ಚಿತ್ರದುರ್ಗ:
ಬರಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿ ದೊಡ್ಡ ಮರಗಳನ್ನಾಗಿ ಬೆಳೆಸಿದರೆ ಬರಗಾಲವನ್ನು ಹೋಗಲಾಡಿಸಲು ಸಾಧ್ಯ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ತಿಳಿಸಿದರು.ಕೇವಾ ಇಂಡಸ್ಟ್ರಿಸ್, ಕೇವಾ ಡಿಜಿಟಲ್ ವಲ್ರ್ಡ್ ಇವರುಗಳ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಇತ್ತೀಚೆಗೆ ನಡೆದ ಜಲಶಕ್ತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಂದು ವರ್ಷಕ್ಕೆ ಐದು ಲಕ್ಷ ಸಸಿಗಳನ್ನು ನೆಟ್ಟು ನರ್ಸರಿ ಮಾಡುವ ಉದ್ದೇಶ ಹೊಂದಲಾಗಿದೆ. ಪ್ರತಿ ವರ್ಷವೂ ಬರಗಾಲವನ್ನೇ ಎದುರಿಸುತ್ತಿರುವ ಈ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ-ಬೆಳೆಯಾಗಿ ರೈತರು ಸೇರಿದಂತೆ ಸಕಲ ಜೀವರಾಶಿಗಳು ನೆಮ್ಮದಿಯಿಂದಿರಬೇಕಾದರೆ ಹಸಿರು ವಾತಾವರಣ ಸೃಷ್ಟಿಸುವುದು ಪ್ರತಿಯೊಬ್ಬರ ಹೊಣೆಯಾಗಬೇಕು. ಭೂಮಿಗೆ ಬೀಳುವ ಮಳೆ ನೀರನ್ನು ವ್ಯರ್ಥ ಮಾಡದೆ ಮಳೆನೀರು ಕೊಯ್ಲು ಮಾಡುವುದು ಒಂದು ಸುಲಭದ ಮಾರ್ಗ. ಜಲಾಮೃತ ಯೋಜನೆಯನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಸಿರಸಿಯ ಡಾ.ರಮೇಶ್ ಹೆಗಡೆ ಮಾತನಾಡಿ ಚಿಕ್ಕ ಚಿಕ್ಕ ಮಕ್ಕಳಿಗೆ ಚಾಕೊಲೇಟ್ ತಿನ್ನಿಸುವುದು ಒಂದು ಫ್ಯಾಶನ್ ಆಗಿದೆ. ಅದಕ್ಕೆ ಬದಲಾಗಿ ಒಳ್ಳೊಳ್ಳೆ ಕೇವಾ ಉತ್ಪನ್ನಗಳನ್ನು ಮಕ್ಕಳಿಗೆ ತಿನ್ನಿಸಿದರೆ ಚಿಕ್ಕಂದಿನಿಂದಲೇ ಮಕ್ಕಳು ಆರೋಗ್ಯವಂತರಾಗಿರಬಹುದು. ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ಬಹಳಷ್ಟು ಮಂದಿಗೆ ಕೇವಾ ಉತ್ಪನ್ನಗಳಿರುವುದೇ ಗೊತ್ತಿಲ್ಲ ಎಂದು ತಿಳಿಸಿದರು.
ಫಿಲ್ಟರ್ ನೀರು ಕುಡಿಯುವುದರಿಂದ ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ. ಬಾಟಲ್ ನೀರು ಹಾಗೂ ಫಿಲ್ಟರ್ ನೀರಿನಲ್ಲಿ ಲವಣಾಂಶಗಳಿರುವುದಿಲ್ಲ. ಕೇವಾ ಇಂಡಸ್ಟ್ರಿಸ್‍ನಲ್ಲಿ ಸಿಗುವ ಮಿನರಲ್ ಡ್ರಾಪ್ಸ್‍ನ್ನು ನೀರಿಗೆ ಬೆರೆಸಿಕೊಂಡು ಕುಡಿದರೆ ಬೆನ್ನುಹುರಿ, ಕೀಲು ನೋವು, ಮೊಣಕಾಲು ನೋವು ಇವುಗಳೆಲ್ಲ ಮಾಯವಾಗಿಬಿಡುತ್ತವೆ ಎಂದು ಕೇವಾ ಉತ್ಪನ್ನಗಳಿಂದಾಗುವ ಪ್ರಯೋಜನವನ್ನು ವಿವರಿಸಿದರು.ಜಲಶಕ್ತಿ ಅಭಿಯಾನದ ಜಿಲ್ಲಾ ಸಂಚಾಲಕ ಡಾ.ಕೆ.ಕೆ.ಕಮಾನಿ, ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಕೇವಾ ಡಿಜಿಟಲ್ ವಲ್ರ್ಡ್‍ನ ದಾದಾಪೀರ್, ಮೈಲಾರಲಿಂಗೇಶ್ವರ ನರ್ಸಿಂಗ್ ಶಾಲೆಯ ತಿಪ್ಪೇಸ್ವಾಮಿ, ಅಬ್ದುಲ್ ಸಮದ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ