ದಾವಣಗೆರೆ:
ಭದ್ರಾ ಜಲಾಶಯದಿಂದ ನಾಲೆಗಳಲ್ಲಿ ಮೇ ತಿಂಗಳ ಕೊನೆಯ ವರೆಗೂ ನೀರು ಹರಿಸಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಸಕ್ತ ಹಂಗಾಮಿನಲ್ಲಿ ಭದ್ರಾ ಜಲಾಶಯದಿಂದ ನಾಲೆಗಳಲ್ಲಿ ನೀರು ನಿಲ್ಲಿಸುವ ವೇಳಾಪಟ್ಟಿಯನ್ನು ಮೇ 7ನೇ ತಾರೀಕಿನಿಂದ ಮೇ 15 ರವರೆಗೆ ವಿಸ್ತರಣೆ ಮಾಡಲಾಗಿದೆ. ಆದರೆ, ಭದ್ರಾ ಬಲದಂಡೆ ನಾಲೆ ವ್ಯಾಪ್ತಿಯ ದಾವಣಗೆರೆ ತಾಲ್ಲೂಕಿನ ಹಾಗೂ ಹರಿಹರ ತಾಲ್ಲೂಕಿನ ಕೊನೆ ಭಾಗದ ರೈತರಿಗೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ.
ಕೊನೇ ಭಾಗದ ರೈತರು 20 ದಿನಗಳ ಕಾಲ ತಡವಾಗಿ ಭತ್ತ ನಾಟಿ ಮಾಡಿರುವುದರಿಂದ ಭತ್ತ ಕಟಾವಿಗೆ ಬರಲು ಮೇ ಅಂತ್ಯದವರೆಗೆ ಕಾಲುವೆಗಳಲ್ಲಿ ನೀರು ಹರಿಸುವುದು ಅನಿವಾರ್ಯವಾಗಿದೆ. ಕೊನೆ ಭಾಗಕ್ಕೆ ನಿಗದಿತ ಅವಧಿಯಲ್ಲಿ ನೀರು ತಲುಪದೇ ಇರುವ ಕಾರಣ ನಾಟಿ ಮಾಡುವುದು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಮೇ ಅಂತ್ಯದವರೆಗೆ ನೀರು ಹರಿಸುವಂತೆ ಮುಖ್ಯ ಅಭಿಯಂತರರಿಗೆ ಹಾಗೂ ಅಧೀಕ್ಷಕ ಅಭಿಯಂತರರಿಗೆ ಇಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ದೂರವಾಣಿ ಮುಖಾಂತರ ಮಾತನಾಡಿ ನೀರು ನಿಲುಗಡೆ ದಿನಾಂಕವನ್ನು ಮೇ ಅಂತ್ಯದವರೆಗೆ ವಿಸ್ತರಣೆ ಮಾಡಬೇಕೆಂದು ತಾಕೀತು ಮಾಡಿದರು.