ಬೆಂಗಳೂರು
ದೇಶ ಗಣರಾಜ್ಯವಾದ ಈ ದಿನ ನಮ್ಮ ದೇಶದ ಅಭಿವೃದ್ಧಿಗೆ ಕಠಿಣ ಶ್ರಮ ಪಡುತ್ತೇವೆಂಬ ಬದ್ಧತೆಯನ್ನು ಪುನರ್ ದೃಢೀಕರಿಸುವ ಸುಸಂದರ್ಭವಾಗಿದೆ. ವಿಶೇಷವಾಗಿ ಮೂಲಭೂತ ಕರ್ತವ್ಯಗಳ ಆಂದೋಲನವನ್ನು ದೇಶಾದ್ಯಂತ ಆಯೋಜಿಸುತ್ತಿರುವ ಈ ಸಂದರ್ಭದಲ್ಲಿ ನಾಗರಿಕರಾಗಿ ನಮ್ಮ ಕರ್ತವ್ಯಗಳ ಬಗ್ಗೆ ಗಮನ ಹರಿಸುವುದಕ್ಕೂ ಇದು ಸೂಕ್ತ ಕಾಲ ಎಂದು ರಾಜ್ಯಪಾಲ ವಜುಬಾಯಿ ವಾಲಾ ಹೇಳಿದ್ದಾರೆ.
ಮಾಣಿಕ್ ಷಾ ಮೈದಾನದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದ ರಾಜ್ಯಮಟ್ಟದ ಪ್ರಧಾನ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಪೆÇಲೀಸ್ ಇಲಾಖೆಯ ತನಿಖೆಗಳನ್ನು ತ್ವರಿತ ಗತಿಯಲ್ಲಿ ಮಾಡಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಸರ್ಕಾರದ ಸಾಧನೆಯನ್ನು ವಿವರಿಸಿದರು.
ಮಧ್ಯರಾತ್ರಿ ರಸ್ತೆಗಳಲ್ಲಿ ಒಬ್ಬ ಮಹಿಳೆ ಮುಕ್ತವಾಗಿ ಓಡಾಡುವ ದಿನವೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಂತೆ ಎಂದು ರಾಷ್ಟ್ರಪಿತ ಮಹಾತ್ಮಗಾಂಧಿಯವರು ಹೇಳಿದ್ದರು. ಅದರಂತೆ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಿಕೊಡಲಾಗಿದೆ ಎಂಬುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ನಮ್ಮ ಪುರುಷರು ಮತ್ತು ಬಾಲಕರಿಗೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸುವ ಶಿಕ್ಷಣವನ್ನು ನೀಡಬೇಕಿದೆ ಎಂದು ರಾಜ್ಯಪಾಲರು ಪ್ರತಿಪಾದಿಸಿದರು.
ಕರ್ನಾಟಕ ದೇಶದಲ್ಲೇ ಉತ್ತಮ ಆಡಳಿತ ನಿರ್ವಹಣಾ ಸೂಚ್ಯಂಕಗಳಲ್ಲಿ 3ನೆ ಸ್ಥಾನ ಪಡೆಯುವುದರೊಂದಿಗೆ ಮುಂಚೂಣಿ ರಾಜ್ಯವಾಗಿ ದೇಶದ ಎಲ್ಲ ರಾಜ್ಯಗಳಿಗೂ ಮಾದರಿಯಾಗಿದೆ. 118 ವರ್ಷಗಳ ನಂತರ ರಾಜ್ಯದಲ್ಲಿ ಭಾರೀ ಪ್ರವಾಹ ಬಂದಿದೆ. ಇದರಿಂದ ಒಂದು ಕುಟುಂಬಕ್ಕೆ ತಲಾ 2 ಲಕ್ಷ ಕುಟುಂಬಕ್ಕೆ 10 ಸಾವಿರ ಕೂಡಲೇ ಪರಿಹಾರ ನೀಡಲಾಯಿತು. ಮನೆ ಕಳೆದು ಕೊಂಡವರಿಗೆ 5 ಲಕ್ಷ ಪರಿಹಾರ ಕೊಡಲಾಗಿದೆ. 1 ಲಕ್ಷದ ಒಳಗಿನ ಬೆಳೆ ಸಾಲ ಮನ್ನಾ ಮಾಡಲಾಗಿದೆ. 21 ಲಕ್ಷ ರೈತರು ಇದರ ಲಾಭ ಪಡೆದಿದ್ದಾರೆ ಎಂದು ಹೇಳಿದರು.
ಕೆಲಸಕ್ಕೆ ಬಾರದ ಕಲ್ಪನೆಗಳನ್ನು ಮತ್ತು ಮೂಢನಂಬಿಕೆಗಳನ್ನು ತ್ಯಜಿಸಿ ವೈಜ್ಞಾನಿಕ ಏಕತಾ ಮತ್ತು ಕಲ್ಪನಾ ಮನೋಭಾವದಿಂದ ಎಲ್ಲರೂ ದೇಶದ ಪ್ರಗತಿಗೆ ಶ್ರಮಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮತ್ತು ನಮ್ಮ ದೇಶವನ್ನು ಪುನರ್ ನಿರ್ಮಾಣ ಮಾಡಿದ ಅಸಂಖ್ಯಾತ ಜನರ ತ್ಯಾಗ ಮತ್ತು ಬಲಿದಾನವನ್ನು ಈ ದಿನ ಸ್ಮರಿಸಿಕೊಳ್ಳುತ್ತ ನಾವೆಲ್ಲರೂ ವಿನಮ್ರವಾಗಿ ಹಾಗೂ ಪ್ರಾಮಾಣಿಕವಾಗಿ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲೆ ಸಾಗುತ್ತೇವೆಂದು ಪ್ರತಿಜ್ಞೆ ಮಾಡೋಣ ಎಂದರು.
ರೈತ ಕಲ್ಯಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರೂ.ಗಳ ಜತೆಗೆ ರಾಜ್ಯಸರ್ಕಾರವು 4 ಸಾವಿರ ರೂ.ಗಳನ್ನು ಸೇರಿಸಿ ಪ್ರತಿ ವರ್ಷ 10 ಸಾವಿರ ರೂ.ಗಳನ್ನು ರೈತರ ಖಾತೆಗೆ ಹಾಕಲಾಗುತ್ತಿದೆ. ಸಹಕಾರ ಬ್ಯಾಂಕುಗಳಲ್ಲಿ ಒಂದು ಲಕ್ಷ ರೂ. ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ 2 ಲಕ್ಷ ರೂ. ವರೆಗಿನ ರೈತರ ಸಾಲ ಬಾಕಿಯನ್ನು ಮನ್ನಾ ಮಾಡುವ ಯೋಜನೆ ಜಾರಿಯಾಗಿದ್ದು ಈ ವರ್ಷದ ಮಾರ್ಚ್ ಹೊತ್ತಿಗೆ ಸಾಲ ಮನ್ನಾ ಯೋಜನೆ ಪೂರ್ಣಗೊಂಡು ಸುಮಾರು 21 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದರು.
ರಾಜ್ಯದಲ್ಲಿ ಬರ ತಡೆಯಲು ಜಲಾಯನ ಅಭಿವೃದ್ಧಿ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತ್ತಿದೆ. ಆಯ್ದ 3 ಬರಪೀಡಿತ ಮತ್ತು ಕಡಿಮೆ ಅಂತರ್ಜಲ ತಾಲ್ಲೂಕುಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ನೀರಾವರಿ ಸೌಲಭ್ಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಹಂತ 3 ಕಾಮಗಾರಿಗಳ ಪ್ರಗತಿಯನ್ನು ತ್ವರಿತಗೊಳಿಸಲಾಗಿ. ಸುಮಾರು 5500 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 12 ಕೆರೆ ತುಂಬಿಸುವ ಯೋಜನೆ ಸೇರಿದಂತೆ 20 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಬಂಡವಾಳ ಆಕರ್ಷಿಸಲು ಬರುವ ಫೆಬ್ರುವರಿಯಲ್ಲಿ ಹುಬ್ಬಳ್ಳಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ. ನಾವೀನ್ಯತೆಯನ್ನು ಉತ್ತೇಜಿಸಲು ಕರ್ನಾಟಕ ನಾವೀನ್ಯ ಪ್ರಾಧಿಕಾರ ಸ್ಥಾಪಿಸಲಾಗಿದೆ. ರಾಜ್ಯದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸಲು ಪಾವಗಡದಲ್ಲಿ ಸ್ಥಾಪಿಸಲಾಗಿರುವ ಸೋಲಾರ್ ಪಾರ್ಕ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ ಎಂದರು.
ರಸ್ತೆ ಅಭಿವೃದ್ಧಿಗೂ ಸರ್ಕಾರ ಒತ್ತು ನೀಡಿದ್ದು, 10 ಸಾವಿರ ಕಿ.ಮೀ.ಗಳಷ್ಟು ಹೆದ್ದಾರಿ ಸುಧಾರಣೆಗೆ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ 3692 ಕಿ.ಮೀ. ರಸ್ತೆ ಕಾಮಗಾರಿ ನಡೆದಿದೆ ಎಂದರು.
ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ತಗ್ಗಿಸಲು 156 ಕಿ.ಮೀ.ಗಳಷ್ಟು ಪರ್ಯಾಯ ರಸ್ತೆಗಳ ಅಗಲೀಕರಣಕ್ಕೂ ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ಉಪನಗರದ ರೈಲುಜಾಲ ಅನುಷ್ಠಾನಕ್ಕೂ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.ವಿದ್ಯುತ್ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸಿರುವುದಕ್ಕೆ ಬೆಂಗಳೂರಿನಲ್ಲಿ 92 ವಿದ್ಯುತ್ಚಾಲಿತ ವಾಹನಗಳ ಚಾರ್ಚಿಂಗ್ ಸ್ಥಾಪಿಸುವ ಕೆಲಸ ಆಗಿದೆ. ಈ ಹಣಕಾಸು ವರ್ಷದಲ್ಲಿ ಸುಮಾರು 25 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಒದಗಿಸಲಾಗುವುದು ಎಂದರು.ಈ ವರ್ಷ ಚಿಕ್ಕಮಗಳೂರು, ಯಾದಗಿರಿ, ಹಾವೇರಿಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ಹಾಗೆಯೇ, ಚಿಕ್ಕಬಳ್ಳಾಪುರದಲ್ಲೂ ಆರಂಭಿಸಲಾಗಿದೆ ಎಂದು ರಾಜ್ಯಪಾಲರು ಸರ್ಕಾರದ ಸಾಧನೆಗಳ ಅನಾವರಣ ಮಾಡಿದರು.
ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ನಾಮಕರಣ ಮಾಡಿ, ಈ ಅವಧಿಯಲ್ಲಿ 1500 ಕೋಟಿ ರೂ. ಅನುದಾನ ನೀಡಲಾಗಿದೆ. ರಾಯಚೂರಿನಲ್ಲಿ ಐಐಟಿ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ. ಪರಿಶಿಷ್ಟ ಜಾತಿ/ವರ್ಗದ ಕಲ್ಯಾಣಕ್ಕೂ ಸರ್ಕಾರ ವಿಶೇಷ ಗಮನಹರಿಸಿದ್ದು, ಸುಮಾರು 30,445 ಕೋಟಿ ರೂ.ಗಳ ಉಪಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದರು.
ಆಕರ್ಷಕ ಪಥಸಂಚಲನ: ಗಮನ ಸೆಳೆದ ಪೌರಕಾರ್ಮಿಕರು
ಪಥಸಂಚಲನದಲ್ಲಿ ಪೊಲೀಸ್, ಕೇರಳ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್ಸಿಸಿ, ಸೇವಾದಳ, ವಿವಿಧ ಶಾಲೆಗಳ ಮಕ್ಕಳನ್ನು ಒಳಗೊಂಡಂತೆ ಕವಾಯತು, ಬ್ಯಾಂಡ್ನ ಒಟ್ಟು 44 ತುಕಡಿಗಳಲ್ಲಿ ಸುಮಾರು 1750 ಮಂದಿ ಭಾಗವಹಿಸಿದ್ದರು.ಶಾಲಾ ಮಕ್ಕಳ ಒಟ್ಟು 3 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 2000 ಮಕ್ಕಳು ಭಾಗವಹಿಸಲಿದ್ದಾರೆ. ಬಳಿಕ ರಾಜ್ಯಪಾಲರು ಸವೋತ್ತಮ ಸೇವಾ ಪ್ರಶಸ್ತಿ ವಿತರಣೆ ಮತ್ತು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಆರಂಭದಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು. ಧ್ವಜಾರೋಹಣದ ಬಳಿಕ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ರಾಷ್ಟ್ರಧ್ವಜಕ್ಕೆ ಪುಷ್ಪವೃಷ್ಟಿ ಮಾಡಲಾಯಿತು. ಬಳಿಕ ರಾಜ್ಯಪಾಲರು ಗೌರವ ರಕ್ಷೆ ಸ್ವೀಕರಿಸಿದರು. 44 ತುಕಡಿಗಳ 1750 ವಿದ್ಯಾರ್ಥಿಗಳಿಂದ ಕವಾಯತು ಮತ್ತು ಪಥ ಸಂಚಲನ ನಡೆಯಿತು. ಇದೇ ಮೊದಲ ಬಾರಿಗೆ ಬಿಬಿಎಂಪಿ ಪೌರ ಕಾರ್ಮಿಕರಿಂದ ಸ್ವಚ್ಛ ಭಾರತ್ ಅಭಿಯಾನದ ಜಾಗೃತಿ ಕುರಿತು ಪಥ ಸಂಚಲನ ನಡೆಯಿತು.
ದೇಶಪ್ರೇಮದ ಕಂಪು ಸೂಸಿದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ದೇಶಪ್ರೇಮದ ಕಂಪು ಸೂಸುವಂತಿತ್ತು. ಬೆಂಗಳೂರು ದಕ್ಷಿಣ ಜಿಲ್ಲೆ ತಾವರೆಕೆರೆ ವಿಇಎಸ್ ಮಾಡಲ್ ಕಾನ್ವೆಂಟ್ ಶಾಲೆಯ 600 ಮಕ್ಕಳಿಂದ “ಹಮಾರ ಭಾರತ್ ಮಹಾನ್” ನೃತ್ಯ ರೂಪಕ, ಕಸ್ತೂರ ಬಾ ನಗರದ ಪಾದರಾಯನಪುರ ಚಾಮರಾಜಪೇಟೆಯ ಬಿಬಿಎಂಪಿ ಪ್ರೌಢಶಾಲೆಯ 600 ಮಕ್ಕಳಿಂದ “ಕಲ್ಯಾಣ ಕ್ರಾಂತಿ” ನೃತ್ಯ ಗಮನ ಸೆಳೆಯಿತು. ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆಯ 800 ಮಕ್ಕಳಿಂದ “ಭಾರತ ಭಾಗ್ಯವಿಧಾತ” ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷಕವಾಗಿತ್ತು. ಉಳಿದಂತೆ ದಿ ಆರ್ಮಿ ಸರ್ವೀಸ್ ಕಾರ್ಪ್ಸ್ನ ಒಟ್ಟು 20 ಸದಸ್ಯರಿಂದ ದಿ ಟೋರ್ನಾಡಸ್ ಮೋಟಾರ್ ಸೈಕಲ್ ಪ್ರದರ್ಶನ, ರಾಜ್ಯ ಪೆÇಲೀಸ್ ಆಂತರಿಕ ಭದ್ರತಾ ವಿಭಾಗ ಗರುಡ ಪಡೆಯ 27 ಸದಸ್ಯರಿಂದ ಅಣಕು ಪ್ರದರ್ಶನ ಎಲ್ಲನ ಮೈನವಿರೇಳಿಸುವಂತಿತ್ತು.
ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದರು, ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಕಲ ಸಿದ್ಧತೆ ಕೈಗೊಳ್ಳಲಾಗಿತ್ತು. ಮೈದಾನದ ಸುತ್ತಲೂ ಸರ್ಪಗಾವಲು ಏರ್ಪಡಿಸಲಾಗಿತ್ತು. ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಭದ್ರತೆಗಾಗಿ 9 ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








