ಚಿತ್ರದುರ್ಗ
ಸಮಾಜದಲ್ಲಿ ಸಮಾನತೆ ತರಲು ಕಾನೂನು ಹಾಗೂ ಶಿಕ್ಷೆಯೊಂದೇ ಪರಿಹಾರವಲ್ಲ, ಎಲ್ಲ ಜಾತಿ, ಜನಾಂಗದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಸಮಾಜದಲ್ಲಿ ಜಾಗೃತಿ ಮತ್ತು ಪರಿವರ್ತನೆ ತರುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ 4ನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳು ಸಂಭವಿಸಿದಾಗ, ಸಂತ್ರಸ್ಥರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯಬಹುದಾದ ಪರಿಹಾರ, ಪುನರ್ವಸತಿ, ಅಸ್ಪøಶ್ಯತೆ ಆಚರಣೆ ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧ ಎನ್ನುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂಬುದಾಗಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಇದಕ್ಕಾಗಿ ಜಿಲ್ಲೆಗೆ ಪ್ರಸಕ್ತ ವರ್ಷ 4 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ನಡೆಸುವ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು
ಹೊಸದುರ್ಗ- ಜ. 28, 29. ಹಿರಿಯೂರು-ಜ. 03, 04. ಹೊಳಲ್ಕೆರೆ-ಜ. 10, 11. ಚಳ್ಳಕೆರೆ-ಜ. 06, 07. ಮೊಳಕಾಲ್ಮೂರು-ಜ. 07, 08 ರಂದು ನಿಗದಿಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯಗಳು ನಡೆಯಬಾರದು. ಸಮಾಜದಲ್ಲಿ ಸಮಾನತೆ ತರಲು ಕಾನೂನು ಮತ್ತು ಶಿಕ್ಷೆ ಪರಿಹಾರವಲ್ಲ. ಸಮಾಜದಲ್ಲಿ ಜಾಗೃತಿ ಮತ್ತು ಪರಿವರ್ತನೆ ತರಬೇಕು. ಪರಿಶಿಷ್ಟರಿಗೆ ಸರ್ಕಾರದಿಂದ ವಿವಿಧ ಯೋಜನೆಗಳ ಮೂಲಕ ದೊರೆಯುವ ಸವಲತ್ತುಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರುಗಳು ತೆರಳಿ, ಜನರಲ್ಲಿ ಅರಿವು ಮೂಡಿಸಬೇಕು. ಅಲ್ಲದೆ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಸ್ಪಷ್ಟನೆ ಪಡೆಯಲು ಸೂಚನೆ :
ಪರಿಶಿಷ್ಟರ ಮೇಲಿನ ಜಾತಿ ನಿಂದನೆ ಪ್ರಕರಣಗಳಲ್ಲಿ, ಸಂತ್ರಸ್ಥರಿಗೆ ಸರ್ಕಾರದಿಂದ ಪರಿಹಾರಧನವನ್ನು ಕಾಯ್ದೆಯನುಸಾರ ನೀಡಲಾಗುತ್ತಿದೆ. ಆದರೆ ಕೆಲವು ಪ್ರಕರಣಗಳಲ್ಲಿ ಸಂತ್ರಸ್ಥರು ಸರ್ಕಾರದಿಂದ ಪರಿಹಾರವನ್ನೂ ಪಡೆದು, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ರಾಜಿಯಾಗಿ ಇತ್ಯರ್ಥಪಡಿಸಿಕೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು
ಕೆಲವು ಪ್ರಕರಣಗಳಲ್ಲಿ ನಿಂದನೆ ನ್ಯಾಯಾಲಯದಲ್ಲಿ ಸಾಬೀತಾಗದೆ ಖುಲಾಸೆಯಾಗುತ್ತದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಪರಿಹಾರ ಧನ ಹಿಂಪಡೆಯಲು ಅಗತ್ಯ ನಿರ್ದೇಶನ ಹಾಗೂ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೇಡ ಜಂಗಮ ಜಾತಿ ಪತ್ರ ನೀಡಿಲ್ಲ :
ಜಿಲ್ಲೆಯಲ್ಲಿ ಕೆಲವರು ಬೇಡ ಜಂಗಮ ಎಂದು ಸುಳ್ಳು ಜಾತಿ ಪ್ರಮಾಣಪತ್ರ ಪಡೆದು, ಸರ್ಕಾರದ ಸವಲತ್ತು ಪಡೆದು ವಂಚನೆ ಮಾಡುತ್ತಿದ್ದಾರೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಿತಿಯ ಸದಸ್ಯ ರಾಜಪ್ಪ ಅವರು ಕಳೆದ ಬಾರಿ ಜರುಗಿದ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿದ್ದರು.
ಇದಕ್ಕೆ ಜಿಲ್ಲೆಯಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿಲ್ಲ ಎಂಬುದಾಗಿ ಮೊಳಕಾಲ್ಮೂರು ತಹಸಿಲ್ದಾರರು ಹೊರತುಪಡಿಸಿ, ಉಳಿದ ಎಲ್ಲ ತಹಸಿಲ್ದಾರರು ವರದಿ ನೀಡಿದ್ದಾರೆ. ಒಂದು ವೇಳೆ ಯಾವುದೇ ನಿರ್ದಿಷ್ಟ ಪ್ರಕರಣ ಕಂಡುಬಂದಲ್ಲಿ, ಸಮಿತಿ ಸದಸ್ಯರು ಅಗತ್ಯ ದಾಖಲೆಯೊಂದಿಗೆ ದೂರು ನೀಡಿದಲ್ಲಿ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಿಂದ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸ್ಥಳಾಂತರ ಪರಿಹಾರವಲ್ಲ :
ಹೊಸದುರ್ಗ ತಾಲ್ಲೂಕಿನ ಜಂತಿಕೊಳಲು ಹಾಗೂ ಆಲಘಟ್ಟ ಗ್ರಾಮಗಳಲ್ಲಿ ಜರುಗಿದೆ ಎನ್ನಲಾದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಗಳನ್ನು ಸ್ಥಳಾಂತರಿಸುವಂತೆ ಬೇಡಿಕೆ ಇದೆ. ಇದರಿಂದ ಸಮಸ್ಯೆ ಪರಿಹಾರವಾಗದು ಎಂದು ಜಿಲ್ಲಾಧಿಕಾರಿಗಳು ಹೇಳಿದರು
ಸಂತ್ರಸ್ಥರಿಗೆ ಪರಿಹಾರಧನವನ್ನೂ ವಿತರಿಸಲಾಗಿದೆ. ಈಗಾಗಲೆ ಉಪವಿಭಾಗಾಧಿಕಾರಿಗಳು, ಜನಪ್ರತಿನಿಧಿಗಳಿಂದ ಶಾಂತಿ ಸಭೆ ನಡೆಸಿ, ಎಲ್ಲ ಜಾತಿ, ಜನಾಂಗದವರು ಸಾಮರಸ್ಯದಿಂದ ಬಾಳುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದರು
ಅನಗತ್ಯ ವಿಳಂಬ ಬೇಡ :
ಸಮಿತಿ ಸದಸ್ಯ ಅರುಣ್‍ಕುಮಾರ್ ಮಾತನಾಡಿ, ಪರಿಶಿಷ್ಟರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಮರಣ ಪ್ರಮಾಣಪತ್ರ, ಮರಣೋತ್ತರ ಪರೀಕ್ಷೆ ವರದಿ ನೀಡುವುದನ್ನು ಆಸ್ಪತ್ರೆಯ ವೈದ್ಯರು ನೀಡುವುದನ್ನು ವಿಳಂಬ ಮಾಡುತ್ತಿರುವುದರಿಂದ, ಸಂತ್ರಸ್ಥರ ಕುಟುಂಬದವರಿಗೆ ಪರಿಹಾರ ವಿತರಣೆ ತಡವಾಗುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ರಕ್ಷಣಾಧಿಕಾರಿಗಳು, ಪ್ರಕರಣಗಳಲ್ಲಿನ ಗಂಭಿರತೆಗೆ ಅನುಗುಣವಾಗಿ ವಿಧಿವಿಜ್ಞಾನ ಪ್ರಯೋಗಾಲಯದಿಂದ ಕೆಲವೊಂದು ವರದಿ ಪಡೆಯುವುದು ಅನಿವಾರ್ಯವಾಗಿರುತ್ತದೆ. ಹೀಗಾಗಿ ಮರಣೋತ್ತರ ಪರೀಕ್ಷೆ ವರದಿ ವಿಳಂಬವಾಗುವ ಸಾಧ್ಯತೆಗಳಿರುತ್ತವೆ ಎಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಮರಣ ಪ್ರಮಾಣಪತ್ರ ಹಾಗೂ ಮರಣೋತ್ತರ ಪರೀಕ್ಷಾ ವರದಿ ನೀಡಿಕೆಗೆ ಅನಗತ್ಯ ವಿಳಂಬ ಆಗುವುದು ಬೇಡ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಜಾಗೃತಿ ಮತ್ತು ಉಸ್ತುವಾರಿ ಸಮಿತಿಸದಸ್ಯರುಗಳಾದ ಡಿ. ರಾಜಪ್ಪ, ಅರುಣ್‍ಕುಮಾರ್, ಪೂಲಯ್ಯ, ಜಗದೀಶ್, ಫಾದರ್ ರಾಜು, ಸಿದ್ದಮ್ಮ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಂಜುಳಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.