ವಿದೇಶಿ ದೇಣಿಗೆ ರೂಪದಲ್ಲಿ ನಾಮ ಹಾಕಿದ ಮೂವರು..!

ಬೆಂಗಳೂರು

    ಬಡವರಿಗೆ ದಾನ ಮಾಡಲು ಬಟ್ಟೆ, ಲ್ಯಾಪ್‌ಟಾಪ್, ಪುಸ್ತಕ, ಶೂ ಇನ್ನಿತರ ಅಗತ್ಯ ವಸ್ತುಗಳನ್ನು ಕೆನಡಾದಿಂದ ಕಳುಹಿಸುವ ಸೋಗಿನಲ್ಲಿ ಕೋಲಾರ ಮೂಲದ ವ್ಯಕ್ತಿಯೊಬ್ಬರಿಂದ 3.3 ಲಕ್ಷ ರೂ. ಪಡೆದು ವಂಚಿಸಿರುವ ಸೈಬರ್ ಕಳ್ಳರಿಗಾಗಿ ನಗರ ಪೊಲೀಸರು ಶೋಧ ನಡೆಸಿದ್ದಾರೆ.

   ಕೋಲಾರ ಸಮೀಪದ ಹುಗರಿಯ ಎಂ. ಶ್ರೀನಿವಾಸ್ (44)ಅವರನ್ನು ವಂಚನೆ ನಡೆಸಿರುವ ಆರೋಪಿಗಳಾದ ಡೊನಾಲ್ಡ್ ವಾಟ್ಸನ್, ಅನಿತಾ ಮತ್ತು ಜೇಮ್ಸ್ ಪತ್ತೆಗಾಗಿ ಬಾಣಸವಾಡಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.ಜ.6ರಂದು ಫೇಸ್‌ಬುಕ್‌ನಲ್ಲಿ ಶ್ರೀನಿವಾಸ್‌ಗೆ ಪರಿಚಯವಾದ ಡೊನಾಲ್ಡ್, ಭಾರತದಲ್ಲಿ ಹೆಚ್ಚಿನ ಬಡವರಿದ್ದು. ಅಮೆರಿಕದಿಂದ ಬಟ್ಟೆ, ಆಹಾರ ಪದಾರ್ಥ, ಶೂ, ಪುಸ್ತಕ, ಲ್ಯಾಪ್‌ಟಾಪ್, ಕೀ ಬೋರ್ಡ್ ಇತ್ಯಾದಿ ಸಾಮಗ್ರಿಗಳನ್ನು ಉಚಿತವಾಗಿ ಕಳುಹಿಸಲಿದ್ದು ಅದನ್ನು ವಿತರಣೆ ಮಾಡುವಂತೆ ಮನವಿ ಮಾಡಿದ್ದ.

   ಅದಕ್ಕೆ ಒಪ್ಪಿಕೊಂಡು ಶ್ರೀನಿವಾಸ್ ತನ್ನ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಕೊಟ್ಟಿದ್ದರು. ಜ.16ರಂದು ಶ್ರೀನಿವಾಸ್ ಮೊಬೈಲ್‌ಗೆ ಕರೆ ಮಾಡಿದ ಡೊನಾಲ್ಡ್, ಕೆನಡಾದಿಂದ 15 ಬಾಕ್ಸ್ ಸಾಮಗ್ರಿಗಳನ್ನು ಕೊರಿಯರ್ ಮಾಡಿದ್ದೇನೆ ಎಂದು ಹೇಳಿ ಲಾರಿ ಫೋಟೋ ಕಳುಹಿಸಿ ನಂಬಿಸಿದ್ದ.

   ಜ.17ರಂದು ಶ್ರೀನಿವಾಸ್ ಮೊಬೈಲ್‌ಗೆ ಕರೆ ಮಾಡಿ ಅನಿತಾ ಎಂದು ಪರಿಚಯಿಸಿಕೊಂಡ ಯುವತಿಯೊಬ್ಬಳು ದೆಹಲಿ ವಿಮಾನ ನಿಲ್ದಾಣ ಕಸ್ಟಮ್ ಕಚೇರಿಯಿಂದ ಮಾತನಾಡುತ್ತಿದ್ದೇನೆ. ನಿಮ್ಮ ಹೆಸರಿಗೆ 15 ಬಾಕ್ಸ್ ಪಾರ್ಸಲ್ ಬಂದಿದೆ. 24 ಸಾವಿರ ರೂ. ತೆರಿಗೆ ಪಾವತಿಸಿದರೆ ನಿಮ್ಮ ವಿಳಾಸಕ್ಕೆ ಕಳುಹಿಸುವುದಾಗಿ ಹೇಳಿದ್ದಳು. ಅದನ್ನು ನಂಬಿದ ಶ್ರೀನಿವಾಸ್, ಯುವತಿ ಕೊಟ್ಟ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದರು. ಇದಾದ ಕೆಲವೇ ಗಂಟೆಗೆ ಮತ್ತೆ ಕರೆ ಮಾಡಿದ ಅನಿತಾ, ಬಾಕ್ಸ್‌ನಲ್ಲಿ 40 ಸಾವಿರ ಅಮೆರಿಕ ಡಾಲರ್ ಕೂಡ ಇದೆ.

    ಅದಕ್ಕಾಗಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿ ತನ್ನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿಕೊಂಡಿದ್ದಳು . ಜ.18ರ ಬೆಳಗ್ಗೆ ಜೇಮ್ಸ್ ಎಂಬ ಹೆಸರಿನಲ್ಲಿ ಶ್ರೀನಿವಾಸ್‌ಗೆ ಕರೆ ಮಾಡಿದ ಮತ್ತೊಬ್ಬ ವಂಚಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾತನಾಡುತ್ತಿದ್ದೇನೆ. ಇನ್ನು 30 ನಿಮಿಷದಲ್ಲಿ ಪಾರ್ಸಲ್ ನಿಮ್ಮ ಮನೆಗೆ ತಲುಪುತ್ತದೆ. ಆದರೆ, ಇದರಲ್ಲಿ ಅಮೆರಿಕನ್ ಡಾಲರ್ ಇರುವ ಕಾರಣ ತೆರಿಗೆ ಕಟ್ಟಬೇಕು. ಇಲ್ಲವಾದರೆ, ಪಾರ್ಸಲ್ ಜಪ್ತಿ ಮಾಡಬೇಕಾಗುತ್ತದೆ ಎಂದು ಬೆದರಿಸಿ ಹಣ ಪಡೆದಿದ್ದ. ನಂತರ ಮತ್ತೆ ಕರೆ ಮಾಡಿ ವಿದೇಶಿ ದೇಣಿಗೆ ಪಡೆದ ಆರೋಪದಲ್ಲಿ ಬಂಧಿಸಬೇಕಾಗುತ್ತದೆ ಎಂದು ಬೆದರಿಸಿ ಹಂತಹಂತವಾಗಿ ಒಟ್ಟು 3.3 ಲಕ್ಷ ರೂ. ವಸೂಲಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link