ನಾಳೆ ಭದ್ರಾಮೇಲ್ದಂಡೆ ಯೋಜನೆ ಕಚೇರಿಗೆ ಮುತ್ತಿಗೆ

ಚಿತ್ರದುರ್ಗ:

        ಭದ್ರಾಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ ಐದು ಸಾವಿರ ಕೋಟಿ ರೂ.ಗಳನ್ನು ಮೀಸಲಿಡುವಂತೆ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಒತ್ತಾಯಿಸಿ ಫೆ.6 ರಂದು ಬೆಳಿಗ್ಗೆ ಹತ್ತು ಗಂಟೆಗೆ ಭದ್ರಾಮೇಲ್ದಂಡೆ ಯೋಜನೆ ಕಚೇರಿಗೆ ಮುತ್ತಿಗೆ ಹಾಕಿiಕಲಾಗುವುದು. ರೈತರು, ಕೂಲಿಕಾರ್ಮಿಕರು, ಸಾರ್ವಜನಿಕರು, ವಿವಿಧ ಸಂಘಟನೆಗಳವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮನವಿ ಮಾಡಿದರು.

         ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಈಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ವೆಂಟರಮಣಪ್ಪ, ನೀರಾವರಿ ಸಚಿವರು ಕಳೆದ ಮೂರು ವರ್ಷಗಳಿಂದಲೂ ಭದ್ರಾ ಮೇಲ್ದಂಡೆ ಯೋಜನೆ 2018 ಕ್ಕೆ ಪೂರ್ಣಗೊಳ್ಳಲಿದೆ ಎಂದು ಮುಗ್ದ ರೈತರು ಹಾಗೂ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ.

         ಯೋಜನೆಗೆ ಬೇಕಾದ ಹಣವನ್ನೇ ಬಿಡುಗಡೆ ಮಾಡಿಲ್ಲ. ಯಾವ ಆಧಾರದ ಮೇಲೆ ಯೋಜನೆ ಪೂರ್ಣಗೊಳ್ಳಲಿದೆ ಎನ್ನುವುದನ್ನು ಜಿಲ್ಲೆಯ ರೈತರಿಗೆ ಹಾಗೂ ಜನರಿಗೆ ಮನವರಿಕೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

          ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಅಧಿಕಾರದಲ್ಲಿದ್ದಾಗ ಭದ್ರಾಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿತು. 2013 ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮಾರ್ಚ್-2015 ರಲ್ಲಿ ಕ್ಯಾಬಿನೆಟ್ ಮೀಟಿಂಗ್‍ನಲ್ಲಿ ಭದ್ರಾಮೇಲ್ದಂಡೆ ಯೋಜನೆಯ ಮೊತ್ತವನ್ನು 12340 ರೂ.ಗಳಿಗೆ ಹೆಚ್ಚಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದೆ. ಡಿ.2016 ರೊಳಗೆ ನೀರಾವರಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಟಿ.ಜಿ.ಜಯಚಂದ್ರ ಹೇಳಿದ್ದರು.

           ಹೆಚ್.ಆಂಜನೇಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 2017 ಕ್ಕೆ ಭದ್ರಾಮೇಲ್ದಂಡೆ ಯೋಜನೆ ಮುಗಿಯಲಿದೆ ಎಂದು ಜಿಲ್ಲೆಯ ರೈತರ ಮೂಗಿಗೆ ತುಪ್ಪು ಸವರುವ ಕೆಲಸ ಮಾಡಿದರು. ಡಿ.2017 ಕ್ಕೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2018 ಕ್ಕೆ ನೀರಾವರಿ ಯೋಜನೆ ಪೂರ್ಣವಾಗಲಿದೆ ಎಂದು ಬಿಜೆಪಿ.ಸರ್ಕಾರದಲ್ಲಿ ಚಾಲನೆ ನೀಡಿದ್ದ ಕಾಮಗಾರಿಗೆ ಮರು ಚಾಲನೆ ನೀಡಿ ಮಧ್ಯಕರ್ನಾಟಕ ಬಯಲುಸೀಮೆ ರೈತರು ಹಾಗೂ ಜನತೆಗೆ ಪೆಂಗನಾಮ ಹಾಕಿದ್ದಾರೆ ಎಂದು ಲೇವಡಿ ಮಾಡಿದರು.

           ಹಿರಿಯೂರು ತಾಲೂಕಿನ ವಿ.ವಿ.ಸಾಗರದಿಂದ ಮುಂದೆ ಹೋಗುವ ಚಾನಲ್‍ಗೆ ಒಂದು ಇಂಚು ಭೂಮಿಯನ್ನು ಇನ್ನು ವಶಪಡಿಸಿಕೊಂಡಿಲ್ಲ. ಜಿಲ್ಲೆಯ 157 ಕೆರೆಗಳನ್ನು ನೀರು ತುಂಬಿಸಲು ಗುರುತಿಸಿದ್ದು, ನೀರಾವರಿ ಯೋಜನೆ ಜಾರಿಯಾಗುವುದರೊಳಗೆ ಎಲ್ಲಾ ಕೆರೆಗಳನ್ನು ದುರಸ್ಥಿಗೊಳಿಸಿ ಗ್ರಾಮೀಣ ಪ್ರದೇಶದ ಬಡವರ ಕೈಗೆ ಕೆಲಸ ಕೊಡಿ ಎಂದು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಒತ್ತಾಯಿಸಿದ ಕೆ.ಎಸ್.ನವೀನ್ ಕಳೆದ ಮೂರು ವರ್ಷಗಳಿಂದಲೂ ರೈತರನ್ನು ದಾರಿತಪ್ಪಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್.ವಾಸ್ತವ ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಕೊಡಲಿ ಎಂದು ಎಚ್ಚರಿಸಿದರು.

           ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ, ಕೆ.ಹೆಚ್.ಮುನಿಯಪ್ಪ ಇವರುಗಳನ್ನು ಭೇಟಿಯಾಗಿ ರೈಲ್ವೆ ಯೋಜನೆಗೆ ಬೇಕಾಗುವ ಭೂಮಿ ಹಾಗೂ ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ.50 ರಷ್ಟು ಹಣವನ್ನು ಭರಿಸುವುದಾಗಿ ವಾಗ್ದಾನ ಮಾಡಿದ್ದರು. ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತು ಈಗಿನ ಸಮ್ಮಿಶ್ರ ಒಂದು ಇಂಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ-ದಾವಣಗೆರೆ-ತುಮಕೂರು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ ಇದರ ವಿರುದ್ದ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.

          2012 ರಲ್ಲಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಚಿತ್ರದುರ್ಗ ಸೇರಿ ಆರು ಜಿಲ್ಲೆಗಳಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿ ಹಣ ಬಿಡುಗಡೆಗೊಳಿಸಿ ತಾಂತ್ರಿಕ ಒಪ್ಪಿಗೆ ನೀಡಿದ್ದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್.ಸರ್ಕಾರಗಳು ಮೆಡಿಕಲ್ ಕಾಲೇಜಿಗೆ ನಯಾ ಪೈಸೆಯನ್ನು ಬಿಡುಗಡೆಗೊಳಿಸುವುದಾಗಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡುವ ಗೋಜಿಗೆ ಹೋಗಿಲ್ಲದಿರುವುದು ಬಯಲುಸೀಮೆ ಜನತೆಯ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

          ಚಿತ್ರದುರ್ಗ ಜಿಲ್ಲೆ ಅತ್ಯಂತ ಬರಪೀಡಿತ ಹಿಂದುಳಿದ ಪ್ರದೇಶವಾಗಿರುವುದರಿಂದ ಆದ್ಯತೆ ಮೇಲೆ ಮೆಡಿಕಲ್ ಕಾಲೇಜಿಗೆ ಮೊದಲ ಪ್ರಾಶಸ್ತ್ಯ ನೀಡುವಂತೆ ಜಿಲ್ಲಾಡಳಿತ2013 ರಲ್ಲಿಯೇ ಆರೋಗ್ಯ ಸಚಿವರಿಗೆ ವರದಿ ನೀಡಿದೆ. ಎಲ್ಲವೂ ತಾತ್ಕಾಲಿಕ ವ್ಯವಸ್ಥೆಯಾಗಿರು ವುದರಿಂದ ಭದ್ರಾಮೇಲ್ದಂಡೆ ಯೋಜನೆ, ನೇರ ರೈಲು ಮಾರ್ಗ, ಮೆಡಿಕಲ್ ಕಾಲೇಜು ಇವೆಲ್ಲವೂ ಸಮ್ಮಿಶ್ರ ಸರ್ಕಾರದ ಕನಸಿನ ಮಾತು. ಈಗಲಾದರೂ ರಾಜ್ಯ ಸಮ್ಮಿಶ್ರ ಸರ್ಕಾರ ಜಿಲ್ಲೆಯ ಜನರ ನೋವು ಸಂಕಟಗಳನ್ನು ಅರ್ಥಮಾಡಿಕೊಳ್ಳಲಿ ಎಂದು ತರಾಟೆ ತೆಗೆದುಕೊಂಡರು.

           ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿ, ಮಲ್ಲಿಕಾರ್ಜುನ್, ರತ್ನಮ್ಮ, ವಕ್ತಾರರಾದ ದಗ್ಗೆಶಿವಪ್ರಕಾಶ್, ನಾಗರಾಜ್‍ಬೇದ್ರೆ, ಓ.ಬಿ.ಸಿ.ಮೋರ್ಚದ ಪ್ರವೀಣ್, ರೈತ ಮೋರ್ಚ ಜಿಲ್ಲಾಧ್ಯಕ್ಷ ಡಿ.ರಮೇಶ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link