ರೈತರಿಂದ ಗ್ರಾಹಕರವರೆಗೆ ಹೊಸ ವ್ಯವಸ್ಥೆ ಮಾಡಲು ಇದು ಸುಸಂದರ್ಭ: ಹೆಚ್ ಡಿ ಕುಮಾರ ಸ್ವಾಮಿ

ಬೆಂಗಳೂರು:

    ಕೊರೊನಾ ವೈರಸ್ ರೋಗ ತಡೆಗೆ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಸ್ವಯಂಸೇವಕರು, ಸಂಘಸಂಸ್ಥೆಗಳು, ಅಧಿಕಾರಿಗಳ ಸಮಿತಿ ರಚನೆಯಾಗಬೇಕು. ಇದೇ ರೀತಿ ಹಾಪ್ ಕಾಮ್ಸ್, ಕೆಎಂಎಫ್ ಸೇರಿದಂತೆ ಸ್ವಯಂ ಸೇವಕರ ಗುಂಪುಗಳನ್ನು ಬಳಸಿಕೊಂಡು ರೈತರಿಂದ ಉತ್ಪನ್ನಗಳನ್ನು ಸರ್ಕಾರವೇ ಮುಂದೆ ನಿಂತು ಖರೀದಿಸಿ, ನಂತರ ಮಾರಾಟ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸರ್ಕಾರ ರೈತರ ಉತ್ಪನ್ನ ಖರೀದಿಗೆ ಶೀಘ್ರವೇ ವ್ಯವಸ್ಥೆ ಮಾಡುವ ಅನಿವಾರ್ಯತೆ ಎದುರಾಗಿದೆ. ಇಲ್ಲದೇ ಹೋದರೆ ಕೃಷಿ ವಲಯ ತೊಂದರೆಗೀಡಾಗುತ್ತದೆ. ಅದರ ಪರಿಣಾಮಗಳು ಭೀಕರ. ಇದು ಕುಟುಂಬಗಳನ್ನು ಆಪೋಷನ ತೆಗೆದುಕೊಳ್ಳುವ ಜೊತೆಗೆ, ಆರ್ಥಿಕತೆಗೆ ತೀವ್ರ ಪೆಟ್ಟು ನೀಡುತ್ತದೆ. ಅದನ್ನು ನೆನೆದು ನನಗಂತೂ ಆತಂಕವಾಗಿದೆ ಎಂದು ತಿಳಿಸಿದ್ದಾರೆ.

    ಹಲವು ರೈತರು, ಕೃಷಿ ಉತ್ಪನ್ನ ಮಾರಾಟಗಾರರು ಈಗಾಗಲೆ ತಮ್ಮ ಪರಿಧಿಯಲ್ಲೇ ಸಾಗಾಟ, ವ್ಯಾಪಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಉತ್ಪನ್ನ ಸಾಗಿಸುವಾಗ ತಡೆಯುವ, ಅವರಿಂದ ದುಡ್ಡು ಕೇಳುತ್ತಿರುವ ಕುರಿತು ನನಗೆ ಮಾಹಿತಿ ಇದೆ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಸರ್ಕಾರ ನಿರ್ಬಂಧ ಹೇರಬಾರದು. ಇದು ರೈತರ ಬದುಕಿನ, ಜನರ ಆಹಾರದ ಪ್ರಶ್ನೆಯಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

    ರೈತರಿಂದ ನೇರವಾಗಿ ಖರೀದಿಸಿದ ಉತ್ಪನ್ನಗಳನ್ನು, ನಗರ ವಾರ್ಡ್ ಮಟ್ಟದಲ್ಲಿ ವಿತರಣೆ ಮಾಡಲು ವ್ಯವಸ್ಥೆ ಮಾಡಬೇಕು. ಮಾಲ್ ಗಳನ್ನೂ ಮೀರಿ ಸಾರ್ವಜನಿಕ ಅಗತ್ಯಗಳನ್ನು ಪೂರೈಸುತ್ತಿರುವುದು ಸಣ್ಣ ಪುಟ್ಟ ಅಂಗಡಿಗಳು.ರೈತರ ಉತ್ಪನ್ನಗಳನ್ನು ನೇರವಾಗಿ ಇಂತಹ ಅಂಗಡಿಗಳಿಗೆ ತಲುಪಿಸಲು ವ್ಯವಸ್ಥೆಯೊಂದನ್ನು ಸರ್ಕಾರ ಕೂಡಲೇ ಸೃಷ್ಟಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap