ಚಿತ್ರದುರ್ಗ :
ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆಯ ಅಂಗವಾಗಿ ನಡೆಯಲಿರುವ ಬೃಹತ್ ಶೋಭಾಯಾತ್ರೆಯ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚನೆ ನೀಡಿದ್ದಾರೆ
ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿದರು ಸೆ. 21 ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಜರುಗಲಿದ್ದು, ಇದರ ಅಂಗವಾಗಿ ಸಾರ್ವಜನಿಕರಿಗೆ ಅಂದು ಯಾವುದೇ ಬಗೆಯ ಆಹಾರ ಅಥವಾ ಪಾನೀಯ ಸೇವೆ ಒದಗಿಸಬಯಸುವ ಸೇವಾಕರ್ತರು, ನಗರಸಭೆ ಪೌರಾಯುಕ್ತರಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಅದೇಶಿಸಿದರು
ಸೆ.21ರ ಶೋಭಾಯಾತ್ರೆಗೆ ಜಿಲ್ಲೆಯೂ ಸೇರಿದಂತೆ ವಿವಿಧಡೆಯಿಂದ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ. ಹೀಗಾಗಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಿರ್ದೇಶನ ನೀಡಿದರು
ಹಿಂದೂ ಮಹಾ ಸಭಾ ಗಣಪತಿ ವಿಸರ್ಜನೆ ಕಾರ್ಯಕ್ರಮ ಕುರಿತು ನಗರ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ಫ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ನಗರಸಭೆ ಪೌರಾಯುಕ್ತರು ಯಾರಿಗೂ ಯಾವುದೇ ಫ್ಲೆಕ್ಸ್ ಬ್ಯಾನರ್‍ಗೆ ಅನುಮತಿ ನೀಡಬಾರದು ಎಂದು ತಾಕೀತು ಮಾಡಿದರು.
ಮೆರವಣಿಗೆ ಸಾಗುವ ಮಾರ್ಗದಲ್ಲಿ ರಸ್ತೆ ಸುಸಜ್ಜಿತವಾಗಿರಬೇಕು. ಗುಂಡಿಗಳಿದ್ದಲ್ಲಿ ಮುಚ್ಚುವ ಕಾರ್ಯ ಆಗಬೇಕು. ರಸ್ತೆಯ ಇಕ್ಕೆಲಗಳಲ್ಲಿ ತೆರೆದ ಚರಂಡಿಗಳಿದ್ದಲ್ಲಿ ಮುಚ್ಚಲು ಕ್ರಮ ವಹಿಸಬೇಕು. ವಿದ್ಯುತ್ ಲೈನ್ ಸುರಕ್ಷತೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಸೆ. 19 ರಿಂದ 21 ರವರೆಗೂ ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು.
ಮೆರವಣಿಗೆಯು ನಗರದ ಮುಖ್ಯ ರಸ್ತೆ, ಗಾಂಧಿ ವೃತ್ತ, ಕನಕ ವೃತ್ತ ಮಾರ್ಗವಾಗಿ ಚಂದ್ರವಳ್ಳಿಗೆ ತಲುಪಲಿದೆ. ಕಾರ್ಯಕ್ರಮ ಆಯೋಜಕರೊಂದಿಗೆ ಉಪವಿಭಾಗಾಧಿಕಾರಿ ಹಾಗೂ ತಹಸಿಲ್ದಾರರು ಪ್ರತ್ಯೇಕ ಸಭೆ ಕೈಗೊಂಡು, ಮೆರವಣಿಗೆಯ ಮಾರ್ಗ ಹಾಗೂ ಕಾಲಮಿತಿಯನ್ನು ನಿಗದಿಪಡಿಸಿ, ಅವರಿಂದ ಮುಚ್ಚಳಿಕೆ ಪತ್ರ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು
ಪ್ರಮುಖ ರಸ್ತೆಯನ್ನು ಕೂಡುವ ಮಾರ್ಗವನ್ನು ಬಂದ್ ಮಾಡಲು ಸೂಕ್ತ ಬ್ಯಾರಿಕೇಡ್ ಅಳವಡಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಕಾವಲುಗೋಪುರ ನಿರ್ಮಿಸಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ಈ ಮಾರ್ಗದಲ್ಲಿ ಹೆಚ್ಚುವರಿಯಾಗಿ ಬೀದಿ ದೀಪಗಳನ್ನು ಅಳವಡಿಸಬೇಕು. ಮೆರವಣಿಗೆಯೊಂದಿಗೆ ವೈದ್ಯರು, ಸಿಬ್ಬಂದಿಗಳನ್ನೊಳಗೊಂದ 3 ಆ್ಯಂಬುಲೆನ್ಸ್‍ಗಳು, ಕನಿಷ್ಟ 3 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸುಪ್ರಿಂಕೋರ್ಟ್ ನಿರ್ದೇಶನದಂತೆ 70 ಡೆಸಿಬಲ್ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಶಬ್ದ ಹೊರಸೂಸುವ ಡಿಜೆ ಬಳಕೆಗೆ ನಿಷೇಧವಿದ್ದು, ಮೆರವಣಿಗೆ ಸಂದರ್ಭದಲ್ಲಿ ಈ ನಿರ್ದೇಶನದ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು ಈ ಕುರಿತು ಪರಿಸರ ಅಧಿಕಾರಿಗಳು ಶಬ್ದದ ಪ್ರಮಾಣವನ್ನು ಪರಿಶೀಲಿಸಿ, ಬಳಿಕವೇ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಬೇಕು. ಇದರ ಸಂಪೂರ್ಣ ಹೊಣೆಗಾರಿಯನ್ನು ಪರಿಸರ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಮದ ಚಿತ್ರದುರ್ಗ ತಾಲ್ಲೂಕಿನಾದ್ಯಂತ ಸೆ. 20 ಮತ್ತು 21 ರಂದು ಎರಡು ದಿನಗಳ ಕಾಲ ಮದ್ಯಪಾನ ಹಾಗೂ ಮದ್ಯ ಮಾರಾಟ ನಿಷೇಧ ಜಾರಿಗೊಳಿಸಲಾಗುವುದು. ಈ ಆದೇಶವನ್ನು ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಡಿಸಿ ಸೂಚನೆ ನೀಡಿದರು.
ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಮಾಡುವುದರಿಂದ, ಅಂದು ನಗರದೊಳಗೆ ಕೆಎಸ್‍ಆರ್‍ಟಿಸಿ ಸೇರಿದಂತೆ ಯಾವುದೇ ಬಸ್ ಇನ್ನಿತರೆ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ನಗರದ ಹೊರವಲಯದಲ್ಲಿನ ಹೆದ್ದಾರಿಯನ್ನು ಬಳಸಿಕೊಂಡು, ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಬಸ್‍ಗಳು ಕಾರ್ಯಾಚರಣೆ ಮಾಡಬೇಕು ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆ ಉದ್ದೇಶದಿಂದ ಸುಮಾರು 2000 ಕ್ಕೂ ಹೆಚ್ಚು ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ವಿವಿಧ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು ಹಾಗೂ ಕಾನ್ಸ್‍ಟೇಬ ಲ್‍ಗಳು ನಗರಕ್ಕೆ ಆಗಮಿಸುವುದರಿಂದ, ಎಲ್ಲರಿಗೂ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ ನಗರದಲ್ಲಿರುವ ಹಾಸ್ಟೆಲ್‍ಗಳನ್ನು ಬಳಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಡಿವೈಎಸ್‍ಪಿ ವಿಜಯಕುಮಾರ್ ಸಂತೋಷ್, ತಹಸಿಲ್ದಾರ್ ವೆಂಕಟೇಶಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ