ದಾವಣಗೆರೆ:
“ಧೂಮಪಾನ ಮುಕ್ತ ನಗರ” ಎಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹರಿಹರ ನಗರದ ವಿವಿಧೆಡೆ ಗುರುವಾರ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದಿಂದ ತಂಬಾಕು ದಾಳಿ ನಡೆಸಿ, 13 ಪ್ರಕರಣಗಳನ್ನು ದಾಖಲಿಸಿಕೊಂಡು 1900 ರೂ. ದಂಡ ವಿಧಿಸಿದೆ.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕರ ಯೋಜನೆ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾಗೂ ಪೊಲೀಸ್ ಇಲಾಖೆ ಇವರ ಸಹಯೋಗದೊಂದಿಗೆ ತಂಡ ರಚಿಸಿಕೊಂಡು ದಾಳಿ ನಡೆಸಿ, ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಅಧಿನಿಯಮ-2003 ಸೆಕ್ಷನ್ 4 ರಲ್ಲಿ 10 ಪ್ರಕರಣ, ಮತ್ತು 6ಎ ಅಡಿಯಲ್ಲಿ 2, ಸೆಕ್ಷನ್ 6ಬಿ ಅಡಿಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣಗಳನ್ನು ದಾಖಲಿಸಿ, 1900 ರೂ.ಗಳನ್ನು ದಂಡದ ರೂಪದಲ್ಲಿ ಸ್ಥಳದಲ್ಲಿಯೇ ಸಂಗ್ರಹಿಸಲಾಯಿತು.
ತಂಡವು ಶಿವಮೊಗ್ಗ ಕಡೆ ರಸ್ತೆಯ ಸುತ್ತಮುತ್ತಲಿನ ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್, ಪಾನ್‍ಶಾಪ್, ಬಸ್ ನಿಲ್ದಾಣ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಿದರು. ಹಾಗೂ ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲೀಕರುಗಳು ಧೂಮಪಾನ ನಿಷೇಧದ ಬಗ್ಗೆ ಪ್ರದರ್ಶಿಸಬೇಕಾದ ಫಲಕಗಳನ್ನು ಕಟ್ಟುನಿಟ್ಟಾಗಿ ಅಳವಡಿಸಲು ತಾಕೀತು ಮಾಡಿದರು.
ಕೋಟ್ಪಾ ಕಾಯಿದೆಯ ಸೆಕ್ಷನ್ 6ಎ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರುವುದು ಹಾಗೂ ಮಕ್ಕಳಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡಿಸುವುದನ್ನು ನಿಷೇಧಿಸಿರುವುದರ ಬಗ್ಗೆ, ಹಾಗೂ ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ 100 ಯಾರ್ಡ್ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಿರುವುದು, ಸೆಕ್ಷನ್ 4 ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧ ಮತ್ತು ತಂಬಾಕು ಉತ್ಪನ್ನಗಳ ಪ್ಯಾಕ್‍ಗಳ ಮೇಲೆ ಎಚ್ಚರಿಕೆ ಚಿನ್ಹೆ ಇಲ್ಲದೆ ಮಾರಾಟ ಮಾಡುವುದನ್ನು ನಿಷೇಧ ಇರುವ ಬಗ್ಗೆ ತಂಡದ ಸದಸ್ಯರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಚ್.ಪಾಟೀಲ, ನಗರಸಭೆ ಆರೋಗ್ಯ ನೀರಿಕ್ಷಕ ಭೀಮರಾಯಪ್ಪ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಲಹೆಗಾರ ಸತೀಶ ಕಲಹಾಳ, ಸಮಾಜಿಕ ಕಾರ್ಯಕರ್ತ ದೇವರಾಜ್, ಪೊಲೀಸ್ ಇಲಾಖೆಯ ಎಎಸ್‍ಐ ವಿಜಯ್, ಸಹಾಯಕ ರುದ್ರೇಶ್ ಮತ್ತಿತರರು ಹಾಜರಿದ್ದರು.