ತಂಬಾಕು ನಿಯಂತ್ರಣ ಸಾಕಾರಕ್ಕೆ ದಂಡ ವಿಧಿಸಿ

ದಾವಣಗೆರೆ :

    ತಂಬಾಕು ನಿಯಂತ್ರಣಕ್ಕೆ ಕೇವಲ ಗುಲಾಬಿ ಆಂದೋಲನದ ಮೂಲಕ ಮನವೊಲಿಸದೇ, ಇದು ಸಾಕಾರಗೊಳ್ಳಬೇಕಾದರೆ ದಂಡಂ ದಶಗುಣಂ ಎನ್ನುವ ಹಾಗೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ.ಆನಂದ್ ಅವರು ತಂಬಾಕು ನಿಯಂತ್ರಣ ತಂಡಕ್ಕೆ ಸಲಹೆ ನೀಡಿದರು.

     ಇಲ್ಲಿನ ಚೇತನಾ ಹೋಟೆಲ್ ಸಭಾ ಭವನದಲ್ಲಿ ಶುಕ್ರವಾರ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಕೋಟ್ಪಾ ಕಾಯ್ದೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಸುಮ್ಮನೆ ಒಮ್ಮೆ ಪ್ರಯತ್ನಿಸಲು, ಫ್ಯಾಷನ್‍ಗೆ ಅಥವಾ ಮತ್ತಾವುದೋ ಕಾರಣಕ್ಕೆ ಶುರುವಾದ ಇದರ ಬಳಕೆ ದುಶ್ಚಟವಾಗಿ ಪರಿಣಮಿಸಿ ಅವರ ಜೀವನವನ್ನೇ ಬಲಿ ತೆಗೆದುಕೊಳ್ಳುವ ಹಂತಕ್ಕೆ ಬರುತ್ತದೆ. ಆದ್ದರಿಂದ ತಂಬಾಕು ನಿಯಂತ್ರಣ ತಂಡವು ಗ್ರಾಮೀಣ ಹಾಗೂ ನಗರಗಳ ಶಾಲಾ-ಕಾಲೇಜು ಸುತ್ತಮುತ್ತಲಿನ ಅಂಗಡಿಗಳಿಗೆ ದಾಳಿ ನಡೆಸಿ ದಂಡ ಮತ್ತು ಪ್ರಕರಣ ದಾಖಲಿಸಬೇಕು. ಕೇವಲ ಗುಲಾಬಿ ಆಂದೋಲನದ ಮೂಲಕ ಮನವೊಲಿಸದೇ ದಂಡಂ ದಶಗುಣಂ ಎನ್ನುವ ಹಾಗೆ ದಂಡ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

    ಬಹಳ ಹಿಂದಿನಿಂದ ನಮ್ಮಲ್ಲಿ ತಂಬಾಕು ಬಳಕೆಯಲ್ಲಿದೆ. ದುರಾದೃಷ್ಟವೆಂದರೆ ಇತ್ತೀಚೆಗೆ 15 ರಿಂದ 20 ವರ್ಷದೊಳಗಿನ ಯುವಜನತೆ ಈ ತಂಬಾಕಿನ ವಿವಿಧ ಉತ್ಪನ್ನಗಳಿಗೆ ಬಲಿಯಾಗುತ್ತಿದ್ದಾರೆ. ಇದೊಂದು ಮಾರಕ ದುಶ್ಚಟವಾಗಿದ್ದು ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ, ಪೊಲೀಸ್, ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.

     ಗ್ರಾಮೀಣ ಮಟ್ಟದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಪಿಡಿಓಗಳು ತಂಬಾಕು ದಾಳಿ ನಡೆಸುವ ಅಧಿಕಾರ ಹೊಂದಿದ್ದು, ತಂಡಗಳನ್ನು ರಚಿಸಿಕೊಂಡು ಪ್ರತಿ 15 ದಿನಗಳಿಗೊಮ್ಮೆ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕು. 2 ತಿಂಗಳಾದರೂ ತಂಬಾಕು ಉತ್ಪನ್ನ ಮಾರಾಟ ನಿಲ್ಲಿಸದಿದ್ದಲ್ಲಿ, ತಂಬಾಕು ನಿಷೇಧ ಫಲಕ ಹಾಕದಿದ್ದಲ್ಲಿ ಪ್ರಕರಣ ದಾಖಲಿಸಬೇಕು. ನಗರ ಪ್ರದೇಶದ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಸುತ್ತಮುತ್ತಲೂ ಡ್ರಗ್ ಮಾಫೀಯಾ ಬೆಳೆಯುತ್ತಿದೆ ಎಂಬ ವರದಿ ಇದ್ದು ಈ ಬಗ್ಗೆಯೂ ಪೊಲೀಸ್ ಇಲಾಖೆ ಶಿಸ್ತಿನ ಕ್ರಮ ಕೈಗೊಳ್ಳುವ ಮೂಲಕ ಮಕ್ಕಳ ಬಾಳನ್ನು ಸಂರಕ್ಷಿಸಬೇಕೆಂದು ಮನವಿ ಮಾಡಿದರು.

    ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾನೂನು-ಕೋಟ್ಪಾ 2003 ನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ನಿರಂತರವಾಗಿ ತಂಬಾಕು ದಾಳಿ, ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬರಲಾಗಿದೆ. ಅಂಗಡಿಗಳಿಗೆ ಮೊದಲು ದಂಡ ವಿಧಿಸಲಾಗುತ್ತಿತ್ತು.

     ತಂಬಾಕು ಉತ್ಪನ್ನ ಮಾರದಂತೆ ಮನವೊಲಿಸಲು ಇತ್ತೀಚೆಗೆ ‘ಗುಲಾಬಿ ಆಂದೋಲನ’ ಹಮ್ಮಿಕೊಂಡು ಅವರಿಗೆ ಗುಲಾಬಿ ನೀಡುವ ಮೂಲಕ ಅರಿವು ಮತ್ತು ಮನವೊಲಿಸುವ ಕಾರ್ಯ ಮಾಡಲಾಗುತ್ತಿದೆ. ಹಾಗೂ ತಮ್ಮ ಶಿಕ್ಷಣ ಸಂಸ್ಥೆಗಳನ್ನು ತಂಬಾಕುಮುಕ್ತಗೊಳಿಸಲು ಸಹಕರಿಸಿದ 30 ಮುಖ್ಯೋಪಾಧ್ಯಾಯರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಹಾಗೂ 40 ಜನ ತಂಬಾಕು ಬೆಳೆಗಾರರಿಗೆ ಕಾರ್ಯಾಗಾರ ನಡೆಸಿ ಪೂರಕ ಬೆಳೆ ಬೆಳೆಯುವಂತೆ ಉತ್ತೇಜಿಸಲಾಗಿದೆ ಎಂದು ಮಾಹಿತಿ ನೀಡಿದರು.

     ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಗಂಗಾಧರ್ ಮಾತನಾಡಿ, ಹದಿಹರೆಯದವರೇ ಹೆಚ್ಚಾಗಿ ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಇವರನ್ನು ಕೇಂದ್ರೀಕರಿಸಿ ನಿರ್ಬಂಧ ಕಾರ್ಯ ಚುರುಕಾಗಬೇಕು. ಗ್ರಾಮೀಣ ಮಟ್ಟದಿಂದಲೂ ಸೇರಿದಂತೆ ಎಲ್ಲ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು. ತಂಬಾಕು ಉತ್ಪನ್ನಗಳ ಮಾರಾಟ, ಬಳಕೆಗೆ ನಿರ್ಬಂಧ ಹೇರುವಿಕೆ ಪರಿಣಾಮಕಾರಿಯಾಗಬೇಕು. ಕೋಟ್ಪಾ ಕಾಯ್ದೆ ಅನುಷ್ಠಾನದ ನಂತರ ಸುಧಾರಣೆ ಕಂಡುಬಂದಿದೆ. ಆದರೆ ಇನ್ನೂ ಸುಧಾರಣೆ ಕಾಣಬೇಕಿದ್ದು, ಅನೇಕ ಸಾವುಗಳ ಹಿಂದೆ ತಂಬಾಕಿನ ಸೇವನೆಯೇ ಕಾರಣವಗಿದೆ ಎಂದರು.

     ರಾಜ್ಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ, ಸಿ.ಜಿ.ಆಸ್ಪತ್ರೆ ದಂತ ವಿಭಾಗದ ಮುಖ್ಯಸ್ಥರಾದ ಡಾ.ತಿಪ್ಪೇಸ್ವಾಮಿ, ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕರಾದ ಮಹಾಂತೇಶ ಉಳ್ಳಾಗಡ್ಡಿ, ವಾರ್ತಾ ಸಹಾಯಕಿ ಭಾಗ್ಯ ಎಂ.ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪಿಡಿಓ ರೇಖಾ ಮತ್ತು ರೂಪ ಪ್ರಾರ್ಥಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಉಮಾಪತಿ ಸ್ವಾಗತಿಸಿ, ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap