ಬೌದ್ಧಿಕ ಸಂಪತ್ತು ಸಂಪಾದನೆಗೆ ಅಧ್ಯಯನಶೀಲರಾಗಿ

ದಾವಣಗೆರೆ:

         ಹಣ, ಬಂಗಾರ, ಆಸ್ತಿಯಂತಹ ಭೌತಿಕ ಸಂಪತ್ತು ನಮ್ಮ ಬಳಿ ಶಾಶ್ವತವಾಗಿರುವುದಿಲ್ಲ. ಆದರೆ, ಬೌದ್ಧಿಕ ಸಂಪತ್ತು ಮಾತ್ರ ನಮ್ಮೊಂದಿಗೆ ಶಾಶ್ವತವಾಗರಲಿದೆ. ಆದ್ದರಿಂದ ಈ ಭೌದ್ದಿಕ ಸಂಪತ್ತು ಸಂಪಾದಿಸಲು ಪ್ರತಿಯೊಬ್ಬರೂ ಗ್ರಂಥ ಅಧ್ಯಯನಕ್ಕೆ ಮುಂದಾಗಬೇಕೆಂದು ವಿರಕ್ತ ಮಠದ ಶ್ರೀಬಸವಪ್ರಭು ಸ್ವಾಮೀಜಿ ಕರೆ ನೀಡಿದರು.

           ಇಲ್ಲಿನ ವಿರಕ್ತಮಠದಲ್ಲಿನ ಡಾ.ಶಿ.ಮು.ಶ. ಸಂಯುಕ್ತ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ `ಬೌದ್ಧಿಕ ವಿಕಸನ ಪ್ರಬಂಧ- ಚರ್ಚಾ ಸ್ಪರ್ಧೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ದೇವರು ನೀಡಿದ ಬುದ್ದಿಯನ್ನು ಅರಳಿಸಿಕೊಳ್ಳಬೇಕು. ಬುದ್ದಿ ಅರಳಿದರೆ ಮಾನವನ ಬದುಕು ಸಹ ಅರಳಲಿದೆ ಎಂದು ಹೇಳಿದರು.

           ಪ್ರತಿಯೊಬ್ಬರಿಗೂ ದೇವರು ಸರಿಸಮಾನವಾಗಿ ಬುದ್ದಿಯನ್ನು ನೀಡಿರುತ್ತಾನೆ. ಯಾರೂ ಅದನ್ನು ಸರಿಯಾಗಿ ಬಳಸಿಕೊಂಡು ಬೆಳೆಸಿಕೊಳ್ಳುತ್ತಾರೊ ಅವರು ಸಾಧಕರಾಗುತ್ತಾರೆ. ನಮ್ಮಲ್ಲಿರುವ ಬುದ್ದಿಯನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಜೀವನಪೂರ್ತಿ ನಾವು ಸಾಮಾನ್ಯರಾಗಿಯೇ ಉಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

            ಶಾಲೆಯಲ್ಲಿ ಅಧ್ಯಾಪಕರು ಮಾಡುವ ಪಾಠವನ್ನು ಚೆನ್ನಾಗಿ ಕೇಳಿಸಿಕೊಂಡು, ಅದನ್ನು ಪುನರ್ ಮನನ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಅದು ನಮ್ಮ ನೆನಪಿನಲ್ಲಿ ಉಳಿದು, ಅಗತ್ಯ ಸಂದರ್ಭಕ್ಕೆ ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನುಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಖರಪ್ಪ ಮಾತನಾಡಿ, ಅನ್ನ, ಅಕ್ಷರ, ಆಶ್ರಯಗಳನ್ನು ನೀಡುವುದೇ ಮಠಗಳ ಉದ್ದೇಶ. ಆ ಕಾರ್ಯವನ್ನು ದಾವಣಗೆರೆಯ ದೊಡ್ಡಪೇಠೆಯ ವಿರಕ್ತಮಠ ಮಾಡುತ್ತಿರುವುದು ಶ್ಲಾಘನೀಯ ಎಂದರು.

            ಮಕ್ಕಳು ಉತ್ತಮ ಪ್ರಜೆಗಳಾಗಬೇಕು. ಇದಕ್ಕಾಗಿ ಚೆನ್ನಾಗಿ ಅಭ್ಯಾಸ ಮಾಡಿ, ಉತ್ತಮ ಅಂಕಗಳೊಂದಿಗೆ ಉತ್ತಿರ್ಣರಾಗಬೇಕು. ಸಮಯಕ್ಕೆ ಬೆಲೆ ನೀಡಬೇಕು. ಇದರ ಜೊತೆಗೆ ವಿವಿಧ ರೀತಿಯಲ್ಲಿ ಶಾಲಾ- ಕಾಲೇಜುಗಳಲ್ಲಿ ನಡೆಯುವ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ, ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

            ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ರವಿ, ಎಸ್.ಜೆ.ಎಂ. ಶಾಲೆಯ ಮುಖ್ಯ ಶಿಕ್ಷಕಿ ಲತಾ, ವ್ಯವಸ್ಥಾಪಕ ಶರಣಬಸವ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link