ಬೆಂಗಳೂರು
ದೇಶೀಯ ಮಾರುಕಟ್ಟೆ ರಕ್ಷಣೆಗೆ ಸರಕು ಮತ್ತು ಸೇವೆಗಳ ಆಮದಿನ ಮೇಲೆ ಅತಿಯಾದ ನಿಯಂತ್ರಣ, ವಿಶ್ವ ವ್ಯಾಪಾರ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಸೇಂಟ್ ಜೋಸೆಫ್ಸ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವ ವ್ಯಾಪಾರ ಸಂಸ್ಥೆ – ಡಬ್ಲ್ಯೂಟಿಒ ದಾಖಲೆ ಮತ್ತು ಒಪ್ಪಂದಕ್ಕೆ ಭಾರತದ ಪರ ತಾವು ಸಹಿ ಮಾಡಿದ್ದು, ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿ, ವ್ಯಾಪಾರ ನಿರ್ಬಂಧ ತೆಗೆದು ಹಾಕುವ ಬಗ್ಗೆ ಪ್ರತಿಜ್ಞೆ ಮಾಡಲಾಗಿತ್ತು ಎಂದರು.
ದುರದೃಷ್ಟವಶಾತ್, ಇಂದು ಸ್ಥಳೀಯ ಮಾರುಕಟ್ಟೆ ರಕ್ಷಣೆ ಹೆಚ್ಚುತ್ತಿದ್ದು, ಇದು ವಿಶ್ವ ವ್ಯಾಪಾರ ಫಲಿತಾಂಶದ ಮೇಲೆ ವ್ಯತಿರಿಕ್ತ ಬೀರುತ್ತಿದೆ ಎಂದು ಅವರು ವಿಷಾದಿಸಿದರು.
ಇಂದಿನ ಜಾಗತಿಕ ಗ್ರಾಮ ಪರಿಕಲ್ಪನೆಯಲ್ಲಿ ಯಾವುದೇ ದೇಶ, ನಿರ್ಬಂಧಗಳ ಮೂಲಕ ಕೃತಕ ಅಡೆತಡೆ ಸೃಷ್ಠಿಸುವುದು ಸರಿಯಲ್ಲ. ಈಗಿನ ಜಾಗತಿಕ ಸನ್ನಿವೇಶದಲ್ಲಿ ನಿರ್ಬಂಧದ ದೊಡ್ಡ ಸವಾಲುಗಳಿಗೆ ಸೂಕ್ತ ಪರಿಹಾರ ಹುಡುಕುವಂತೆ ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಕರೆ ನೀಡಿದರು.
ವ್ಯವಹಾರ ಅಥವಾ ಉದ್ಯಮದಲ್ಲಿ ಶಕ್ತಿ ಮತ್ತು ಸಂಪನ್ಮೂಲಗಳ ಸಮರ್ಥ ಬಳಕೆಯನ್ನು ದೇಶ ಕಂಡುಕೊಳ್ಳಬೇಕಿದೆ. ಸಾಮಾಜಿಕ – ಆರ್ಥಿಕ ಪರಿಸರದ ಅಗತ್ಯಗಳಿಗನುಗುಣವಾಗಿ ಅದರ ಪರಿಷ್ಕರಣೆಗೆ ಕ್ರಮ ಕೈಗೊಳ್ಳಬೇಕಿದೆ. ಭಾರತೀಯ ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಸಾಮಾಜಿಕ-ಆರ್ಥಿಕ ರೂಪಾಂತರವನ್ನು ಸಾಧಿಸಲು ಜನರು ಅನುಕೂಲಕರ ವಾತಾವರಣ ನಿರ್ಮಿಸುವಂತೆ ಮಾಜಿ ರಾಷ್ಟ್ರಪತಿ ಆಗ್ರಹಿಸಿದರು.