ದಾವಣಗೆರೆ:
ದಾವಣಗೆರೆ, ಚಿತ್ರದುರ್ಗ ಅವಳಿ ಜಿಲ್ಲೆಗಳ ಮೂವರು ಕೊರೋನಾ ವೈರಸ್ ಸೋಂಕಿತರ ಗಂಟಲಿನ ದ್ರಾವಣದ ಮಾದರಿಯನ್ನು ಶಿವಮೊಗ್ಗ ಲ್ಯಾಬ್‍ಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಈ ಲ್ಯಾಬ್ ಪರೀಕ್ಷೆಯಲ್ಲಿ ಪ್ರಾಥಮಿಕ ವರದಿಯಲ್ಲಿ ಮೂವರು ಸೋಂಕಿತರ ಮಾದರಿ ನೆಗೆಟಿವ್ ಎಂಬುದಾಗಿ ಬಂದಿದ್ದು, ಈ ಮೂವರೂ ಚಿಕಿತ್ಸೆಗೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಶನಿವಾರ ನಗರದ ಜಿಲ್ಲಾಡಳಿತ ಭವನದಲ್ಲಿ ತಮ್ಮ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಮಾಹಿತಿ ಹಂಚಿಕೊಂಡ ಜಿಲ್ಲಾಧಿಕಾರಿಗಳು, ಮೂವರೂ ಸೋಂಕಿತರ ಪ್ರಾಥಮಿಕ ವರದಿ ನೆಗೆಟಿವ್ ಬಂದಿದ್ದು, ಮತ್ತೊಮ್ಮೆ ಗಂಟಲು ದ್ರವದ ಸ್ಯಾಂಪಲ್ ಸಂಗ್ರಹಿಸಿ, ಪುಣೆ ಲ್ಯಾಬ್‍ಗೆ ಪರೀಕ್ಷೆಗೆ ಕಳುಹಿಸಿದ್ದು, ಇದರ ವರದಿಗಾಗಿ ಕಾಯುತ್ತಿದ್ದೇವೆ ಎಂದರು.
ಸೋಂಕಿತರ ಚಿಕಿತ್ಸಾ ಅವಧಿಯ ಪ್ರಾಥಮಿಕ ಹಂತದ ಗಂಟಲು ಮಾದರಿ ಪರೀಕ್ಷೆಯಲ್ಲಿ ಚಿತ್ರದುರ್ಗದ ಓರ್ವ ಮಹಿಳೆ ಸೇರಿ ಇಬ್ಬರು, ದಾವಣಗೆರೆಯ ಓರ್ವ ಸೇರಿದಂತೆ ಮೂವರ ಪ್ರಾಥಮಿಕ ಹಂತದ ಗಂಟಲು ದ್ರವದ ಮಾದರಿ ಪರೀಕ್ಷೆಲ್ಲಿ ಮೂವರ ವರದಿಯಲ್ಲೂ ನೆಗೆಟಿವ್ ಬಂದಿದೆ. ಮತ್ತೊಂದು ವರದಿಗೆ ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.
ಕೊರೋನಾ ವೈರಸ್ ತಡೆಗಟ್ಟಲು, ಲಾಕ್ ಡೌನ್ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಮುಂಜಾಗ್ರತೆ, ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ನಿನ್ನೆ ನಡೆದ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ, ಇಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಶ್ಲಾಘಿಸಿದ್ದಾರೆ ಎಂದು ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಕೊರೋನಾ ಸೋಂಕು ನಿಯಂತ್ರಣ ಕ್ರಮವಾಗಿ ಪ್ರಧಾನಿ ಲಾಕ್‍ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪರಿಣಾಮಕಾರಿಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಲೇ ಬರುತ್ತಿದೆ. ಪರಿಣಾಮ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಸಾಕಷ್ಟು ಯಶಸ್ವಿಯಾಗುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಲಾಕ್ ಡೌನ್ ವೇಳೆ ಅನಗತ್ಯವಾಗಿ ರಸ್ತೆಗಿಳಿಸುವ, ಸಂಚರಿಸುವವರ ವಿರುದ್ಧವೂ ಕಠಿಣ ಕ್ರಮ ಮುಂದುವರಿ ಯುತ್ತಿದೆ ಎಂದರು.ನಗರದ ಹೊರ ವಲಯದ ಶಾಮನೂರು ಸಮೀಪದ ಕೋಳಿ ಫಾರಂನಲ್ಲಿ ಕೋಳಿಗಳು ಬಿಸಿಲಿನ ತಾಪಕ್ಕೆ ಸತ್ತಿವೆಯೋ ಅಥವಾ ಬೇರಾವ ಕಾರಣಕ್ಕೆ ಎಂಬ ಬಗ್ಗೆ ಭೂಪಾಲ್‍ನ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳಿಸಿದ್ದು, ಇನ್ನೂ ವರದಿ ಬಂದಿಲ್ಲ. ಕೋಳಿಗಳ ಸಾವಿನ ಬಗ್ಗೆ ಲ್ಯಾಬ್‍ನ ವರದಿ ಬಂದ ನಂತರವಷ್ಟೇ ಸಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು.
ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೋಳಿ ಸಾಕಾಣಿಕೆ, ಮಾರಾಟ ನಿಷೇಧವು ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.ಬನ್ನಿಕೋಡು ಸುತ್ತಮುತ್ತಲ ಪ್ರದೇಶ ಹೊರತುಪಡಿಸಿ ಕೋಳಿ ಮಾಂಸ, ಮೊಟ್ಟೆ ಮಾರಾಟ, ಸಾಗಾಣಿಕೆಗೆ ಉಳಿದೆಡೆಯ ನಿಷೇಧ ತೆರವು ಮಾಡಲು ಉದ್ದೇಶಿಸಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ