ಹುಳಿಯಾರು
ಕೆರೆಗೆಹಾರ ಕಥಾನಕದ ಇತಿಹಾಸ ಪ್ರಸಿದ್ಧ ಹುಳಿಯಾರು ಕೆರೆ ಈಗ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಾಲಿಗಿಡಗಳ ಕಾರುಬಾರಾಗಿದ್ದು ಕೆರೆ ಒಳಗೆ ಮನುಷ್ಯರಿರಲಿ ಜಾನುವಾರುಗಳೂ ಸಹ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಕೆಂಚಮ್ಮ ಕೆರೆಗೆಹಾರವಾದ ಇತಿಹಾಸ ಪ್ರಸಿದ್ಧವಾದ ಕೆರೆ ಹುಳಿಯಾರು ಕೆರೆ. ಹೀಗಾಗಿ ಈ ಭಾಗದ ಜನರಿಗೆ ಈ ಕೆರೆಗಳ ಬಗ್ಗೆ ಭಕ್ತಿಭಾವವಿದೆ. ಆದರೆ ಇಂದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಪರಿಣಾಮ ಕೆರೆಯ ತುಂಬ ಹೆಮ್ಮರವಾಗಿ ಜಾಲಿ ಗಿಡಗಳು ಬೆಳೆದು ಕೆರೆಯ ಅಸ್ಥಿತ್ವವನ್ನೇ ಅಣಕ ಮಾಡುತ್ತಿದೆ. ಇದೇನು ಕೆರೆಯೋ ಅಥವಾ ಜಾಲಿ ಗಿಡಗಳ ವನವೋ ಎಂಬ ಅನುಮಾನ ಕಾಡುವಂತಿದೆ.
ಹುಳಿಯಾರು ಕೆರೆಯು ಸರಿಸುಮಾರು 480.38 ಎಕರೆ ವಿಸ್ತೀರ್ಣ ಹೊಂದಿರುವ ಹುಳಿಯಾರು ಸುತ್ತಮುತ್ತ ನೂರಾರು ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ತಾಲ್ಲೂಕಿನ ಅತೀ ದೊಡ್ಡ ಕೆರೆಯಾಗಿದೆ. ಈ ಕೆರೆಯಲ್ಲಿ ನೀರು ಸಂಗ್ರಹಗೊಂಡರೆ ಹೋಬಳಿಯ ನೂರಾರು ಗ್ರಾಮಗಳ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಆದರೆ, ದಶಕಗಳಿಂದಲೂ ಮಳೆಯ ಕೊರತೆಯಿಂದ ಕೆರೆಗೆ ನೀರು ಬಾರದೆ ಯತೇಚ್ಛವಾಗಿ ಜಾಲಿಗಿಡಗಳು ಬೆಳೆದಿವೆ. ಕಾಲಕಾಲಕ್ಕೆ ಇವುಗಳನ್ನು ತೆರವು ಮಾಡದ ಪರಿಣಾಮ ಇಡೀ ಕೆರೆಯನ್ನೇ ಜಾಲಿ ಗಿಡಗಳು ಆಕ್ರಮಿಸಿದೆ.
ಪ್ರತಿ ವರ್ಷ ಬೀಳುವ ಅಲ್ಪಸ್ವಲ್ಪ ಮಳೆಗೆ ಕೆರೆಯ ಕೆಲ ಗುಂಡಿಗಳಿಗೆ ನೀರು ತುಂಬುತ್ತವಾದರೂ ಕೆರೆಯಲ್ಲಿ ಜಾಲಿ ಮರಗಳು ಪೊದೆಗಳಂತೆ ಇರುವುದರಿಂದ ಜಾನುವಾರುಗಳು ಕೆರೆಗೆ ಹೋಗಿ ನೀರು ಕುಡಿಯಲಾಗದ ಸ್ಥಿತಿ ಏರ್ಪಟ್ಟಿದೆ. ಅಪ್ಪಿತಪ್ಪಿ ಜಾನುವಾರುಗಳು ಕೆರೆಗೆ ಇಳಿದರೆ ಕೆರೆಯಿಂದ ವಾಪಸ್ಸು ಬರುತ್ತವೆ ಎನ್ನುವ ನಂಬಿಕೆ ಇಲ್ಲದಾಗಿದೆ. ಅಲ್ಲದೆ ಈ ಜಾಲಿ ಪೊದೆಯಲ್ಲಿ ನರಿಗಳು ಯತ್ತೇಚ್ಛವಾಗಿ ಸೇರಿಕೊಂಡಿದ್ದು ಆಗಾಗ ಊರಿನೊಳಗೆ ನುಗ್ಗಿ ಜನರಿಗೆ ಉಪಟಳ ನೀಡುವುದು ಸರ್ವೆ ಸಾಮಾನ್ಯವಾಗಿದೆ.
ಕೆರೆಯ ತುಂಬಾ ಜಾಲಿಗಿಡಗಳು ಬೆಳೆದಿರುವುದು ಮರಳು ದಂಧೆಕೋರರಿಗೆ ವರವಾಗಿ ಪರಿಣಮಿಸಿದೆ. ಒಂದು ಟ್ರ್ಯಾಕ್ಟರ್ ಓಡಾಡುವಷ್ಟು ಜೆಸಿಬಿಯಲ್ಲಿ ಜಾಗ ಮಾಡಿಕೊಂಡು ಕೆರೆ ಒಳಗೆ ನುಗ್ಗುವ ಇವರು ಹಗಲಿನಲ್ಲೇ ಮರಳಿನ ಲೂಟಿ ಮಾಡುತ್ತಿದ್ದಾರೆ. ಮರಳು ತುಂಬುವುದು ಜನಸಾಮನ್ಯರಿಗೆ ಕಾಣದೆ ಮರೆಯಾಗುವುದರಿಂದ ಸುಮಾರು 8 ರಿಂದ 10 ಅಡಿಗಳಷ್ಟು ಗುಂಡಿಗಳನ್ನು ಬಗೆದು ಮರಳು ಸಾಗಿಸುವ ಅಕ್ರಮ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತಿದೆ.
ಈ ಕೆರೆಯ ಒಳಗೆ ಜನಪದ ಕಥಾನಾಯಕಿ ಕೆಂಚಮ್ಮಳು ತಂದಾಕಿದ್ದಾಳೆ ಎಂದೇಳುವ ಗುಂಡುಗಳಿದ್ದು ಪ್ರತಿ ವರ್ಷ ಗ್ರಾಮ ದೇವತೆ ಶ್ರೀ ದುರ್ಗಮ್ಮ ಹಾಗೂ ಹುಳಿಯಾರಮ್ಮನ ಜಾತ್ರೆಯ ಸಂದರ್ಭದಲ್ಲಿ ಈ ಗುಂಡುಗಳಿಗೆ ಪೂಜೆ ಸಲ್ಲಿಸಿ ಕಳಸೋತ್ಸವ ಆರಂಭಿಸಲಾಗುತ್ತದೆ. ಅಲ್ಲದೆ ಕೆರೆಯ ಏರಿಯ ಮೇಲೆ ಕೆಂಚಮ್ಮನ ಗುಡಿಯಿದ್ದು ನಿತ್ಯ ಪೂಜೆಗೆ ಹಾಗೂ ಜಾತ್ರೆಯ ಸಂದರ್ಭದಲ್ಲಿ ಭಕ್ತರು ಬರುತ್ತಾರೆ. ಅಲ್ಲದೆ ಇದೇ ಕೆರೆಯ ಏರಿಯ ಮೇಲೆ ಶಾಲಾಕಾಲೇಜಿಗೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಓಡಾಡುತ್ತಾರೆ. ಇವರೆಲ್ಲರೂ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ಓಡಾಡುತ್ತಿದ್ದಾರೆ.
ಹುಳಿಯಾರು ಕೆರೆಯು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸಿಲ್ಲ. ಕೆರೆಯ ಪುನಶ್ಚೇತನಕ್ಕೆ ಸರ್ಕಾರ ಪ್ರತಿ ವರ್ಷ ಲಕ್ಷಾಂತರ ಹಣ ಮೀಸಲಿಟ್ಟರೂ ಅದನ್ನು ಬಳಕೆ ಮಾಡುವಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಎಂಜಿನಿಯರ್‍ಗಳು ವಿಫಲರಾಗಿದ್ದಾರೆ. ಇನ್ನಾದರೂ ಅಧಿಕಾರಿಗಳು ಕೆರೆಯಲ್ಲಿ ಬೆಳೆದಿರುವ ಜಾಲಿಮರಗಳ ತೆರವಿಗೆ ಮುಂದಾಗುವರೆ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
