ಆಧುನಿಕತೆಯ ಸವಾಲು ಎದುರಿಸಲು ನ್ಯಾನೋ ತಂತ್ರಜ್ಞಾನ ಅವಶ್ಯಕ : ಸಿಎಂ

ಬೆಂಗಳೂರು

   ನಗರೀಕರಣ, ಹೆಚ್ಚಾಗುತ್ತಿರುವ ಜನಸಂಖ್ಯೆ, ಬದಲಾಗುತ್ತಿರುವ ಜೀವನಶೈಲಿ, ಭವಿಷ್ಯದಲ್ಲಿನ ಆಹಾರ ಭದ್ರತೆ, ಇಂಧನ ಭದ್ರತೆ, ಶುದ್ಧ ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ, ಮತ್ತಿತರ ಕ್ಷೇತ್ರಗಳಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ನ್ಯಾನೋ ಆಧಾರಿತ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ.

    ನಗರದಲ್ಲಿಂದು 11ನೇ ನ್ಯಾನೋ ತಂತ್ರಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದ ಸಹಕಾರದ ನೆರವಿನೊಂದಿಗೆ ರಾಜ್ಯದಲ್ಲಿ ನ್ಯಾನೋ ಪಾರ್ಕ್ ಅನ್ನು ಅಭಿವೃದ್ಧಿ ಪಡಿಸಲಾಗುವುದು ಇದರಡಿ ಸಂಶೋಧನೆ ನಡೆಸಿ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ವಿಜ್ಞಾನಿಗಳಿಗೆ ಮನವಿ ಮಾಡಿದರು.

   ನ್ಯಾನೋ ತಂತ್ರಜ್ಞಾನ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯವನ್ನು ಒದಗಿಸಿ, ದೊಡ್ಡಮಟ್ಟದಲ್ಲಿ ನ್ಯಾನೋ ತಂತ್ರಜ್ಞಾನ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದ ಅವರು ರಾಜ್ಯದಲ್ಲಿ ಶೇ. 12 ರಷ್ಟು ಜಿಎಸ್‌ಟಿಪಿ ಬೆಳವಣಿಗೆ ಸಾಧಿಸಿದೆ ಹಾಗೂ ದೇಶದಲ್ಲಿ ಅತಿಹೆಚ್ಚು ಪ್ರಗತಿ ಸಾಧಿಸಿರುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ ಎಂದವರು ಹೇಳಿದರು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖ್ಯಾತ ವಿಜ್ಞಾನಿ ಹಾಗೂ ಭಾರತ ರತ್ನ ಸಿ.ಎನ್.ಆರ್. ರಾವ್ ಮಾತನಾಡಿ ನ್ಯಾನೋ ತಂತ್ರಜ್ಞಾನ ಭವಿಷ್ಯದ ತಂತ್ರಜ್ಞಾನವಾಗಲಿದೆ. ಸಣ್ಣ ಅಣುವಿನಂತಿರುವ ಈ ತಂತ್ರಜ್ಞಾನ ಜಾಗತಿಕವಾಗಿ ದೊಡ್ಡಪ್ರಮಾಣದಲ್ಲಿ ಪಸರಿಸಲಿದೆ ಎಂದು ಹೇಳಿದರು.

ರೋಗಿಗಳಿಗೆ ಚಿಕಿತ್ಸೆ

    ಕೃಷಿ, ವೈದ್ಯಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದ್ದು, ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಆಧರಿಸಿ, ರೂಪುಗೊಂಡಿರುವ ಔಷಧಿಗಳು ಕ್ಯಾನ್ಸರ್, ಅಲ್ಜೀಮರೋ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವುದು ಎಂದರು.

    ನ್ಯಾನೋ ತಂತ್ರಜ್ಞಾನ ಭವಿಷ್ಯದ ತಂತ್ರಜ್ಞಾನವಾಗಿದ್ದು, ಕೃಷಿ, ಕೈಗಾರಿಕೆ, ಎಲೆಕ್ಟ್ರಾನಿಕ್ ಕಮ್ಯುನಿಕೇಷನ್, ಆರೋಗ್ಯ, ಇಂಧನ, ಮತ್ತಿತರ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನ ಮಹತ್ವವಾಗಿದ್ದು, ದಿನನಿತ್ಯದ ಜೀವನದಲ್ಲಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ಇದೆ. ಬರುವ ದಿನಗಳಲ್ಲಿ ಈ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾಗುವ ಆಶಯವನ್ನು ವ್ಯಕ್ತಪಡಿಸಿದರು.
ಈ ತಂತ್ರಜ್ಞಾನ ಪರಿಣಾಮ ಆಗಾಧವಾಗಿದ್ದು, ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ರಾಜ್ಯ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.

ವಿಜ್ಞಾನ ರಾಜಧಾನಿ

      ಕರ್ನಾಟಕ ಈಗಾಗಲೇ ದೇಶದಲ್ಲಿ ತಂತ್ರಜ್ಞಾನ ವಲಯ, ಬಂಡವಾಳ ಹೂಡಿಕೆ ಮತ್ತು ರಫ್ತುನಲ್ಲೂ ಮುಂಚೂಣಿಯಲ್ಲಿದ್ದು, ಜಾಗತಿಕವಾಗಿ ಬಂಡವಾಳ ಹೂಡಿಕೆಗೆ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ ಹಾಗೂ ರಾಜ್ಯದಲ್ಲೂ ವ್ಯಾಪಾರ ವಹಿವಾಟು, ಉದ್ದಿಮೆ ನಡೆಸುವವರಿಗೆ ಅಗತ್ಯವಾದ ಸುಲಲಿತ ವಹಿವಾಟು ನಡೆಸಲು ರಾಜ್ಯ ಸರ್ಕಾರ ಅಗತ್ಯವಾದ ನೆರವು ಒದಗಿಸುವ ಮೂಲಕ ಕರ್ನಾಟದ ದೇಶದ ವಿಜ್ಞಾನ ರಾಜಧಾನಿಯಾಗಿ ಹೊರಹೊಮ್ಮಿದ್ದು ಐಟಿಬಿಟಿ ರಾಜ್ಯವಾಗಿಯೂ ಖ್ಯಾತಿ ಹೊಂದಿದೆ ಎಂದರು.

     ನನಗೆ 86 ವರ್ಷ, ಕಳೆದ 70 ವರ್ಷಗಳಿಂದ ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ದಣಿವಾಗುವುದೇ ಗೊತ್ತಾಗುವುದಿಲ್ಲ. ಈ ತಂತ್ರಜ್ಞಾನದಲ್ಲಿ ಯುವಜನತೆ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಅವರು ಕರೆನೀಡಿದರು.

ನ್ಯಾನೋ ಪ್ರಶಸ್ತಿ

      ಇದೇ ಸಂದರ್ಭದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿದವರಿಗೆ ಪ್ರೊ.ಸಿ.ಎನ್.ಆರ್. ರಾವ್ ಬೆಂಗಳೂರು, ಇಂಡಿಯಾ ನ್ಯಾನೋ ವಿಜ್ಞಾನ ಪ್ರಶಸ್ತಿಯನ್ನು ಎಸ್.ಆರ್.ಪಿ.ಎಸ್. ಅನಿಲ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕ ರಿಜ್ವಾನ್ ಹರ್ಷದ್, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ. ವಿ.ವಿ. ರಮಣರೆಡ್ಡಿ, ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ