ತಾ ಪಂ ಸಾಮಾನ್ಯ ಸಭೆ

ಚಿಕ್ಕನಾಯಕನಹಳ್ಳಿ 

         ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಯಾರೇ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ತಾಲ್ಲೂಕು ಪಂಚಾಯಿತಿ ಇ.ಓ ಕಛೇರಿಗೆ ಬಂದು ಸಮಸ್ಯೆಗಳ ಬಗ್ಗೆ ಕೇಳಿದರೆ ಅಧಿಕಾರಿ ನಾರಾಯಣಸ್ವಾಮಿ ಯಾರಿಗೂ ಸ್ಪಂದಿಸುತ್ತಿಲ್ಲ, ತಮಗೆ ಇಷ್ಟ ಬಂದಂತೆ ವರ್ತಿಸುತ್ತಾರೆ, ಯಾರಿಗೂ ಯಾವ ಮಾಹಿತಿಯನ್ನೂ ನೀಡುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಒಕ್ಕೊರಲಿನಿಂದ ಸಭೆಯಲ್ಲಿ ಆರೋಪಿಸಿದರು.

       ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷೆ ಚೇತನಗಂಗಾಧರ್‍ರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಬೇಜವಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ, ತಾಲ್ಲೂಕು ಪಂಚಾಯಿತಿಯಲ್ಲಿ ಆಗಬೇಕಾದ ಎಲ್ಲಾ ಕೆಲಸಗಳೂ ನಿಧಾನಗತಿಯಲ್ಲಿ ನಡೆಯುತ್ತಿವೆ ಇದರಿಂದ ಸಾರ್ವಜನಿಕರು ಜನಪ್ರತಿನಿಧಿಗಳನ್ನು ಟೀಕಿಸುತ್ತಿದ್ದಾರೆ ಜೊತೆಗೆ ತಾಲ್ಲೂಕು ಪಂಚಾಯಿತಿಯಿಂದ ಯಾವ ಮಾಹಿತಿಯೂ ಸಹ ಸದಸ್ಯರಿಗೆ ತಿಳಿಯುತ್ತಿಲ್ಲ, ಪತ್ರಿಕೆಗಳಲ್ಲಿ ಬಂದ ನಂತರ ಅಥವಾ ಕಾರ್ಯಕ್ರಮ ಮುಗಿದ ಮೇಲೆ ತಿಳಿಯುವಂತಾಗಿದೆ ಎಂದು ತಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಸದಸ್ಯರಿಂದ ಹಿಡಿದು ಎಲ್ಲಾ ಸದಸ್ಯರು ಕಾರ್ಯನಿರ್ವಹಣಾಧಿಕಾರಿ ಮೇಲೆ ಆರೋಪಗಳ ಸುರಿಮಳೆಗೈದರು.

       ತಾ.ಪಂ.ಸದಸ್ಯ ಸಿಂಗದಹಳ್ಳಿರಾಜ್‍ಕುಮಾರ್ ಮಾತನಾಡಿ, ಪಂಚಾಯ್ತಿ ಕಾಯ್ದೆ ಪ್ರಕಾರ ತಾ.ಪಂ.ಸಾಮಾನ್ಯ ಸಭೆ 2ತಿಂಗಳಿಗೊಮ್ಮೆ ನಡೆಯುಬೇಕು ಆದರೆ ಕಾರ್ಯನಿರ್ವಹಣಾಧಿಕಾರಿಗಳು 4ತಿಂಗಳಾದರೂ ಕರೆಯುವುದಿಲ್ಲ, ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ ಹೊರತು ಸಮಂಜಸವಾದ ಉತ್ತರ ನೀಡುವುದಿಲ್ಲ, ಸಭೆಯ ಅನುಪಾಲನಾ ವರದಿ, ತಾಲ್ಲೂಕು ಪಂಚಾಯಿತಿಯಲ್ಲಿನ ಉದ್ಯೋಗಖಾತ್ರಿ ಯೋಜನೆ, ಮಳಿಗೆಗಳು, ಅಂಗವಿಕಲರ ನಿಧಿಯಡಿಯಲ್ಲಿ ನೀಡಬಹುದಾದ ಸವಲತ್ತುಗಳು, ನಿವೇಶನ ಹಂಚಿಕೆ ಸೇರಿದಂತೆ ಎಲ್ಲಾ ಯೋಜನೆಗಳು ಕುಂಠಿತಗೊಳ್ಳುತ್ತಿದೆ ಕೇಳಿದರೆ ಸಮರ್ಪಕವಾದ ಉತ್ತರ ನೀಡುತ್ತಿಲ್ಲ ಹೀಗಾಗಿ ಕಾರ್ಯನಿರ್ವಹಣಾಧಿಕಾರಿಗಳ ಮೇಲೆ ನೋಟಿಸ್ ಜಾರಿ ಮಾಡಲು ಆಗ್ರಹಿಸಿದರು.

        ತಾ.ಪಂ.ಸದಸ್ಯ ಆಲದಕಟ್ಟೆ ತಿಮ್ಮಯ್ಯ ಹಾಗೂ ಪ್ರಸನ್ನಕುಮಾರ್ ಮಾತನಾಡಿ, ತಹಶೀಲ್ದಾರ್‍ರು ತಾಲ್ಲೂಕು ಮಟ್ಟದಲ್ಲಿ ನಡೆಯುವ ಸರ್ಕಾರಿ ಸೇವಲಾಲ್ ಜಯಂತಿಗೆ ತಾ.ಪಂ.ಸದಸ್ಯರನ್ನು ಆಹ್ವಾನಿಸದಿರುವ ಬಗ್ಗೆ ಪ್ರಶ್ನಿಸಿದರು. ತಹಶೀಲ್ದಾರ್ ತೇಜಸ್ವಿನಿ ಮಾತನಾಡಿ, ನಮ್ಮ ಕಛೇರಿಯಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಜಯಂತಿಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಲು ಕಳುಹಿಸಿರುತ್ತೇವೆ, ಜಯಂತಿಗೆ ಕರೆಯದಿರುವುದು ಅಧಿಕಾರಿಯ ಬೇಜವಬ್ದಾರಿ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

        ತಾ.ಪಂ.ಅಧ್ಯಕ್ಷೆ ಚೇತನಗಂಗಾಧರ್ ಮಾತನಾಡಿ, ಪ್ರತಿ ಬಾರಿಯ ಸಭೆಗೂ ಇಲಾಖಾ ಅಧಿಕಾರಿಗಳು ಅನುಪಾಲನಾ ವರದಿ ತರವಂತೆ ಸೂಚಿಸಿರು ಹಾಗೂ ಹಂದನಕೆರೆ ಭಾಗದ ಪೋಸ್ಟ್ ಆಫೀಸ್‍ನಲ್ಲಿ ಎಸ್‍ಎಸ್‍ವೈನಲ್ಲಿ ಬರುವ ಹಣ ಎರಡು-ಮೂರು ತಿಂಗಳಾದರೂ ಜನರಿಗೆ ಹಣ ನೀಡುತ್ತಿಲ್ಲ ಎಂಬ ಆರೋಪಗಳು ಬರುತ್ತಿವೆ ಈ ಬಗ್ಗೆ ಗಮನ ಹರಿಸುವಂತೆ ಹೇಳಿದರು.

        ತಾ.ಪಂ.ಉಪಾಧ್ಯಕ್ಷ ಯಳನಡುಯತೀಶ್ ಮಾತನಾಡಿ, ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಾಣವಾಗಿದೆ ಈ ಕಾಮಗಾರಿಯಲ್ಲಿ ಬಾಗಿಲು ನಿರ್ಮಿಸಿದೆ ಅದರ ಪೇಮೆಂಟ್ ಆಗಿದೆ ಈ ಬಗ್ಗೆ ಗಮನ ಹರಿಸಲು ತಿಳಿಸಿದ ಅವರು ತಾಲ್ಲೂಕಿನಲ್ಲಿ ಮರಳು ದಂಧೆ ಹೆಚ್ಚಾಗಿದೆ ಹಾಗೂ ಅಂತರ್ಜಲ ಕುಸಿತ ಕಂಡಿದೆ ಈ ಬಗ್ಗೆ ಗಮನ ಹರಿಸಲು ತಹಶೀಲ್ದಾರ್‍ಗೆ ತಿಳಿಸಿದರು.

       ತಹಶೀಲ್ದಾರ್ ತೇಜಸ್ವಿನಿ ಮಾತನಾಡಿ, ತಾಲ್ಲೂಕಿನಲ್ಲಿ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಯಾವ ದೂರುಗಳು ಬಂದಿಲ್ಲ ಈಗಾಗಿ ತಿಳಿದಿರಲಿಲ್ಲ, ನಡೆಯುತ್ತಿರುವ ಮರಳುದಂಧೆಯ ಬಗ್ಗೆ ಗಮನ ಹರಿಸುತ್ತೇನೆ, ತಾಲ್ಲೂಕು ಕಛೇರಿಗೆ ಸಂಬಂಧ ಪಟ್ಟಂತೆ ಕೆರೆ, ಬಾವಿ, ಆಶ್ರಯಮನೆ, ಘನತ್ಯಾಜ್ಯ ವಿಲೇವಾರಿ ಘಟಕ ಇವುಗಳ ಬಗ್ಗೆ ಯಾವುದೇ ಒತ್ತುವರಿ ಇದ್ದರೂ ಆ ಬಗ್ಗೆ ಗಮನ ಹರಿಸಲಾಗುವುದು ಹಾಗೂ ತಾಲ್ಲೂಕಿನಲ್ಲಿ ಆಧಾರ್‍ಕಾರ್ಡ್ ತಿದ್ದುಪಡಿ ಸಮಸ್ಯೆಯಾಗಿದ್ದು ಗ್ರಾ.ಪಂ. ವ್ಯಾಪ್ತಿಯಲ್ಲಿ ಆಧಾರ್ ಅಪ್‍ಡೇಟ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ತಾಲ್ಲೂಕಿನಲ್ಲಿ ಬರಪರಿಸ್ಥಿತಿ ನಿಭಾಯಿಸಲು ಮೇವು ಬ್ಯಾಂಕ್ ಸ್ಥಾಪನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ, ಹಾಲಿನ ಸೊಸೈಟಿಗಳ ಮೂಲಕ ರೈತರಿಗೆ ಮೇವನ್ನು ವಿತರಿಸಲಾಗುವುದು, ಮೇವು ವಿತರಣೆ ವೇಳೆ ಕಂದಾಯ ನೀರೀಕ್ಷಕರು, ಗ್ರಾಮ ಅಧಿಕಾರಿಗಳು ಸೇರಿದಂತೆ ಹಾಲಿನ ಸೊಸೈಟಿಯವರು ಇರುತ್ತಾರೆ ಹಾಗೂ ತಾಲ್ಲೂಕಿನಲ್ಲಿ ಈವರೆವಿಗೂ 11600 ಬಗರ್‍ಹುಕುಂಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.

           ತಾ.ಪಂ.ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ದಸೂಡಿ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿಗಾಗಿ 5ಕಿ.ಮೀ ನಡೆಯಬೇಕಾದ ಪರಿಸ್ಥಿತಿ ಬಂದಿದೆ ಹಾಗೂ ಹುಳಿಯಾರು ನಾಡಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕಡಿಮೆ ಹಾಗೂ ಅಲ್ಲಿ ಸರ್ವರ್ ಸಮಸ್ಯೆ ಇರುವುದರಿಂದ ದಸೂಡಿ ಸುತ್ತಮುತ್ತ ಗ್ರಾಮದ ಜನರಿಗೆ ಕೆಲಸಗಳಾಗಲು ದಿನಗಳು ಕಾಯಬೇಕಾದ ಪರಸ್ಥಿತಿ ಉದ್ಭವಿಸಿದೆ ಎಂದರು.

         ತಹಶೀಲ್ದಾರ್ ತೇಜಸ್ವಿನಿ ಮಾತನಾಡಿ, ಹುಳಿಯಾರು ನಾಡಕಛೇರಿಗೆ ಮತ್ತೊಬ್ಬ ಕಂಪ್ಯೂಟರ್ ಆಪರೇಟರ್‍ನ್ನು ನೇಮಿಸಲು ಕ್ರಮಕೈಗೊಳ್ಳಲಾಗುವುದು ಎಂದರು.ತಾ.ಪಂ.ಸದಸ್ಯೆ ಶೈಲಾಶಶಿಧರ್ ಮಾತನಾಡಿ, ತಾಲ್ಲೂಕಿನಲ್ಲಿ ಅಡುಗೆ ಸಹಾಯಕರಿಯರಿಗೆ ಆರೇಳು ತಿಂಗಳಿಗೆ ಸಂಬಳ ಆಗುತ್ತಿದೆ ಇದರಿಂದ ಅವರು ಜೀವನ ನಿರ್ವಹಿಸುವುದು ಕಷ್ಠವಾಗಿದೆ ಎಂದು ತಮ್ಮ ಬಳಿ ಹೇಳಿಕೊಳ್ಳುತ್ತಾರೆ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಎಂದರು.

           ಅಕ್ಷರ ದಾಸೋಹ ಇಲಾಖಾಧಿಕಾರಿ ಮಾತನಾಡಿ, ಡಿಸಂಬರ್ ಅಂತ್ಯದವರೆವಿಗೆ ಅಡುಗೆಯವರಿಗೆ ಸಂಬಳವಾಗಿದೆ ಉಳಿದ ತಿಂಗಳು ಸರ್ಕಾರದಿಂದ ಸಂಬಳ ಬಿಡುಗಡೆಯಾಗಬೇಕು ಎಂದ ಅವರು, ತಾಲ್ಲೂಕಿನಲ್ಲಿ 7ಅಡುಗೆ ಕೊಠಡಿ ಕಾಮಗಾರಿ ನೂತನವಾಗಿ ಆಗಿವೆ ಎಂದು ಹೇಳಿದರು.ಸಭೆಯಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಹುಳಿಯಾರ್‍ಕುಮಾರ್, ಸದಸ್ಯರುಗಳಾದ ಜಯಮ್ಮ, ಸಚಿನ್, ಮಧು, ಇಂದಿರಾ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link