ಶಿರಾ
ಶಿರಾ ಭಾಗಕ್ಕೆ ಸದ್ಯಕ್ಕಂತು ಬರದ ನಾಡಿನ ಕಿರೀಟ ದೂರವಾದಂತೆ ಕಾಣುತ್ತಿಲ್ಲ. ಕಳೆದ 20 ವರ್ಷಗಳಿಂದ ಸಿಕ್ಕಷ್ಟು ಬಗೆದು ಬಗೆದು ಅತ್ಯಮೂಲ್ಯ ಮರಳಿನ ಸಂಪತ್ತನ್ನು ಕೊಳ್ಳೆ ಹೊಡೆದ ಅಕ್ರಮ ಮರಳು ದಂಧೆಕೋರರ ಹದ್ದಿನ ಕಣ್ಣಿನಿಂದಾಗಿ ಇಡೀ ತಾಲ್ಲೂಕಿನ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಿದ್ದು ಇಡೀ ತಾಲ್ಲೂಕಿನ ಕೃಷಿಕನ ಬದುಕು ಮೂರಾಬಟ್ಟೆಯಾಗಿದೆ.
ಕಣ್ಣಿಗೆ ಕಾಣುವಷ್ಟರ ಉದ್ದುದ್ದದ ಜಮೀನುಗಳನ್ನು ಹೊಂದಿ, ನೂರಾರು ಎಕರೆ ಪ್ರದೇಶದ ಬೆಲೆ ಬಾಳುವ ಜಮೀನುಗಳ ಸರದಾರರಂತಹ ರೈತರು ಶಿರಾ ಭಾಗದಲ್ಲಿದ್ದರೂ ಉತ್ತಿ ಬಿತ್ತಲು ಮಳೆಯಾಸರೆಯಾಗಲಿ, ಸರಿಯಾದ ನೀರಾವರಿಯಾಗಲಿ ಇಲ್ಲದೆ ಕಣ್ಣೀರಲ್ಲಿ ಕೈತೊಳೆಯುವ ಸ್ಥಿತಿಯಲ್ಲಿರುವ ರೈತರ ಸಂಕಷ್ಟಕ್ಕೆ ಮಳೆರಾಯ ಕೂಡ ಸ್ಪಂದಿಸದಂತಾಗಿದ್ದಾನೆ.
ಮುಂಗಾರಿನಲ್ಲಿ ನೆಲ ನೆನೆಯುವಷ್ಟು ಮಳೆ ಬಂದು ತದ ನಂತರ ಭೂಮಿಯನ್ನು ಹಸನುಗೊಳಿಸಿ ಇನ್ನೇನು ಬಿತ್ತನೆ ಕಾರ್ಯ ಆರಂಭಿಸಬೇಕು ಅನ್ನುವಷ್ಟರ ಹೊತ್ತಿಗೆ ಮಳೆರಾಯನ ಕಣ್ಣಾಮುಚ್ಚಾಲೆಯಾಟ ಬರದ ನಾಡಿನ ಶಿರಾ ಭಾಗದಲ್ಲಿ ಕಳೆದ 15-20 ವರ್ಷಗಳಿಂದ ನಡೆಯುತ್ತಲೇ ಇದೆ. ಉತ್ತಿ ಬಿತ್ತಿದ ಬೀಜ ಮೊಳಕೆಯೊಡೆಯದ ಪರಿಸ್ಥಿತಿ ಒಂದೆಡೆಯಾದರೆ, ಬೆಳೆದು ನಿಂತು ಇನ್ನೇನು ಫಸಲು ಕೈಗೆಟುಕಬೇಕು ಅನ್ನುವಷ್ಟರಲ್ಲಿ ಮಳೆಯೇ ಬಾರದೆ ಬೆಲೆ ಎಲ್ಲವೂ ಒಣಗಿ ಹೋಗುವಂತಹ ಸಂಕಷ್ಟದ ನೋವುಂಡ ರೈತನ ಬದುಕು ಹಸನಾಗುವುದು ಕನಸಿನ ಮಾತಾಗಿದೆ.
ಕಳ್ಳಂಬೆಳ್ಳ, ಹೇರೂರು, ನಾರಾಯಣಪುರ, ತಾವರೆಕೆರೆ, ಗೌಡಗೆರೆ, ಹುಲಿಕುಂಟೆ, ಮದಲೂರು, ಕಸಬಾ ಹೋಬಳಿಯ ಭಾಗಗಳಲ್ಲಿ ಕುಗ್ಗದೆ ಜಗ್ಗದೆ ಇದ್ದ ಅಂತರ್ಜಲ ಇದೀಗ 1,500 ಅಡಿ ಭೂಮಿ ಕೊರೆದರೂ ಒಂದು ಹನಿ ನೀರೂ ಕೂಡ ದಕ್ಕದಂತಹ ದುಸ್ಥಿತಿ ನಿರ್ಮಾಣವಾಗಲು ಅಕ್ರಮ ಮರಳು ದಂಧೆಯೇ ಮೂಲ ಕಾರಣವಾಗಿದೆ.
ನಾಲ್ಕು ಅಡಿ ಭೂಮಿ ಕೊರೆದರೆ ಸಾಕು ಅಂತರ್ಜಲ ಕಾಣುತ್ತಿದ್ದ ಶಿರಾ ಭಾಗದ ಹಳ್ಳ ಕೊಳ್ಳಗಳೆಲ್ಲವೂ ಒಣಗಿ ಥರಗೆದ್ದಿದ್ದು ಹಳ್ಳಗಳು ಗುಂಡಿಗಳಾಗಿ ಮರಳು ಸಾಗಾಣಿಕೆಯ ನಗ್ನ ಸತ್ಯದ ಕಥೆಗಳನ್ನು ಹಳ್ಳಗಳ ಗುಂಡಿಗಳೇ ಹೇಳುತ್ತಿವೆ. ಕಳೆದ 15-20 ವರ್ಷಗಳ ಹಿಂದಿನಿಂದಲೂ ಈ ಭಾಗದಲ್ಲಿಯೇ ಮೊಕ್ಕಾಂ ಹೂಡಿದ್ದ ಅನೇಕ ತಾಲ್ಲೂಕು ಮಟ್ಟದ ಅಧಿಕಾರಿಗಳು, ಕೆಲ ಆರಕ್ಷಕ ಅಧಿಕಾರಿಗಳು ಹಾಗೂ ಕೆಲ ರಾಜಕೀಯ ದುರೀಣರ ಹದ್ದಿನ ಕಣ್ಣು ಮರಳಿನ ಮೇಲೆ ಬಿದ್ದ ಪರಿಣಾಮ ಅಮೂಲ್ಯ ಮರಳಿನ ಸಂಪತ್ತು ಲೂಟಿಯಾಗಲು ಕಾರಣವೂ ಆಯಿತು.
ಈ ಭಾಗದ ರೈತನ ಬದುಕು ನಿಂತಿರುವುದು ಕೃಷಿ ಕಾಯಕದ ಮೇಲೆ ಎಂಬುದು ಅಕ್ಷರಶಃ ದಿಟವಾಗಿದ್ದು ರೈತನು ನೆಚ್ಚಿ ಬದುಕುವ ಕೃಷಿ ಕಾಯಕವೂ ರೈತನ ಬೆನ್ನೆಲುಬುಗಳನ್ನು ಪುಡಿ ಪುಡಿ ಮಾಡಿಬಿಟ್ಟಿದೆ. ತಾಲ್ಲೂಕಿನಲ್ಲಿ ಒಟ್ಟು 1,55,377 ಹೆಕ್ಟೇರ್‍ಗಳಷ್ಟಿದ್ದು ಕೃಷಿಗೆ ಸಾಗುವಳಿ ಮಾಡಲು ಯೋಗ್ಯವಾದ ವಿಸ್ತೀರ್ಣ 90.150 ಹೆಕ್ಟೇರ್‍ಗಳಷ್ಟಿದೆ. ಇದರಲ್ಲಿ ಸಾಮಾನ್ಯ ವಿಸ್ತೀರ್ಣ 76.130 ಹೆಕ್ಟೇರ್‍ಗಳಷ್ಟಿದ್ದು ಶೇ. 85 ರಷ್ಟು ರೈತರು ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಕೃಷಿಯಿಂದಲೇ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಮಾರ್ಗವನ್ನು ಬಿಟ್ಟರೆ ಬರದ ನಾಡಿನ ಈ ರೈತರಿಗೆ ಮೊಗದೊಂದು ಮಾರ್ಗವೇ ಇಲ್ಲದಂತಾಗಿದೆ.
ತಾಲ್ಲೂಕಿನಾದ್ಯಂತ 520.20 ಮಿ.ಮೀ. ವಾಡಿಕೆ ಮಳೆಯ ಗುರಿ ಇದ್ದು ತಾಲ್ಲೂಕಿನಲ್ಲಿ ಒಟ್ಟು 75,650 ಹೆಕ್ಟೇರ್ ಗುರಿ ಇದ್ದು 90,160 ಹೆಕ್ಟೇರ್ ಭೂಮಿ ವ್ಯವಸಾಯಕ್ಕೆ ಯೋಗ್ಯವಾಗಿದೆ. ಈ ಪೈಕಿ 68.160 ಹೆಕ್ಟೇರ್ ಖುಷ್ಕಿ ಜಮೀನಿದ್ದು 22000 ಹೆ. ನೀರಾವರಿ ಜಮೀನಿದೆ. ಕಳೆದ ವರ್ಷ ಮಳೆ ಹೋಗಿ ಮುಗಿಲು ಸೇರಿತು ನಿಜ. ಈ ವರ್ಷದ ಜನವರಿ ಹಾಗೂ ಫೆಬ್ರುವರಿ ಮಾಹೆಯಲ್ಲಿ 4 ಮಿ.ಮೀ. ಮಳೆ ಬರಬೇಕಿದ್ದು ತಾಲ್ಲೂಕಿನಾದ್ಯಂತ 18 ಮಿ.ಮೀ. ಮಳೆ ಬಂದು ಚದುರಿದಂತೆ ಮಳೆಯಾಯಿತೇ ಹೊರತು ಈ ಮಳೆಯಿಂದ ಪ್ರಯೋಜನವೂ ಆಗಲಿಲ್ಲ.
ತಾಲ್ಲೂಕಿನಾದ್ಯಂತ ಹಿಂಗಾರು ಹಂಗಾಮಿನಲ್ಲಿ ರೈತರು 270 ಹೆ.ಪ್ರದೇಶದಲ್ಲಿ ಹುರುಳಿಯನ್ನು ಬಿತ್ತಿದ್ದು ಸದರಿ ಬೆಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಗಳೆರಡು ಜಂಟಿ ಸಮೀಕ್ಷೆ ನಡೆಸಿ ಹುರುಳಿ ಬೆಳೆ ನಷ್ಟ ಹೊಂದಿದ ರೈತರಿಗೆ 18,36,000 ರೂ.ಗಳ ಬರ ಪರಿಹಾರ ಮೊತ್ತ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೆರೆಗಳು ಖಾಲಿ:
ತಾಲ್ಲೂಕಿನ ಸುಮಾರು 170 ಕೆರೆಗಳ ಪೈಕಿ ಬಹುತೇಕ ಕೆರೆಗಳು ಖಾಲಿಯಾಗಿವೆ. ಹೇಮಾವತಿ ನೀರಿನ ಆಶ್ರಯ ಪಡೆದ ಮದಲೂರು ಕೆರೆ ಹಾಗೂ ಶಿರಾ ಕೆರೆಗಳಲ್ಲಿ ನೀರಿದ್ದು ಮಾಗೋಡು, ಚಿಕ್ಕಸಂದ್ರ ಹಾಗೂ ಲಕ್ಷ್ಮೀಸಾಗರ ಕೆರೆಯಲ್ಲಿ ಅತ್ಯಂತ ಕಡಿಮೆ ಮಳೆ ನೀರಿದೆ. ಹಾಲದೊಡ್ಡೇರಿ ಹಾಗೂ ಹೊಸೂರು ಕೆರೆಯಲ್ಲಿ ಕೆರೆಗಳ ತಳಭಾಗದಲ್ಲಿ ಮಳೆಯ ನೀರಿದ್ದು ಕೆಲವೇ ದಿನಗಳಲ್ಲಿ ಸದರಿ ನೀರು ಕೂಡ ಬೇಸಿಗೆಯ ಬೇಗೆಗೆ ಇಂಗಿ ಹೋಗಲಿದೆ. ಉಳಿದಂತೆ ಬಹುತೇಕ ಕೆರೆಗಳು ನೀರಿಲ್ಲದೆ ಸೊರಗುತ್ತಿವೆ.
ಕಳ್ಳಂಬೆಳ್ಳ ಹೋಬಳಿಯ ಕಳ್ಳಂಬೆಳ್ಳ ಕೆರೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಅಮಲಗೊಂದಿ ಬ್ಯಾರೇಜ್, ಕಠಾವೀರನಹಳ್ಳಿ, ಮಲ್ಲಶೆಟ್ಟಿಹಳ್ಳಿ, ಕಡವಿಗೆರೆ, ಯಲಿಯೂರು ಬ್ಯಾರೇಜ್‍ಗಳು ನೀರಿಲ್ಲದೆ ಖಾಲಿಯಾಗಿವೆ. ಹಾಗೆಯೇ ಹೇರೂರು, ಹಾಲಜ್ಜನಪಾಳ್ಯ, ಮೆಳೆಕೋಟೆ ಬ್ಯಾರೇಜ್‍ಗಳು ಕೂಡ ನೀರಿಲ್ಲದೆ ಒಣಗಿ ಹೋಗಿದ್ದು ಖಾಲಿಯಾದ ಬ್ಯಾರೇಜ್‍ಗಳ ಹಳ್ಳದಲ್ಲಿನ ಮರಳಿಗೆ ಅಕ್ರಮ ದಂಧೆಕೋರರ ಹದ್ದಿನಕಣ್ಣು ಬಿದ್ದಿದೆ.