ನವೆಂಬರ್ 24 ರಂದು ತೀನಂಶ್ರೀ ಜಯಂತಿಯಾಚರಣೆ

ಚಿಕ್ಕನಾಯಕನಹಳ್ಳಿ

         ತೀ.ನ.ಶ್ರೀಕಂಠಯ್ಯರವರ 113ನೇ ಜನ್ಮ ದಿನಾಚರಣೆಯನ್ನು ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ತೀನಂಶ್ರೀ ಭವನದ ನೂತನ ಕಟ್ಟಡದಲ್ಲಿಯೇ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನವಾಯಿತು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ನಂತರ ತೀ.ನಂ.ಶ್ರೀಕಂಠಯ್ಯರವರ ಜಯಂತಿಯ ಬಗ್ಗೆ ಚರ್ಚೆ ನಡೆಯಿತು.

       ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ನವಂಬರ್ 26 ರಂದು ತೀ.ನಂ.ಶ್ರೀಕಂಠಯ್ಯನವರು ಜನಿಸಿದ್ದರಿಂದ ಅಂದೇ ಅವರ 113ನೇ ಜಯಂತಿಯನ್ನು ಆಚರಣೆ ಮಾಡುವುದು ಸೂಕ್ತ. ಆದರೆ ಸರ್ಕಾರಿ ಕಾರ್ಯಕ್ರಮವಾದ ಕನಕ ಜಯಂತಿಯು ಅದೇ ದಿನ ಬರುವುದರಿಂದ ತೀನಂಶ್ರೀರವರ ಜಯಂತಿಯನ್ನು ವಿಶೇಷವಾಗಿ ಆಚರಿಸಲು ಸಾದ್ಯವಾಗುವುದಿಲ್ಲ. ಆದ ಕಾರಣ ಕನಕ ಜಯಂತಿಗೆ ಮುಂಚಿತ ದಿನದಲ್ಲಿ ತೀನಂಶ್ರೀರವರ ಜಯಂತಿಯನ್ನು ಅರ್ಥಗರ್ಭಿತವಾಗಿ ಆಚರಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಜಯಂತಿಯನ್ನು ಪಟ್ಟಣದ ತೀನಂಶ್ರೀ ಭವನದಲ್ಲಿ ವ್ಯವಸ್ಥಿತವಾಗಿ ಮಾಡಲು ಸಂಘ ಸಂಸ್ಥೆಗಳು ಭಾಗಿಯಾಗಬೇಕೆಂದು ಕರೆ ನೀಡಿದರು.
ಕನ್ನಡ ಸಂಘದ ವೇದಿಕೆ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ, ತೀನಂಶ್ರೀ ಭವನದ ಕಾಮಗಾರಿಯು ಇನ್ನೂ ಪೂರ್ಣಗೊಂಡಿಲ್ಲ ಮತ್ತು ಬಣ್ಣವನ್ನು ಬಳಿದಿಲ್ಲ. ಭವನದ ಕಟ್ಟಡವನ್ನು ಉದ್ಘಾಟನೆ ಮಾಡಿಲ್ಲ. ಹೀಗಿರುವಾಗ ಅಲ್ಲಿ ತೀನಂಶ್ರೀರವರ ಜಯಂತಿಯನ್ನು ಆಚರಿಸುವುದು ಸೂಕ್ತವಲ್ಲ ಎಂದರು.

      ಹಿರಿಯ ಸಾಹಿತಿ ಎಂ.ವಿ.ನಾಗರಾಜರಾವ್ ಮಧ್ಯ ಪ್ರವೇಶಿಸಿ ಮಾತನಾಡಿ, ತೀ.ನಂ.ಶ್ರೀಕಂಠಯ್ಯರವರು 1906 ನವಂಬರ್ 26ರಂದು ಜನಿಸಿದರು. ತಾಲ್ಲೂಕಿನ ಗತ ವೈಭವ ಸಾರಿದ ತೀನಂಶ್ರೀರವರ ಅದ್ದೂರಿ ಶತಮಾನೋತ್ಸವಕ್ಕೆ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಶಿವಕುಮಾರಸ್ವಾಮೀಜಿಯವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಮುಂದಿನ ಪೀಳಿಗೆಗೆ ತೀನಂಶ್ರೀರವರ ಪರಿಚಯ ಭಾರತ ಮಾತ್ರವಲ್ಲ ಜಗತ್ತಿಗೆ ತಿಳಿಯಬೇಕು ಮತ್ತು ಶತಮಾನೋತ್ಸವದ ಗುರುತಾಗಿ ತೀನಂಶ್ರೀ ಭವನ ನಿರ್ಮಾಣವಾಗಬೇಕೆಂದು ನಾನು ಅಂದು ಶಾಸಕರಾಗಿದ್ದ ಜೆ.ಸಿ.ಮಾಧುಸ್ವಾಮಿಯವರಿಗೆ ಮನವಿಯನ್ನು ಮಾಡಿದ್ದೆ.

      ಹಾಗಾಗಿ ತೀನಂಶ್ರೀ ಭವನದ ಸ್ಥಾಪನೆಗೆ 10 ವರ್ಷದ ಕೆಳಗೆ ವಿರೋಧ ಪಕ್ಷದಲ್ಲಿದ್ದ ಜೆ.ಸಿ.ಮಾಧುಸ್ವಾಮಿಯವರು ಶಾಸಕರಾಗಿದ್ದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ಒತ್ತಡ ಏರಿ, ಸರ್ಕಾರದಿಂದ 1.5 ಕೋಟಿ ರೂ. ಹಣವನ್ನು ಮಂಜೂರು ಮಾಡಿಸಿದ್ದರು. ಕಾಮಗಾರಿಯು 10 ವರ್ಷವಾದರೂ ಪೂರ್ಣಗೊಳ್ಳಲಿಲ್ಲ. ಮತ್ತೆ ಅಧಿಕಾರ ಪಡೆದ ಜೆ.ಸಿ.ಎಂ ತೀನಂಶ್ರೀ ಭವನದ ಕಡತಗಳನ್ನು ತೆಗೆಸಿ 85 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಿಸಿದ್ದಾರೆ. ನನಗೆ 71 ವರ್ಷ ವಯಸ್ಸಾಗಿದೆ. ತೀನಂಶ್ರೀರವರ ಜನ್ಮ ದಿನಾಚಾರಣೆಯನ್ನು ತೀನಂಶ್ರೀ ಭವನದಲ್ಲೆ ಮಾಡಬೇಕೆಂಬ ಹೆಬ್ಬಯಕೆ ನನ್ನದಾಗಿದೆ. ಸಂಘ ಸಂಸ್ಥೆಗಳು ನಿರಾಕರಿಸದೆ ಒಪ್ಪಿಗೆ ಸೂಚಿಸಿ ಎಂದು ಮನವಿಯನ್ನು ಮಾಡಿದರು.

        ಜನ್ಮ ದಿನಾಚರಣೆಯ ದಿನದಂದು ಬೆಳಗ್ಗೆ 10.30 ರಿಂದ ಸಂಜೆ 5 ರವರೆಗೆ ಕಾರ್ಯಕ್ರಮವನ್ನು ರೂಪಿಸಿ, ತೀನಂಶ್ರೀರವರ ಶಿಷ್ಯರಿಂದ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿಸಲಾಗುವುದು. ಸಾಹಿತ್ಯ, ಕಲೆ, ವಿಚಾರ ಸಂಕೀರ್ಣ ಕಾರ್ಯಕ್ರಮ ಮತ್ತು ವೈವಿಧ್ಯಮಯ ಮನೋರಂಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.

       ಶಾಸಕ ಜೆ.ಸಿ.ಎಂ ಮಾತನಾಡಿ, ತೀನಂಶ್ರೀ ಭವನದಲ್ಲಿ ಕಾರ್ಯಕ್ರಮವನ್ನು ಮಾಡುವುದರಿಂದ ಗೊಂದಲ ಮಾಡಿಕೊಳ್ಳುವಂತಿಲ್ಲ. ತೀನಂಶ್ರೀರವರ ಜನ್ಮ ದಿನಾಚರಣೆಯನ್ನು ಭವನದಲ್ಲಿಯೇ ನೆರವೇರಿಸಬೇಕೆಂಬುದು ಹಿರಿಯ ಸಾಹಿತಿ ಎಂ.ವಿ.ನಾಗರಾಜರಾವ್‍ರವರ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ತರಾತುರಿಯಲ್ಲಿ ಭವನದ ಉದ್ಘಾಟನೆಯನ್ನು ಮಾಡುವುದಿಲ್ಲ. ಬರಿ ಕಾರ್ಯಕ್ರಮವನ್ನು ಮಾತ್ರ ಮಾಡಲಾಗುವುದು.

        ತೀ.ನಂ.ಶ್ರೀ ಭವನದ ಕಾಮಗಾರಿಯನ್ನು ಕೆಲವೇ ತಿಂಗಳಿನಲ್ಲಿ ಪೂರೈಸಿ, ಕಟ್ಟಡದ ಉದ್ಘಾಟನೆಗೆ ಮಂತ್ರಿಗಳನ್ನು ಕರೆಸಿ ಅದ್ದೂರಿಯಾಗಿ ಉದ್ಘಾಟಿಸಲಾಗುವುದು ಎಂದು ವಿವರಿಸಿ, ಪಿಡಬ್ಲ್ಯೂಡಿ ಎಂಜಿನಿಯರ್ ಚಂದ್ರಶೇಖರ್‍ರವರಿಗೆ ಭವನದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು

        ಕನ್ನಡ ಸಂಘದ ವೇದಿಕೆ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಕಾರ್ಯದರ್ಶಿ ಕೆ.ಜೆ.ಕೃಷ್ಣೇಗೌಡ, ಭವನೇಶ್ವರಿ ಸಂಘದ ಶಾಂತಕುಮಾರ್ ಸೇರಿದಂತೆ ಸಭೆಗೆ ಆಗಮಿಸಿದ್ದ ಎಲ್ಲರು ತೀ.ನಂ.ಶ್ರೀ ಭವನದಲ್ಲೇ ಕಾರ್ಯಕ್ರಮವನ್ನು ಮಾಡಲು ಒಪ್ಪಿಗೆ ಸೂಚಿಸಿದರು. ನ.24 ಶನಿವಾರದಂದು ಕಾರ್ಯಕ್ರಮದ ದಿನವನ್ನು ನಿಗದಿಪಡಿಸಲಾಯಿತು.

          ತಹಸೀಲ್ದಾರ್ ಸೋಮಪ್ಪಕಡಕೋಳ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಸ್ವಾಮಿ, ಡಿಎಸ್‍ಎಸ್ ಮುಖಂಡರಾದ ಬೇವಿನಹಳ್ಳಿ ಚನ್ನಬಸವಯ್ಯ, ಲಿಂಗದೇವರು, ಎಪಿಎಂ.ಸಿ ನಿರ್ದೇಶಕ ಅಗಸರಳ್ಳಿಶಿವರಾಜು, ಪಿಎಲ್.ಡಿ ಬ್ಯಾಂಕ್ ನಿರ್ದೇಶಕ ಟಿ.ಶಂಕರಲಿಂಗಪ್ಪ, ಮಾಜಿ ಪುರಸಭಾ ಸದಸ್ಯೆ ರೇಣುಕಮ್ಮ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶಿವಕುಮಾರ್, ಪಿಡಬ್ಲ್ಯೂಡಿ ಹಿರಿಯ ಎಂಜಿನಿಯರ್ ಚಂದ್ರಶೇಖರ್, ತಾಲ್ಲೂಕು ರಂಗಕಲಾವಿದರ ಸಂಘದ ಅಧ್ಯಕ್ಷ ಸಿದ್ದುಜಿಕೆರೆ, ಮಗ್ಗದಮನೆ ಸಿ.ಹೆಚ್.ಗಂಗಾಧರ್, ಶಿಲ್ಪಿ ವಿಶ್ವನಾಥ್, ಉಪನ್ಯಾಸಕ ರವಿಕುಮಾರ್ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap