ಮಾರಕ ರೋಗಗಳ ತಡೆಗೆ ಹಂದಿಗಳನ್ನು ಹೊರಸಾಗಿಸಿ

ಚಿತ್ರದುರ್ಗ:

       ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಮೆದುಳು ಜ್ವರ, ಹೆಚ್1ಎನ್1 ನಂತಹ ಮಾರಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಇದರ ನಿಯಂತ್ರಣಕ್ಕಾಗಿ ಹಂದಿಗಳನ್ನು ನಗರ ಮತ್ತು ಪಟ್ಟಣ ಪ್ರದೇಶ ವ್ಯಾಪ್ತಿಯಿಂದ ದೂರ ಪ್ರದೇಶಕ್ಕೆ ಸಾಗಿಸಲು ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತಾಕೀತು ಮಾಡಿದರು.

       ಜಿಲ್ಲೆಯಲ್ಲಿ ಕೀಟಜನ್ಯ ರೋಗಗಳ ನಿಯಂತ್ರಣ ಹಾಗೂ ಮಾರಕ ರೋಗಗಳ ನಿಯಂತ್ರಣ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಜಿಲ್ಲಾ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

         ಜಿಲ್ಲೆಯಲ್ಲಿ ಈ ವರ್ಷ ಹಂದಿಗಳ ಕಾರಣದಿಂದ ಸೊಳ್ಳೆಗಳ ಮೂಲಕ ಹರಡುವ ಮೆದುಳು ಜ್ವರ, ಫೈಲೇರಿಯಾ, ಹೆಚ್1ಎನ್1 ರೋಗಗಳು ಉಲ್ಬಣಗೊಳ್ಳುವ ವರದಿಗಳು ಬರುತ್ತಿದ್ದು, ಇದನ್ನು ತಡೆಗಟ್ಟಲು ಹಂದಿಗಳನ್ನು ನಗರ, ಪಟ್ಟಣ ಪ್ರದೇಶಗಳಿಂದ ಹೊರಗೆ ಸಾಗಿಸುವುದು ಅತ್ಯವಶ್ಯಕವಾಗಿದೆ. ಜಿಲ್ಲೆಯಲ್ಲಿ ಈ ವರ್ಷ 2 ಮೆದುಳು ಜ್ವರ, 05- ಫೈಲೇರಿಯಾ ಪ್ರಕರಣ ಹಾಗೂ ಹೆಚ್1ಎನ್1 ನ 21 ಪ್ರಕರಣಗಳು ದೃಢಪಟ್ಟಿವೆ. ಇಬ್ಬರು ಹೆಚ್1ಎನ್1 ನಿಂದ ಸಾವನ್ನಪ್ಪಿದ್ದಾರೆ. ಹಂದಿಗಳನ್ನು ಹೊರಸಾಗಿಸಲು ಸಹಜವಾಗಿ ಪ್ರತಿರೋಧ ವ್ಯಕ್ತವಾಗುವ ಸಾಧ್ಯತೆಗಳಿದ್ದರೂ, ಜನರ ಆರೋಗ್ಯ ಕಾಪಾಡುವುದು ಹಾಗೂ ಮಾರಕ ರೋಗಗಳು ಹರಡುವುದನ್ನು ತಡೆಗಟ್ಟುವುದು ನಮ್ಮ ಮೊದಲ ಆದ್ಯತೆಯಾಗಿದೆ.

         ಹೀಗಾಗಿ ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಹಂದಿ ಸಾಕಾಣಿಕೆದಾರರಿಗೆ ನೋಟೀಸ್ ನೀಡಿ, ಕಾನೂನು ರೀತ್ಯ ಕ್ರಮ ಜರುಗಿಸಬೇಕು. ಈ ಕಾರ್ಯ ಆದಷ್ಟು ತ್ವರಿತವಾಗಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು. ಹೆಚ್1ಎನ್1 ರೋಗ ಬಹುಬೇಗ ಇತರರಿಗೆ ಹರಡುವಂತಹ ರೋಗವಾಗಿದ್ದು, ಪ್ರಕರಣಗಳು ಕಂಡುಬಂದ ಪ್ರದೇಶಗಳಲ್ಲಿ ಸುತ್ತಮುತ್ತಲ ಮನೆಗಳ ಜನರ ಆರೋಗ್ಯದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

          ರೋಗಿ ಸಂಪೂರ್ಣ ಗುಣಮುಖವಾಗುವವರೆಗೂ, ಆತನ ಆರೋಗ್ಯದ ಕುರಿತು ಸಂಬಂಧಪಟ್ಟ ವ್ಯಾಪ್ತಿಯ ಆರೋಗ್ಯ ಕೇಂದ್ರದ ವೈದ್ಯರು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

        ಸೊಳ್ಳೆಗಳ ನಿಯಂತ್ರಣ ಅಗತ್ಯ : ಜಿಲ್ಲಾ ಕೀಟಜನ್ಯ ನಿಯಂತ್ರಣಾಧಿಕಾರಿ ಡಾ. ಬಿ. ಜಯಮ್ಮ ಅವರು, ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಹಂದಿಗಳಿಂದ ಸೊಳ್ಳೆಗಳ ಮೂಲಕ ಹರಡುವ ಮೆದುಳು ಜ್ವರ ಹಾಗೂ ಆನೆಕಾಲು ರೋಗ ಪ್ರಕರಣಗಳು ಕಂಡುಬರುತ್ತಿದ್ದು, ಆತಂಕಕಾರಿ ವಿಷಯವಾಗಿದೆ. ಸದ್ಯ ಬೇಸಿಗೆ ಇರುವುದರಿಂದ, ಸೊಳ್ಳೆಗಳ ಹಾವಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

        ಈ ವರ್ಷ ಜಿಲ್ಲೆಯಲ್ಲಿ 2 ಮಲೇರಿಯಾ, 8 ಡೆಂಗೀ, 13- ಚಿಕೂನ್‍ಗುನ್ಯಾ ಪ್ರಕರಣಗಳು ವರದಿಯಾಗಿವೆ. ಬೇಸಿಗೆಯಲ್ಲಿ ಸಾರ್ವಜನಿಕರಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿರುವುದರಿಂದ, ಜನರು ಮುಂಜಾಗ್ರತಾ ಕ್ರಮವಾಗಿ ಅಸುರಕ್ಷಿತವಾಗಿ ನೀರು ಸಂಗ್ರಹಿಸುತ್ತಾರೆ. ಇದು ಸೊಳ್ಳೆಗಳ ಉತ್ಪತ್ತಿಗೆ ಪೂರಕ ವಾತಾವರಣ ಸೃಷ್ಟಿಯಾದಂತಾಗುತ್ತದೆ.

         ಇತ್ತೀಚೆಗೆ ಮನೆ, ಮನೆಯಲ್ಲಿ ಕೈಗೊಂಡ ಲಾರ್ವ ಸಮೀಕ್ಷೆಯಲ್ಲಿ ಚಿತ್ರದುರ್ಗ ನಗರದಲ್ಲಿಯೇ ಸುಮಾರು 3000 ಮನೆಗಳಲ್ಲಿ ಮಾರಕ ರೋಗಕಾರಕ ಸೊಳ್ಳೆಗಳ ಲಾರ್ವ ಪತ್ತೆಯಾಗಿವೆ ಎಂದರು. ಜನರು ವಾರಕ್ಕೊಮ್ಮೆ ನೀರು ಸಂಗ್ರಹಣಾಗಾರಗಳನ್ನು ಸ್ವಚ್ಛವಾಗಿ ತೊಳೆದು, ಒಣಗಿಸಿ, ಬಳಿಕವೇ ನೀರು ತುಂಬಿಸಿಕೊಳ್ಳಬೇಕು. ಜನರಲ್ಲಿ ಈ ಕುರಿತು ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಅರಿವು ಮೂಡಿಸಬೇಕು. ರಜಾ ದಿನಗಳಲ್ಲಿ ಶಾಲೆಗಳಲ್ಲಿನ ನೀರು ಸಂಗ್ರಹಣಾಗಾರಗಳನ್ನು ಖಾಲಿ ಮಾಡಿ ಇಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

        ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಅವರು ಮಾತನಾಡಿ, ಸೊಳ್ಳೆಗಳ ನಿಯಂತ್ರಣಕ್ಕಾಗಿ ನಗರ, ಪಟ್ಟಣ ಪ್ರದೇಶಗಳಲ್ಲಿನ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ಫಾಗಿಂಗ್ ಮಾಡಬೇಕು. ಹಾಸ್ಟೆಲ್‍ಗಳಲ್ಲಿಯೂ ನೀರಿನ ಸಂಗ್ರಹಣೆಯನ್ನು ಸುರಕ್ಷಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.ಸಭೆಯಲ್ಲಿ ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರೇಣುಪ್ರಸಾದ್, ಡಿಡಿಪಿಐ ಅಂಥೋನಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link