ಟಿಕೆಟ್ ಘೋಷಣೆ ಅಚ್ಚರಿ ಮೂಡಿಸಿದೆ: ಡಾ.ಎಸ್ಸೆಸ್

ದಾವಣಗೆರೆ :

      ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬದಲು, ಅವರ ತಂದೆ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಿಸಿರುವುದು ಸ್ವತಃ ಶಾಮನೂರು ಶಿವಶಂಕರಪ್ಪನವರಲ್ಲೇ ಅಚ್ಚರಿ ಮೂಡಿಸಿದೆ.

       ಹೌದು… ಮೊದ, ಮೊದಲು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದಾಗಿ, ನಿರುತ್ಸಾಹ ತೋರಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ತಾವು ಸಹ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವುದಾಗಿ ಘೋಷಿಸಿದ್ದರು. ಹೀಗಾಗಿ ಕಾಂಗ್ರೆಸ್ ಟಿಕೆಟ್ ಮಲ್ಲಿಕಾರ್ಜುನ್‍ಗೆ ಫಿಕ್ಸ್ ಎಂಬ ಚರ್ಚೆಗಳು ಕ್ಷೇತ್ರದಲ್ಲಿ ನಡೆಯುತ್ತಿದ್ದವು. ಆದರೆ, ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಶನಿವಾರ ತಡರಾತ್ರಿ ಕಾಂಗ್ರೆಸ್ ಹೈಕಮಾಂಡ್ ಶಾಮನೂರು ಶಿವಶಂಕರಪ್ಪನವರಿಗೆ ಟಿಕೇಟ್ ಘೋಷಿಸಿದ್ದು, ಇದು ತಮಗೇ ಅಚ್ಚರಿ ಮೂಡಿಸಿದೆ ಎಂದು ಶಾಮನೂರು ತಿಳಿಸಿದ್ದಾರೆ.

      ಈ ಕುರಿತು ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ನನಗೆ ಗೊತ್ತಿಲ್ಲದಂತೆ ನೆನ್ನೆ ರಾತ್ರಿ ಪಕ್ಷದ ಹೈಕಮಾಂಡ್ ದಾವಣಗೆರೆ ಕ್ಷೇತ್ರದ ಟಿಕೆಟ್‍ಗೆ ನನ್ನ ಹೆಸರು ಘೋಷಣೆ ಮಾಡಿರುವುದು ಸ್ವತಃ ನನಗೆ ಸಫ್ರ್ರೈಸ್ ನೀಡಿದಂತಾಗಿದೆ ಎಂದು ತಿಳಿಸಿದರು.

      ನನಗೆ ವಯಸ್ಸಾಗಿರುವ ಕಾರಣಕ್ಕೆ ನನಗೆ ಲೋಕಸಭೆಗೆ ಟಿಕೆಟ್ ಕೊಡಲ್ಲ ಎಂಬುದಾಗಿ ಭಾವಿಸಿದ್ದೆ. ಅಲ್ಲದೇ, ನಾನು ಟಿಕೆಟ್‍ಗಾಗಿ ಎಲ್ಲೂ ಹೋಗಿ, ಯಾರ ಬಳಿಯಲ್ಲೂ ಲಾಬಿ ನಡೆಸಿಲ್ಲ. ಆದರೆ, ಟಿಕೆಟ್ ಘೋಷಣೆಯ ವೇಳೆ ನನ್ನ ಹೆಸರು ಹೇಗೆ ಬಂತು ಎಂಬುದು ನನಗೂ ಗೊತ್ತಿಲ್ಲ ಎಂದು ಹೇಳಿದರು.

      ಹಿಂದೆ ನನಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ಸಚಿವ ಸ್ಥಾನದಿಂದ ಕೈಬಿಟ್ಟಿದ್ದರು. ಆದರೆ, ಈಗ ನನಗೆ ಟಿಕೆಟ್ ನೀಡಿರುವುದು ಅಚ್ಚರಿ ಮೂಡಿಸುವುದರ ಜೊತೆಗೆ ಖುಷಿಯೂ ತಂದಿದೆ ಎಂದು ನುಡಿದರು.ಟಿಕೆಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈಗಲೇ ಬೆಂಗಳೂರಿಗೆ ಹೊರಟಿದ್ದು, ಅಲ್ಲಿ ಪಕ್ಷದ ವರಿಷ್ಠರು, ಮುಖಂಡರನ್ನು ಕಂಡು, ಮುಂದಿನ ಚುನಾವಣಾ ಕಾರ್ಯವೈಖರಿಯ ಬಗ್ಗೆ ಚರ್ಚಿಸುತ್ತೇನೆ ಎಂದ ಅವರು, ಈಗಾಗಲೇ ತಮ್ಮ ಎಡ-ಬಲ ಸೈನಿಕರು ತಯಾರಾಗಿದ್ದಾರೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 4 ಅಂದರೆ, ಇನ್ನೂ 1 ದಿನಗಳ ವರೆಗೆ ಕಾಲಾವಕಾಶವಿದೆ ಎಂದರು.

       ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಈ ಚುನಾವಣೆಯನ್ನು ಎದುರಿಸುತ್ತಿರುವುದರಿಂದ ಜೆಡಿಎಸ್ ಮುಖಂಡರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಚರ್ಚಿಸುವ ಅವಶ್ಯಕತೆಯೇ ಇಲ್ಲ. ಕ್ಷೇತ್ರದಲ್ಲಿ ಜೆಡಿಎಸ್‍ನ ಒಂದೂವರೆ ಲಕ್ಷ ಮತದಾರರಿದ್ದಾರೆಂಬುದಾಗಿ ಹೇಳಲಾಗುತ್ತಿದ್ದು, ಮೈತ್ರಿ ಧರ್ಮದಂತೆ ಜೆಡಿಎಸ್‍ನವರು ತಮಗೆ ಚುನಾವಣೆಯಲ್ಲಿ ಬೆಂಬಲಿಸಲಿದ್ದಾರೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

     ಇನ್ನೂ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಬಹುಮತದಿಂದ ಗೆಲ್ಲುವುದಾಗಿ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಮನೂರು, ಅಭ್ಯರ್ಥಿಯಾಗುವವರೆಲ್ಲರೂ ಹೀಗೆ ಹೇಳುವುದು ಸಾಮಾನ್ಯ, ನಾನು ನಾಳೆ ಅರ್ಜಿ ಹಾಕಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆಂದು ಹೇಳಬಹುದು. ಅದು ಮುಂದೆ ಗೊತ್ತಾಗುತ್ತೆ, ಈ ಬಾರೀ ಆತ ಠೇವಣಿ ಕಳೆದುಕೊಳ್ಳುವುದು ಖಚಿತ ಎಂದರು.

       ಈಗಾಗಲೇ ನೀವೇ (ಮಾಧ್ಯಮದವರೇ) ಅರ್ಧ ಪ್ರಚಾರ ಮಾಡಿಬಿಟ್ಟಿದ್ದೀರಿ. ಇನ್ನೆನ್ನೂ ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಮುಖ ತೋರಿಸಿ ಬಂದರಾಯಿತು ಎಂದು ಸುದ್ದಿಗಾರರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದರು.

       ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಕೆ.ಎಸ್.ಬಸವಂತಪ್ಪ, ಕೆ.ಹೆಚ್.ಓಬಳಪ್ಪ, ಪಾಲಿಕೆ ಸದಸ್ಯ ಎಂ.ಹಾಲೇಶ್, ಮುಖಂಡರಾದ ಅಲ್ಲಾವಲಿ ಗಾಜಿಖಾನ್, ಎ.ಅಬ್ದುಲ್ ಜಬ್ಬಾರ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link