ನಗರದ`ಡಾಕ್ಟರ್ ವಾಟರ್’ ಘಟಕಗಳಿಗೆ ಪಾಲಿಕೆಯಿಂದ ನೋಟೀಸ್

ತುಮಕೂರು

       ತುಮಕೂರು ನಗರದಲ್ಲಿ ಸರ್ಕಾರಿ ಏಜೆನ್ಸಿಗಳಿಂದಲೇ ಸ್ಥಾಪಿತವಾಗಿದ್ದರೂ, ಖಾಸಗಿ ವ್ಯಕ್ತಿಗಳ ಕಪಿಮುಷ್ಠಿಯಲ್ಲಿದ್ದ 21 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತನ್ನ ವಶಕ್ಕೆ ಪಡೆದ ತುಮಕೂರು ಮಹಾನಗರ ಪಾಲಿಕೆಯು ಇದೀಗ ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ನಗರದ 7 ವಿವಿಧ ಸ್ಥಳಗಳಲ್ಲಿರುವ ಖಾಸಗಿ ವಲಯಕ್ಕೆ ಸೇರಿರುವ `ಡಾಕ್ಟರ್ ವಾಟರ್’ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ತುಮಕೂರು ಮಹಾನಗರ ಪಾಲಿಕೆಯು ಮೇ 9 ರಂದು ನೋಟೀಸ್ ಜಾರಿ ಮಾಡಿದೆ.

      ಆಂಧ್ರಪ್ರದೇಶದ ಹೈದರಾಬಾದ್‍ನಲ್ಲಿರುವ ವಾಟರ್ ಹೆಲ್ತ್ ಇಂಡಿಯಾ ಲಿಮಿಟೆಡ್ ಎಂಬ ಸಂಸ್ಥೆಯು ಈ ಘಟಕಗಳನ್ನು ನಡೆಸುತ್ತಿದ್ದು, ಆ ಸಂಸ್ಥೆಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಈ ನೋಟೀಸ್ ಜಾರಿಗೊಳಿಸಿದ್ದಾರೆ.ನಗರದ 7 ನೇ ವಾರ್ಡ್‍ನ ಶಿಶುವಿಹಾರ ಮೈದಾನ, 25 ನೇ ವಾರ್ಡ್‍ನ ಸಿದ್ಧಗಂಗಾ ಬಡಾವಣೆಯ ಮುನಿಸಿಪಲ್ ಲೇಔಟ್, 32 ನೇ ವಾರ್ಡ್‍ನ ಗೋಕುಲ ಬಡಾವಣೆಯಲ್ಲಿ 2014 ರಲ್ಲಿ `ಡಾಕ್ಟರ್ ವಾಟರ್’ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿದ್ದು, ಅದರ ನಿರ್ವಹಣೆಗೆ ನೀಡಿದ್ದ ಪರವಾನಗಿ ಅವಧಿಯು 2017 ರಲ್ಲೇ ಮುಕ್ತಾಯವಾಗಿದೆ. ಮಹಾನಗರ ಪಾಲಿಕೆಗೆ ಯಾವುದೇ ಶುಲ್ಕ ಸಂದಾಯವಾಗಿಲ್ಲ. ಪರವಾನಗಿಯನ್ನು ನವೀಕರಿಸಿಕೊಂಡಿಲ್ಲ ಎಂದು ನೋಟೀಸ್‍ನಲ್ಲಿ ತಿಳಿಸಲಾಗಿದೆ.

      ನಗರದ 30 ನೇ ವಾರ್ಡ್‍ನ ನಳಂದ ಶಾಲೆ ಬಳಿ, 18 ನೇ ವಾರ್ಡ್‍ನ ಶಾಂತಿನಗರದಲ್ಲಿ, 10 ನೇ ವಾರ್ಡ್‍ನ ಆಜಾದ್ ಪಾರ್ಕ್‍ನ ದಕ್ಷಿಣ ಭಾಗದಲ್ಲಿ, 31 ನೇ ವಾರ್ಡ್‍ನ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಪಂಪ್‍ಹೌಸ್ ಹತ್ತಿರ 2016 ರಲ್ಲಿ ಘಟಕಗಳನ್ನು ನಿರ್ಮಿಸಿದ್ದು, ಇವುಗಳ ಪರವಾನಗಿ ಅವಧಿಯು ದಿನಾಂಕ 19-07-2019 ರಂದೇ ಮುಕ್ತಾಯವಾಗಿದೆ. ಈ ಅವಧಿಯಲ್ಲೂ ಪಾಲಿಕೆಗೆ ಯಾವುದೇ ಶುಲ್ಕ ಸಂದಾಯವಾಗಿಲ್ಲ ಎಂದು ಪಾಲಿಕೆಯು ತಿಳಿಸಿದೆ.

         ಈ ಘಟಕಗಳನ್ನು ಮುಂದುವರೆಸಬೇಕಾದರೆ ಪಾಲಿಕೆಯಿಂದ ಹೊಸದಾಗಿ ಕರಾರು ಮಾಡಿಕೊಂಡು, ಪರವಾನಗಿ ಪಡೆಯಬೇಕು. ಪ್ರಸ್ತುತ ಚಾಲ್ತಿ ಇರುವ ಸರ್ಕಾರಿ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲ 7 ಘಟಕಗಳಿಗೂ ನೀರಿನ ಮೀಟರ್ ಅಳವಡಿಸಬೇಕು ಎಂದು ಸದರಿ ನೋಟಿಸ್‍ನಲ್ಲಿ ತಿಳಿಸಿರುವ ಆಯುಕ್ತ ಟಿ.ಭೂಬಾಲನ್ ಅವರು, ಇಲ್ಲದಿದ್ದರೆ ಈ ಘಟಕಗಳನ್ನು ಪಾಲಿಕೆಯ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap