ನಾಳೆ ವಿಧಾನ ಪರಿಷತ್ ಮತದಾನ..!

ಬೆಂಗಳೂರು

    ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‍ನ ಒಂದು ಸ್ಥಾನದ ಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ನಾಳೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿಧಾನಸೌಧದ ಮೊದಲನೆ ಮಹಡಿಯ ಕೊಠಡಿ ಸಂಖ್ಯೆ 105ರಲ್ಲಿ ಮತದಾನ ನಡೆಯಲಿದೆ.

    ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಆರ್.ಅನಿಲ್‍ಕುಮಾರ್ ಈಗಾಗಲೇ ಕಣದಿಂದ ಹಿಂದೆ ಸರಿದಿರುವುದಾಗಿ ಪ್ರಕಟಿಸಿದ್ದಾರೆ. ಹೀಗಾಗಿ ವಿಧಾನ ಪರಿಷತ್‍ಗೆ ಆಯ್ಕೆಯಾಗಲು ಲಕ್ಷ್ಮಣ ಸವದಿ ಅವರ ಹಾದಿ ಸುಗಮವಾದಂತಾಗಿದೆ.

    ವಿಧಾನ ಪರಿಷತ್ ಚುನಾವಣೆಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಹೀಗಾಗಿ ನಾಳೆ ನಡೆಯುವ ಮತದಾನದಿಂದ ದೂರ ಉಳಿಯುವುದು ಬಹುತೇಕ ಖಚಿತ. ಆಡಳಿತಾರೂಢ ಬಿಜೆಪಿ ಶಾಸಕರು ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮತದಾನದಿಂದ ದೂರ ಉಳಿಯುವುದರಿಂದ ಸವದಿ ಅವರ ಆಯ್ಕೆ ಬಹುತೇಕ ಖಚಿತವಾದಂತಾಗಿದೆ.

   ಚುನಾವಣಾ ಕಣದಿಂದ ಹಿಂದೆ ಸರಿದಿದ್ದರೂ ಪಕ್ಷೇತರ ಅಭ್ಯರ್ಥಿ ಅನಿಲ್‍ಕುಮಾರ್ ಅವರ ಹೆಸರು ಮತಪತ್ರದಲ್ಲಿರುವುದರಿಂದ ಮತದಾನ ನಡೆಯುವುದು ಅನಿವಾರ್ಯವಾಗಿದೆ.ನಾಮಪತ್ರ ಸಲ್ಲಿಕೆಯ ಕಡೆಯ ದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಬೆಂಬಲದ ನಿರೀಕ್ಷೆಯಲ್ಲಿ ಅನಿಲ್‍ಕುಮಾರ್ ನಾಮಪತ್ರ ಸಲ್ಲಿಸಿದ್ದರು.

   ಜೆಡಿಎಸ್ ಶಾಸಕರು ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದ್ದರು. ಆದರೆ, ಈ ಅಭ್ಯರ್ಥಿಯೇ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿರುವುದರಿಂದ ನಾಳಿನ ಮತದಾನದಲ್ಲಿ ಜೆಡಿಎಸ್ ತಟಸ್ಥವಾಗಿ ಉಳಿಯಲಿದೆ. ಮೂರೂ ಪಕ್ಷಗಳು ನಾಳಿನಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಶಾಸಕಾಂಗ ಪಕ್ಷಗಳ ಸಭೆ ಕರೆದಿವೆ. ಆ ಸಭೆಯಲ್ಲಿ ವಿಧಾನ ಪರಿಷತ್ ಚುನಾವಣೆ ಬಗ್ಗೆಯೂ ತಮ್ಮ ತಮ್ಮ ನಿರ್ಧಾರ ತೆಗೆದುಕೊಳ್ಳಲಿವೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap