ದಾವಣಗೆರೆ
ಪ್ರವಾಸೋದ್ಯಮದ ಅಭಿವೃದ್ಧಿಯಿಂದ ದೇಶ ಪ್ರಗತಿಯತ್ತ ದಾಪುಗಾಲು ಹಾಕಲು ಸಾಧ್ಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
“ಮೇರಾಬೂತ್ ಮಜಭೂತ್” ಘೋಷಣೆಯಡಿಯಲ್ಲಿ ಶುಕ್ರವಾರ ಸಂಜೆ ದಾವಣಗೆರೆ, ಬೆಳಗಾವಿ, ಹಾವೇರಿ, ಧಾರವಾಡ ಹಾಗೂ ಬೀದರ್ ಜಿಲ್ಲೆಯ ಬಿಜೆಪಿ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಪ್ರಧಾನಿ ಮೋದಿ ಮೊದಲು ಬೆಳಗಾವಿ, ಬಳಿಕ ಬೀದರ್ ಜಿಲ್ಲೆಯ ಕಾರ್ಯರ್ಕರ ಬಳಿ ಸಂವಾದ ನಡೆಸಿ ನಂತರ ದಾವಣಗೆರೆಯ ಸ್ಕ್ರೀನ್‍ಗೆ ಬಂದರು.
ಆಗ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಪ್ರಧಾನಿ ವಿಡಿಯೋ ಕಾನ್ಪರೆನ್ಸ್‍ನಲ್ಲಿ ತಮ್ಮ ಪರಿಚಯ ಮಾಡಿಕೊಂಡು ಕೇಂದ್ರ ಸರ್ಕಾರ ದಾವಣಗೆರೆಗೆ ನೀಡಿರುವ ಸ್ಮಾರ್ಟ್‍ಸಿಟಿ ಯೋಜನೆ, ಅಮೃತ್ ನಗರ್ ಯೋಜನೆ ಸೇರಿದಂತೆ ಇತರೆ ಯೋಜನೆಗಳನ್ನು ಉಲ್ಲೇಖಿಸಿ ಗಮನ ಸೆಳೆದರು. ಬಳಿಕ ಬಿಜೆಪಿ ಕಾರ್ಯಕರ್ತ ಶಂಕರ್‍ಗೌಡ ಬಿರಾದರ್ ಸಂವಾದದಲ್ಲಿ “ಭಾರತದ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೇಗೆ ಪಾತ್ರ ನಿರ್ವಹಿಸಲಿದೆ ? ಎಂದು ಪ್ರಧಾನಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರವಾಸೋದ್ಯಮದ ಅಭಿವೃದ್ಧಿಯಾದರೆ, ವಿದೇಶಿ ವಿನಿಮಯ ಹೆಚ್ಚಾಗಿ ದೇಶ ಪ್ರಗತಿ ಕಾಣಲು ಸಾಧ್ಯವಾಗಲಿದೆ. 2013ರಲ್ಲಿ 18 ಬಿಲಿಯನ್ ಡಾಲರ್ ಇದ್ದ ವಿದೇಶಿ ವಿನಿಮಯ ಈಗ 27 ಡಾಲರ್ ದಾಟಿದೆ ಎಂದರು.
ಕರ್ನಾಟಕ ನೈಸರ್ಗಿಕ ಸಂಪತ್ತು ಹಾಗೂ ವಾಸ್ತುಶಿಲ್ಪಕ್ಕೆ ಹೆಸರು ವಾಸಿಯಾಗಿರುವ ರಾಜ್ಯವಾಗಿದೆ. ಕೂರ್ಗ್ ಹಾಗೂ ಹಂಪೆ ವಾಸ್ತುಶಿಲ್ಪದ ತವರೂರಾಗಿವೆ. ಭಾರತ ಸರ್ಕಾರ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿರುವ ಕಾರಣ ವಿದೇಶಿ ಪ್ರವಾಸಿಗರು ಭೇಟಿ ನೀಡುವವರ ಸಂಖ್ಯೆ ಹಿಂದಿಗಿಂತ ಈಗ ಶೇ.45 ರಷ್ಟು ಹೆಚ್ಚಾಗಿದೆ ಎಂದರು
ಪ್ರವಾಸೋದ್ಯಮ ಅಭಿವೃದ್ಧಿಯ ಕಾರಣ ಹೋಟೆಲ್, ರಸ್ತೆ ಸಂಪರ್ಕ, ವಾಯುಯಾನ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಹೀಗಾಗಿ ಪ್ರವಾಸೋದ್ಯಮದಲ್ಲಿ ಭಾರತ 65ನೇ ಗ್ಲೋಬಲ್ ರ್ಯಾಂಕಿಂಗ್‍ನಿಂದ 14ಕ್ಕೆ ಜಿಗಿದಿದ್ದು, ದೇಶದಲ್ಲಿ ಟ್ರಡಿಷನ್, ಟಾಲೆಂಟ್ ಹಾಗೂ ಟ್ರೇಡ್ ಆಧಾರದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುತ್ತಿರುವ ಕಾರಣ ಸ್ಥಳೀಯ ವಾಸ್ತು ಶಿಲ್ಪದ ಅಭಿವೃದ್ಧಿಯ ಜೊತೆಗೆ ಸ್ಥಳೀಯ ಕುಶಲಕರ್ಮಿಗಳ ಕೌಶಲ್ಯವೂ ಅಭಿವೃದ್ಧಿಯಾಗುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಲು ನಗರದ ಪಿ.ಬಿ ರಸ್ತೆಯಲ್ಲಿರುವ ಹಳೇ ವಾಣಿಹೊಂಡ ಶೋರೂಂ ಆವರಣದಲ್ಲಿ ಬಹಿರಂಗ ವ್ಯವಸ್ಥೆ ಮಾಡಲಾಗಿತ್ತು. ಮೋದಿ ಅವರು ಆಂಗ್ಲಭಾಷೆಯಲ್ಲಿ ಪ್ರಶ್ನೆಗೆ ಪ್ರತಿಕ್ರಯಿಸಿದ ಕಾರಣಕ್ಕೆ ಹಲವರಿಗೆ ಅರ್ಥವಾಗದೆ ಪೇಚಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ