ತೋಂಟದಾರ್ಯ ಮಠದ ಶ್ರೀಗಳು ಲಿಂಗೈಕ್ಯ

ಬೆಂಗಳೂರು:

     ಅನ್ನ ಮತ್ತು ಅಕ್ಷರ ದಾಸೋಹದ ಮೂಲಕ ನಾಡಿನೆಲ್ಲೆಡೆ ಮನೆಮಾತಾಗಿದ್ದ ಗದಗಿನ ತೋಂಟದಾರ್ಯ ಸ್ವಾಮೀಜಿ ಇಂದು ವಿಧಿವಶರಾಗಿದ್ದಾರೆ. ಗದಗದ ಖಾಸಗಿ ಆಸ್ಪತ್ರೆಯಲ್ಲಿ ಅವರು ಇಹಲೋಕ ತ್ಯಜಿಸಿದ್ದು, ಸ್ವಾಮೀಜಿ ಅವರಿಗೆ 71 ವರ್ಷ ವಯಸ್ಸಾಗಿತ್ತು.

       ಇಂದು ಬೆಳಗಿನಜಾವ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಗತಿಪರ ಚಿಂತಕರಾಗಿದ್ದ ತೋಂಟದಾರ್ಯ ಸ್ವಾಮೀಜಿ ಅವರು, ಲೇಖಕರಾಗಿ ನೂರಾರು ಚಿಂತನಶೀಲ ಕೃತಿಗಳನ್ನು ರಚಿಸಿದ್ದರು. ಪರಿಸರ ಪ್ರೇಮಿಯೂ ಆಗಿದ್ದ ಅವರು, ನಾಡಿನ ಜ್ವಲಂತ ಸಮಸ್ಯೆಗಳಿಗೆ ಪ್ರಗತಿಪರವಾಗಿ ಸ್ಪಂದಿಸುತ್ತಿದ್ದರು. ಶ್ರೀಗಳ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಾಳೆ ನಡೆಯಲಿದೆ.

      ತೋಂಟದಾರ್ಯಮಠದ 14ನೇ ಪೀಠಾಧೀಪತಿಗಳಾಗಿ ಶ್ರೀಗಳು ಪೀಠವನ್ನು ಅಲಂಕರಿಸಿದ್ದರು.ಪ್ರಗತಿಪರ ಮಠಾಧಿಶರಾಗಿ ಸಮಾಜಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದ ಶ್ರೀಗಳು1975ರಲ್ಲಿಯೇ ಅಡ್ಡಪಲ್ಲಕ್ಕಿಯನ್ನು ತ್ಯಜಿಸಿದ್ದರು. ಕೆಳದಿ ಅರಸರು ಭಕ್ತಿಯಿಂದ ನೀಡಿದ್ದ ಅಡ್ಡಪಲ್ಲಕ್ಕಿಯನ್ನು ತ್ಯಜಿಸಿ ಪ್ರಗತಿಪರ ಮಠಾಧೀಶರೆನಿಸಿಕೊಂಡಿದ್ದರು.

       ವಿಶೇಷ ಅಂದ್ರೆ ಜಾತ್ರೆ ಮತ್ತು ಉತ್ಸವಗಳಲ್ಲಿ ಸ್ವಾಮೀಜಿಗಳು ಅಡ್ಡಪಲ್ಲಕಿ ಬಳಸದೆ ಅದರಲ್ಲಿ ಬಸವಣ್ಣನ ವಚನಗಳನ್ನಿಟ್ಟು ಪೂಜಿಸಿ ಸಾಮಾನ್ಯರಂತೆ ನಡೆದುಕೊಂಡು ಬರುತ್ತಿದ್ದರು.ಅಲ್ಲದೆ ಸರ್ವಧರ್ಮ ಸಹಿಷ್ಣುಗಳಾಗಿದ್ದ ಇವರಿಗೆ ಭಾರತ ಸರ್ಕಾರ ರಾಷ್ಟ್ರೀಯ ಏಕತಾ ಪ್ರಶಸ್ತಿ ನೀಡಿ ಗೌರವಿಸಿದೆ.

       ವಿಶ್ವಗುರು ಬಸವಣ್ಣನ ತತ್ವವೇ ಈಮಠದ ಮೂಲ ಮಂತ್ರ. ಉತ್ತರ ಕರ್ನಾಟಕ ಪ್ರಸಿದ್ಧ ಮಠಗಳಲ್ಲಿ ಒಂದಾದ ಗದಗನತೋಂಟ ದಾರ್ಯ ಮಠಕ್ಕೆ ಸರ್ವಧರ್ಮಿಯರು ಭಕ್ತರಾಗಿದ್ದಾರೆಂಬುದು ವಿಶೇಷ.ಬಸವತತ್ವದಂತೇ ಎಲ್ಲರನ್ನು ಒಂದಾಗಿ ಕಾಣುವ ಪರಂಪರೆ ಹೊಂದಿರುವ ಮಠವು ಎಲ್ಲ ಧರ್ಮದ ಭಕ್ತವೃಂದವನ್ನು ಹೊಂದಿದೆ.

ಅಲ್ಲದೆ ಸದ್ದಿಲ್ಲದೆ ಸಮಾಜದ ಏಕತೆಗೆ ಕೆಲಸ ಮಾಡುತ್ತಿರುವ ಈ ಮಠ ಇನ್ನೂ ಹಲವು ವಿಶೇಷತೆಗಳಿಗೆ ಹೆಸರು ವಾಸಿಯಾಗಿದೆ. ಪ್ರತಿನಿತ್ಯ ದಾಸೋಹ, ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಅಕ್ಷರ ಜ್ಞಾನವನ್ನು ಎಲ್ಲರಿಗೂ ಧಾರೆ ಎರೆಯುತ್ತಿದೆ.

     ಸ್ವಾಮೀಜಿ ನಿಧನದಿಂದ ಬಹಳ ದೊಡ್ಡ ಆಘಾತ- ಶ್ರೀಗಳ ಅಗಲಿಕೆಗೆ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯಾದ್ಯಂತ ಹಲವು ಗಣ್ಯರು ಸಂತಾಪ ಸೂಚಿಸಿ, ಕಂಬನಿ ಮಿಡಿದಿದ್ದಾರೆ.

      ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ಸಂತಾಪ ಸೂಚಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ,ಸ್ವಾಮೀಜಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಭಗವಂತ ಕರುಣಿಸಲಿ ಎಂದರು.

     ಧಾರವಾಡದಲ್ಲಿ ಸಚಿವ ಆರ್.ವಿ. ದೇಶಪಾಂಡೆ,ಮಾಜಿ ವಿನಯ್ ಕುಲಕರ್ಣಿ ಸುದ್ದಿಗಾರರೊಂದಿಗೆ ಮಾತನಾಡಿ,ಸ್ವಾಮೀಜಿಗಳ ನಿಧನದಿಂದ ಬಹಳ ದೊಡ್ಡ ಆಘಾತವಾಗಿದೆ. ಅವರಿಂದ ಸಮಾಜದ ಹಲವಾರು ಒಳ್ಳೆಯ ಕೆಲಸಗಳಾಗಿವೆ. ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

       ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಸಂತಾಪ ಸೂಚಿಸಿ, ಗದಗಿನ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಅಪ್ಪಟ ಬಸವಾಭಿಮಾನಿಗಳು.ಇದೀಗ ಅವರು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.ಅವರು ನಮ್ಮನ್ನ ಅಗಲಿರುವುದು ನಮ್ಮೆಲ್ಲರಿಗೂ ತೀವ್ರವಾದ ಆಘಾತವನ್ನುಂಟು ಮಾಡಿದೆ. ಬಸವಣ್ಣ ಅವರ ತತ್ವ, ಸಿದ್ಧಾಂತಗಳನ್ನು ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ನನ್ನ ಜೊತೆ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದರು ಎಂದು ಹೇಳಿದ್ದಾರೆ.

      ಚಾಮರಾಜನಗರದಲ್ಲಿ ಎನ್.ಮಹೇಶ್ ಕಂಬನಿ ಮಿಡಿದಿದ್ದು, ಗದಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಶ್ರೀಗಳನ್ನು ಭೇಟಿ ಮಾಡಿ 1 ತಾಸಿಗೂ ಹೆಚ್ಚು ಕಾಲ ಮಾತನಾಡಿದ್ದೆ ಎಂದು ತಿಳಿಸಿದರು.

       ತೋಂಟದಾರ್ಯ ಶ್ರೀಗಳ ಸಾವು ಸಹಜವಾದದ್ದು ಎಂದು ನಗರದಲ್ಲಿ ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಾನಂದ ಶ್ರೀಗಳು ಹೇಳಿದ್ದಾರೆ.ಶ್ರೀಗಳ ವಿಧಿವಶ ಸುದ್ದಿ ಕೇಳಿ ಕಣ್ಣೀರಿಟ್ಟ ಶ್ರೀಗಳು, ಅವರಿಗೆ ಯಾವುದೇ ಕಾಯಿಲೆ ಇರಲಿಲ್ಲ. ಕನ್ನಡನಾಡಿನ ದೊಡ್ಡ ಶಕ್ತಿ ಹೋದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾಳೆ ತೋಂಟದಾರ್ಯ ಮಠದ ಆವರಣದಲ್ಲಿ ಅಂತ್ಯ ಸಂಸ್ಕಾರ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿಯೂ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap