ಸೊಳ್ಳೆಗಳ ನಿಯಂತ್ರಣಕ್ಕಾಗಿ ಸ್ವಚ್ಚತೆ ಕಾಪಾಡಿ

ಚಿತ್ರದುರ್ಗ

    ನೀರಿನ ಮಾಲಿನ್ಯದಿಂದ ಹಲವು ರೋಗಗಳು ಉಂಟಾಗುತ್ತಿದ್ದು, ಸಾರ್ವಜನಿಕರು ಮನೆಯ ತೊಟ್ಟಿಗಳಲ್ಲಿ ನೀರನ್ನು ಸಂಗ್ರಹಿಸಿ ಬಳಸಬೇಕಾದರೆ, ತೊಟ್ಟಿಗಳನ್ನು ಸ್ವಚ್ಚಗೊಳಿಸಿಕೊಂಡು ನೀರನ್ನು ಸಂಗ್ರಹಿಸಿ ಬಳಸಿ ಹಾಗೂ ನೀರಿನಲ್ಲಿ ಕ್ರಿಮಿಕೀಟಗಳು ಬೀಳದಂತೆ ತೊಟ್ಟಿಗಳಿಗೆ ಮುಚ್ಚಳ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.

    ನಗರದ ರಂಗಯ್ಯನ ಬಾಗಿಲು ಬಳಿಯ ಎಸ್.ಜಿ. ಪ್ಯಾರಾಮೆಡಿಕಲ್ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಡೆಂಗೀ ದಿನಾಚರಣೆಯ ಅಂಗವಾಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಡೆಂಗ್ಯೂ ಜಾಗೃತ ಜಾಥಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

     ಮನೆಗಳ ಸುತ್ತಮುತ್ತಲು ಇರುವ ಪರಿಸರವು ಅದಗೆಡವುದರಿಂದ ಮಾಲಿನ್ಯ ಉಂಟಾಗಿ ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮನೆಗಳಲ್ಲಿ ಸೇರಿಕೊಳ್ಳುತ್ತವೆ, ಸೊಳ್ಳೆಗಳು ಮನುಷ್ಯರಿಗೆ ಕಚ್ಚುವುದರಿಂದ ರೋಗಗಳು ಬರುತ್ತವೆ, ಅದರಿಂದ ಮನೆಗಳ ಸುತ್ತಲು ಇರುವಂತ ಪರಿಸರವನ್ನು ಸ್ವಚ್ಚ ಮಾಡಿಕೊಳ್ಳಿ ಎಂದು ತಿಳಿಸಿದರು.

     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ನಗರ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚು ಕಂಡು ಬರುವುದರಿಂದ ಹೆಚ್ಚಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಕುಡಿಯುವ ನೀರು ಸಂಗ್ರಹಿಸುವ ಪರಿಕರಗಳನ್ನು ವಾರಕ್ಕೊಮ್ಮೆಯಾದರು ಸ್ವಚ್ಚವಾಗಿ ತೊಳೆದು ನೀರು ಸಂಗ್ರಹಿಸಿಕೊಳ್ಳಬೇಕು. ತೆರೆದ ಪರಿಕರಗಳಲ್ಲಿ ನೀರನ್ನು ಸಂಗ್ರಹಿಸುವುದರಿಂದ ಸೊಳ್ಳೆಗಳು ನೀರಿನಲ್ಲಿ ಸಂತತಿ ಬೆಳೆಸಿಕೊಳ್ಳುತ್ತವೆ, ಆದ್ದರಿಂದ ತೆರೆದ ಪರಿಕರಗಳಲ್ಲಿ ನೀರನ್ನು ಸಂಗ್ರಹಿಸಿಕೊಳ್ಳಬಾರದು ಎಂದು ಹೇಳಿದರು

     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಮಾತನಾಡಿ, ಡೆಂಗ್ಯೂ ರೋಗದ ಪ್ರಕರಣಗಳು ಕಳೆದ ವರ್ಷಕ್ಕಿಂತ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ನಗರ ಪ್ರದೇಶದಲ್ಲಿ ಕೆಲವು ಡೆಂಗ್ಯೂ ಪ್ರಕರಣಗಳು ಸಂಭವಿಸಿದ್ದು, ಅದರಿಂದ ಚಿಕಿತ್ಸಾ ನಿಯಂತ್ರಣಾ ಪ್ರಕ್ರಿಯೆ ಚುರುಕಾಗಿದೆ ಅದರಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಡೆಂಗ್ಯೂ ನಿಯಂತ್ರಣ ಕಾರ್ಯಕ್ಕೆ ಕೈ ಜೋಡಿಸಿಬೇಕೆಂದು ಮನವಿ ಮಾಡಿದರು.

      ಕೀಟಜನ್ಯ ನಿಯಂತ್ರಣಾಧಿಕಾರಿ ಡಾ. ಜಯಮ್ಮ ಮಾತನಾಡಿ ಮನೆಗಳಲ್ಲಿ ಸೊಳ್ಳೆ ಪರದೆಯನ್ನು ಉಪಯೋಗಿಸಿ ವಾರದಲ್ಲಿ ಒಂದು ದಿನ ಡ್ರೈ ಡೇ ಯನ್ನು ಆಚರಿಸಿ, ಮನೆಗಳಲ್ಲಿ ಸೊಳ್ಳೆಗಳ ಸಂತತಿ ಬೆಳೆಯದಂತೆ ಮುಂಜಾಗ್ರತೆ ವಹಿಸಿ, ಸೊಳ್ಳೆಯ ಉತ್ಪತ್ತಿಯ ಮೂಲವನ್ನು ನಾಶಗೊಳಿಸಬೇಕು ಎಂದು ಹೇಳಿದರು.

      ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಮಂಜುನಾಥ, ಕೀಟ ಶಾಸ್ತ್ರಜ್ಞೆ ನಂದಿನಿ, ಖಾಸಿಸಾಬ್, ಅಬುಸ್ಟಾಲೇಹ ಹನುಮಂತಪ್ಪ, ನಾಗರಾಜ್, ಗಂಗಾರೆಡ್ಡಿ ಭಾಗವಹಿಸಿದ್ದರು.ಇದೇ ವೇಳೆ ಜಾಥದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು, ನಗರ ಪ್ರದೇಶದ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಅರೆ ವೈದ್ಯಕೀಯ ಸಿಬ್ಬಂದಿಗಳು ಸೇರಿ ‘ಕೀಟ ಚಿಕ್ಕದು ಕಾಟ ದೊಡ್ಡದು’ ಎಂದು ಘೋಷಣೆ ಕೂಗುತ್ತ ನಗರದ ರಂಗಯ್ಯ ಬಾಗಿಲು, ದೊಡ್ಡಪೇಟೆ,ಚಿಕ್ಕಪೇಟೆ, ಆನೆಬಾಗಿಲು ಮೂಲಕ ಗಾಂಧಿ ವೃತ್ತದವರೆಗೆ ತಲುಪಿ ನಂತರ ಲಕ್ಷ್ಮೀ ಬಜಾರ್, ಅಸರ್ ಮೊಹಲ್ಲಾ ಮೂಲಕ ಸಾಗಿ ಎಸ್.ಜಿ ಪ್ಯಾರಾಮೆಡಿಕಲ್ ಕಾಲೇಜು ಆವರಣ ತಲುಪಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap