ದಾವಣಗೆರೆ:
ನಗರದ ಶಿವಯೋಗಿ ಮಂದಿರ ಆವರಣದಲ್ಲಿ ಇಂದು (ಫೆ.23ರಂದು) ಸಂಜೆ 5.30ಕ್ಕೆ ಚಿರಂತನ ಸಾಂಸ್ಕತಿಕ ಸಂಸ್ಥೆಯಿಂದ ಶುದ್ಧ ಶಾಸ್ತ್ರೀಯ ಕಲಾ ಪ್ರಕಾರಗಳ ಲಯ-ಲಾಸ್ಯ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ದೀಪಾ ತಿಳಿಸಿದರು.ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಂಜೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಡೂಡಾ ಆಯುಕ್ತ ಆದಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಮತ್ತಿತರರು ಭಾಗವಹಿಸಲಿದ್ದಾರೆಂದು ಹೇಳಿದರು.ವಿನೂತನ ಶಾಸ್ತ್ರೀಯ ಪ್ರಯೋಗವಾದ ದ್ವಂದ್ವ ವೀಣಾ ಹಾಗೂ ಚಿಂತನ ರಾಮಾಯಣ ನೃತ್ಯರೂಪಕವು ಕಾರ್ಯಕ್ರಮದ ವಿಶೇಷವಾಗಿದೆ. ಮೈಸೂರಿನ ಭರತಾಂಜಲಿ ಪ್ರಸ್ತುತಪಡಿಸುವ ನೃತ್ಯರೂಪಕದ ಸಂಯೋಜನೆಯನ್ನು ಕರ್ನಾಟಕ ಕಲಾಶ್ರೀ ಡಾ.ಶೀಲಾ ಶ್ರೀಧರ್ ಮಾಡಿದ್ದಾರೆ. ಸುಮಾರು 15 ಜನ ಕಲಾವಿದೆಯರು ನಡೆಸಿಕೊಡುವ ನೃತ್ಯರೂಪಕದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ಯುವಜನರಲ್ಲಿರುವ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ದ್ವಂದ್ವ ವೀಣಾ ಕಛೇರಿಯನ್ನು ವಿದುಷಿ ರೇವತಿ ಕಾಮತ್, ಮೀನಾ ಮೂರ್ತಿ ನಡೆಸಿಕೊಡುವರು. ವಿದ್ವಾನ್ ಎಸ್.ವಿ.ಗಿರಿಧರ್ ಮೃದಂಗ, ಭಾನುಪ್ರಕಾಶ್ ಕಂಜರ ಹಾಗೂ ಮೋಚಿಂಗ್ ಮತ್ತು ವಿದ್ವಾನ್ ಶ್ರೀಧರ್ ಘಟಂ ಸಾಥ್ ನೀಡಲಿದ್ದಾರೆ. ಸಾರ್ವಜನಿಕರು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಲಕಾನಂದ ರಾಮದಾಸ್, ರಾಜು ಭಂಡಾರಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ