ದಾವಣಗೆರೆ :
ಜ್ಞಾನದ ಹಸಿವು ಇದ್ದವರು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ದೇವರಾಜ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್, ಪಿ.ಎಸ್.ಐ ಹಾಗೂ ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜ್ಞಾನ ಮುಖ್ಯವೇ ಹೊರತು ಅಂಕಗಳಲ್ಲ. ಹೀಗಾಗಿ ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗೆ ಸೀಮಿತವಾಗದೆ ಜ್ಞಾನದ ಬೆನ್ನು ಹತ್ತಬೇಕು. ಮಾಕ್ರ್ಸ್ ಕಾರ್ಡ್ ನೋಡಿ ಕೆಲಸ ನೀಡುವ ಪ್ರವೃತ್ತಿ ಇಂದು ಬದಲಾಗುತ್ತಿದೆ. ಸರ್ಕಾರಿ ಕೆಲಸ ಪಡೆಯಲು ಎಲ್ಲಾ ವಿದ್ಯಾರ್ಥಿಗಳು ಸಮಾನ ಅವಕಾಶವನ್ನು ಹೊಂದಿರುತ್ತಾರೆ. ಜ್ಞಾನವನ್ನು ಹೊಂದಿರುವ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಸರ್ಕಾರಿ ಹುದ್ದೆ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.
ಈ ಪ್ರಪಂಚದಿಂದ ನಾವು ಹೋದರೂ ನಮ್ಮ ಗುರುತು ಅಚ್ಚಳಿಯದೇ ಇರಬೇಕು. ಅಂತಹ ಸಾಧನೆ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು. ನಮ್ಮಲ್ಲಿ ಸಾಧಿಸುವ ಉತ್ಕಟ ಬಯಕೆ ಇರಬೇಕು. ಆ ಬಯಕೆ ನಮ್ಮನ್ನು ಸಾಧನೆಯೆಡೆಗೆ ಕೊಂಡೊಯ್ಯುತ್ತದೆ. ಎಂದ ಅವರು, ನಾನು ಏಕೆ ಓದುತ್ತಿದ್ದೇನೆ ಎಂಬ ಕಲ್ಪನೆ ನಮ್ಮಲ್ಲಿ ಮೂಡಬೇಕು. ಮೊದಲು ನಾನು ಓದುವುದು ನನ್ನ ಅನ್ನ ಸಂಪಾದನೆ ಮಾಡಿಕೊಳ್ಳುವುದಕ್ಕೆ. ನಂತರ ನಾನು ಬಯಸಿದ ಕೆಲಸವನ್ನು ನಾನು ಪಡೆಯುತ್ತೇನೆಯೇ ಹೊರತು ಸಿಕ್ಕಿದನ್ನಲ್ಲ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕೆಂದು ಆಶಿಸಿದರು.
ಯಾವುದೇ ಶಿಖರವನ್ನು ಹತ್ತಿರ ನಿಂತು ನೋಡಿದಾಗ ಬಹಳ ಎತ್ತರ ಕಾಣುತ್ತದೆ. ಒಂದೊಂದೇ ಮೆಟ್ಟಿಲು ಹತ್ತಿ ಶಿಖರದ ತುದಿಗೆ ಹೋದರೆ ಅದು ನಮ್ಮ ಪದತಲದಲ್ಲಿರುತ್ತದೆ. ಹಾಗಾಗಿ ಯಾವುದಕ್ಕೂ ಎದೆಗುಂದದೆ ಸಾಧನಾ ಶ್ರಮಜೀವಿಗಳಾಗಿರಬೇಕು. ಕಲಿಕಾರ್ಥಿಯಾಗಿ ಎಲ್ಲರೂ ಹೇಳುವುದನ್ನು ಕೇಳಿಸಿಕೊಳ್ಳಬೇಕು. ನಾನಷ್ಟೇ ಸರಿ ಉಳಿದವರು ಸರಿ ಇಲ್ಲ ಎಂಬ ತಪ್ಪು ಮನೋಭಾವದಿಂದ ಹೊರ ಬರಬೇಕು.
ಒಳ್ಳೆಯದನ್ನು ಆಯ್ದು ಒಳ್ಳೆಯ ಗುರಿಯೆಡೆಗೆ ಸಾಗಬೇಕು ಎಂದು ಕರೆ ನೀಡಿದರು.ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಯಾವ ರೀತಿ ಇರಬೇಕು ಎಂಬುದನ್ನು ನಾವು ಮೊದಲು ತಿಳಿಯಬೇಕು. ಸಾಧನೆಗೆ ರಂಗ ಮುಖ್ಯವಲ್ಲ . ನಾವು ಏನನ್ನು ಸಾಧಿಸಬೇಕು ಆದನ್ನು ಸಾಧಿಸುವ ಛಲವನ್ನು ಹೊಂದಬೇಕು. ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್, ಪಿ.ಎಸ್.ಐ ಪರೀಕ್ಷೆಗಳಲ್ಲಿ ಬರೆಯುವ ಉತ್ತರಗಳು ನಮ್ಮ ವ್ಯಕ್ತಿತ್ವವನ್ನು ಮತ್ತು ಸಮಾಜದ ಬಗ್ಗೆ ನಾವು ಹೊಂದಿರುವ ಕಾಳಜಿಯನ್ನು ಪರೀಕ್ಷಿಸುತ್ತವೆ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಷಯದ ಆಯ್ಕೆಯಲ್ಲಿ ಜಾಗೃತಿ ವಹಿಸಬೇಲಾಗಿದೆ. ಓದಿನ ಆಂತರಿಕ ಅಧ್ಯಯನ ಮುಖ್ಯವಾಗುತ್ತದೆ. ಆದ್ದರಿಂದ ಹಲವು ವಿಷಯಗಳ ಬಗ್ಗೆ ಗೊಂದಲ ಮೂಡಿಸಿಕೊಳ್ಳದೇ ಒಂದೇ ವಿಷಯವನ್ನು ಕೇಂದ್ರೀಕರಿಸಿ ಅಧ್ಯಯನ ಮಾಡಬೇಕೆಂದು ಕಿವಿಮಾತು ಹೇಳಿದರು.
ನಿಷ್ಠೆಯಿಂದ ದಿನಕ್ಕೆ ಒಂದು ಪುಟವನ್ನು ಓದಿದರೂ ನಾವು ಜ್ಞಾನದ ಮಾಲೀಕರಾಗುತ್ತೇವೆ. ಇತರರನ್ನು ದೂಷಿಸುವ ಸ್ವಭಾವ ಬದಲಾಗಬೇಕು. ಸ್ವ ಪ್ರೇರಣೆಯಿಂದ ಓದಿನಲ್ಲಿ ಆಸಕ್ತಿ ಹೊಂದಬೇಕು. ಯಶಸ್ಸು ಸಣ್ಣದಾಗಿಯೇ ಆರಂಭವಾಗುತ್ತದೆ ಎಂದರು.
ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾತನಾಡಿ, ಪರೀಕ್ಷೆ, ಸಾಧನೆ ಎಂಬುದು ಒಂದು ತಪಸ್ಸು. ಎಷ್ಟು ಓದಿದ್ದೇವೆ ಎಂಬುದಕ್ಕಿಂತ ಎಷ್ಟು ಮನನ ಮಾಡಿಕೊಂಡಿದ್ದೇವೆ ಎಂಬುದು ಮುಖ್ಯ. ಪರೀಕ್ಷಾಭ್ಯಾಸ ಆರಂಭಿಸಿದಾಗ ಹಲವಾರು ಸವಾಲುಗಳು ಎದುರಾಗುತ್ತವೆ. ಆದರೆ, ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಅಭ್ಯಾಸ ಮಾಡಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್‍ನಲ್ಲಿ ವ್ಯಾಸಂಗ ಮಾಡಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ಬಿ.ಎಂ.ದಾರುಕೇಶ್, ನಿವೃತ್ತ ಯೋಧ ಮಂಜಾನಾಯ್ಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮುದುಕಣ್ಣನವರ್, ಸಂಪನ್ಮೂಲ ವ್ಯಕ್ತಿ ರಾಮಚಂದ್ರರಾವ್ ಮತ್ತಿತರರು ಉಪಸ್ಥಿತರಿದ್ದರು.