಗಳನ್ನು ಮುಚ್ಚಿ ಕಾರ್ಮಿಕರು ಬೀದಿ ಪಾಲಾದರೆ ಸಬ್ ಕೆ ವಿಕಾಸ್ ಎಲ್ಲಿ ಸಾಧ್ಯವಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ. ದೇಶದಲ್ಲಿ ಆರ್ಥಿಕ ಸಂಘರ್ಷ ಮಾತ್ರವಲ್ಲ, ಸಾಮಾಜಿಕ, ರಾಜಕೀಯ ಸಂಘರ್ಷಗಳು ಹೆಚ್ಚಿವೆ. ದಿನೇ ದಿನೇ ಹೊಸ ಸಮಸ್ಯೆಗಳು ಸೃಷ್ಠಿಯಾಗುತ್ತಿವೆ ಎಂದರು.

     ಪ್ರಧಾನಿ ನರೇಂದ್ರಮೋದಿ ಅವರು ಜನಸಾಮಾನ್ಯರು ಹಾಗೂ ಬಡವರ ಬಗ್ಗೆ ಚಿಂತಿಸುತ್ತಿಲ್ಲ. ಯುವ ಜನರಿಗೆ ಉದ್ಯೋಗ ಕೊಡುವ ಬಗ್ಗೆಯೂ ಗಮನ ಹರಿಸಿಲ್ಲ. ಬರೀ ಸುಳ್ಳುಗಳನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಕಪ್ಪು ಹಣ ಎಲ್ಲಿ

     ನೋಟು ಅಮಾನ್ಯಗೊಳಿಸಿ ಕಪ್ಪು ಹಣವನ್ನು ವಾಪಸ್ ತರುತ್ತೇವೆ ಎಂದಿದ್ದರು. ಅದೂ ಆಗಲಿಲ್ಲ. ನೋಟು ಅಮಾನ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದು ಶ್ರೀಸಾಮಾನ್ಯ. ಅದರಲ್ಲೂ ಆದಿವಾಸಿಗಳಂತೂ ನೋಟು ಅಮಾನ್ಯದಿಂದ ಸಾಕಷ್ಟು ಸಂಕಷ್ಟಕ್ಕೆ ಈಡಾದರು ಎಂದರು.ದೇಶದಲ್ಲಿ ರೈತರ ಆತ್ಮಹತ್ಯೆಗಳು ನಡೆದೇ ಇದೆ. ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಅವರ ಬದುಕು ಸುಧಾರಿಸುವ ಕೆಲಸ ಆಗಿಲ್ಲ. ಕೇಂದ್ರ ಸರ್ಕಾರ ಹುಸಿ ಭರವಸೆ ನೀಡುತ್ತಿದೆ ಎಂದು ಟೀಕಿಸಿದರು.

    ಕೇಂದ್ರ ಸರ್ಕಾರದ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಮೇಧಾ ಪಾಟ್ಕರ್ ಹೇಳಿದರು. ಈ ವಿಚಾರ ಸಂಕಿರಣದಲ್ಲಿ ಖ್ಯಾತ ಸಾಹಿತಿ ದೇವನೂರು ಮಹದೇವ, ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್, ಭಗವಂತ್ ಮನ್ನ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap