ಬೆಂಗಳೂರು
ಹಿರಿಯರನ್ನು ಕಡೆಗಣಿಸಿ ಮೂರು ಮಂದಿಯನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿರುವುದು ಹಾಗೂ ನಿರೀಕ್ಷಿಸಿದ ಖಾತೆ ಸಿಗದಿರುವ ಬಗ್ಗೆ ಅಸಮಾಧಾನ ಅತೃಪ್ತಿಯಿಂದ ಕುದಿಯುತ್ತಿದ್ದ ಸಚಿವರು ದೆಹಲಿ ನಾಯಕರು ನೀಡಿದ ಖಡಕ್ ಸೂಚನೆಯಿಂದ ಮೌನಕ್ಕೆ ಶರಣಾಗಿದ್ದಾರೆ.
ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಹಿರಿಯ ಸಚಿವರುಗಳಾದ ಜಗದೀಶ್‍ಶೆಟ್ಟರ್, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು, ಸಿ.ಟಿ. ರವಿ ಇವರುಗಳು ತಮಗೆ ನೀಡಿದ ಖಾತೆಯ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ತಮಗಾಗಿರುವ ಅಸಮಾಧಾನವನ್ನು ಅವರು ತಮ್ಮ ನಡವಳಿಕೆಯ ಮೂಲಕ ಹೊರ ಹಾಕಿದ್ದರು.
ಇದರಿಂದ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳಿಗೆ ಪುಷ್ಟಿ ಸಿಕ್ಕಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಹೈಕಮಾಂಡ್, ನಿನ್ನೆ ಪಕ್ಷದಲ್ಲಿ ಯಾವುದೇ ಅಶಿಸ್ತನ್ನು ಸಹಿಸುವುದಿಲ್ಲ. ಕೊಟ್ಟು ಜವಾಬ್ದಾರಿಯನ್ನು ನಿಭಾಯಿಸಿ ಎಂದು ಸೂಚಿಸಿ ಇಲ್ಲವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸೂಚನೆ ನೀಡಿದ್ದು ಅಸಮಾಧಾನಗೊಂಡ ಸಚಿವರುಗಳ ಬಾಯಿಗೆ ಬೀಗ ಹಾಕುವಲ್ಲಿ ಯಶಸ್ವಿಯಾಗಿದೆ. ವರಿಷ್ಠ ನಾಯಕರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸಚಿವರುಗಳು ತಮ್ಮ ಅತೃಪ್ತಿಯನ್ನು ಮುಂದುವರೆಸಿದರೆ ಅವರಿಂದ ನಿರ್ದಾಕ್ಷಿಣ್ಯವಾಗಿ ರಾಜೀನಾಮೆ ಪಡೆಯಿರಿ ಏನಾಗುತ್ತೋ ನೋಡೋಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಹೇಳಿದ್ದು ಅತೃಪ್ತ ಸಚಿವರಿಗೆ ಮತ್ತಷ್ಟು ಇರಿಸು ಮುರಿಸು ತಂದಿತ್ತು. ಹಾಗಾಗಿ ಏನೂ ಮಾಡಲು ಸಾಧ್ಯವಾಗದೆ ಎಲ್ಲರೂ ಈಗ ಗಪ್‍ಚುಪ್ ಆಗುವಂತಾಗಿದೆ.
ಹೈಕಮಾಂಡ್‍ನ ಸೂಚನೆಯಿಂದ ಖಾತೆ ಹಂಚಿಕೆ ನಂತರ ಮೂಡಿದ್ದ ಭಿನ್ನಮತ ತಣ್ಣಗಾದಂತೆ ಕಂಡು ಬಂದರೂ ಒಳಗೊಳಗೆ ಅಸಮಾಧಾನ ಮುನಿಸು ಇದ್ದೆ ಇದೆ. ಸಮಯ ಸಂದರ್ಭ ಸಿಕ್ಕಾಗ ಈ ಸಿಟ್ಟು ಮುನಿಸು ಸ್ಪೋಟಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಸದ್ಯದ ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಅತೃಪ್ತ ಸಚಿವರುಗಳು ತಮ್ಮ ಸಿಟ್ಟು ಮುನಿಸನ್ನು ನುಂಗಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಇದೆ. ಅವರ ಅಸಮಾಧಾನ, ಅತೃಪ್ತಿಗಳಿಗೆ ಕಿಮ್ಮತ್ತು ಸಿಗದಂತ ರಾಜಕೀಯ ವಾತಾವರಣ ಇರುವುದರಿಂದ ಅನಿರ್ವಾಯವಾಗಿ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡು ಪಕ್ಷದ ಅಣತಿಯಂತೆ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ನವರು ಸಹ ನಿನ್ನೆಯೇ ಅಸಮಾಧಾನಗೊಂಡಿದ್ದ ಸಚಿವರುಗಳ ಜತೆ ಚರ್ಚೆ ನಡೆಸಿ ಎಲ್ಲವೂ ಪಕ್ಷದ ಹೈಕಮಾಂಡ್‍ನ ತೀರ್ಮಾನ ತಮ್ಮದೇನಿಲ್ಲ. ಮುಂದೆ ಎಲ್ಲವೂ ಸರಿ ಹೋಗುತ್ತದೆ. ಈಗ ಹೊಂದಿಕೊಂಡು ಹೋಗೋಣ. ಕೊಟ್ಟಿರುವ ಜವಾಬ್ದಾರಿ ನಿಭಾಯಿಸಿ ಎಂದು ಮನವೊಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಅತೃಪ್ತ ಸಚಿವರುಗಳು ಈಗ ತಮ್ಮ ಜವಾಬ್ದಾರಿಗಳತ್ತ ಗಮನಹರಿಸಲೇ ಬೇಕಾದ ಪರಿಸ್ಥಿತಿ ರೂಪುಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ