ಅನುದಾನದಲ್ಲಿ ಜಿಪಂ-ತಾಪಂಗಳು ಗ್ರಾಪಂಗಿಂತ ಕಡೆಯಾಗಿವೆ : ಆರೋಪ

ತುರುವೇಕೆರೆ

    ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿಗಳಿಗೆ ಸರ್ಕಾರ ಅನುದಾನ ನೀಡದೆ ಜನಸಾಮಾನ್ಯರ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದಬ್ಬೇಘಟ್ಟ ಜಿಲ್ಲಾ ಪಂಚಾಯ್ತಿ ಸದಸ್ಯೆ ಭಾಗ್ಯಮ್ಮ ರಮೇಶ್‍ಗೌಡ ಅಭಿಪ್ರಾಯಪಟ್ಟಿದ್ದಾರೆ.

    ಪಟ್ಟಣದ ತಮ್ಮ ಸ್ವಗೃಹದಲ್ಲಿ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಯ ಸದಸ್ಯರಾದರೂ ಜನರ ಸೇವೆ ಮಾಡಲು ಸಾಕಷ್ಟು ಅವಕಾಶಗಳಿವೆ. ಗ್ರಾಮ ಪಂಚಾಯ್ತಿಗಳಲ್ಲಿ ಹತ್ತಾರು ಗ್ರಾಮೀಣ ಅಭಿವೃದ್ಧಿಯ ಕಾಮಗಾರಿಗಳನ್ನು ನಡೆಸಬಹುದು. ಆದರೆ ಈ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳಲ್ಲಿ ಅನುದಾನಗಳಿಲ್ಲದೆ ಚುನಾಯಿತ ಸದಸ್ಯರು ಜನರಿಂದ ಹಿಡಿಶಾಪ ಹಾಕಿಸಿಕೊಳ್ಳುವಂತಾಗಿದೆ.

   ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ವರ್ಷಕ್ಕೆ ಕೇವಲ 12 ರಿಂದ 15 ಲಕ್ಷ ರೂ.ಗಳ ಅನುದಾನ ಮಾತ್ರ ದೊರೆಯಲಿದೆ. ಈ ಹಣದಲ್ಲಿ 7 ಪಂಚಾಯ್ತಿ ವ್ಯಾಪ್ತಿಯ ಸುಮಾರು 120 ಹಳ್ಳಿಗಳಲ್ಲಿ ಏನು ಅಭಿವೃಧ್ಧಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಇಷ್ಟು ಹಣದಲ್ಲಿ ಉತ್ತಮ ಗುಣಮಟ್ಟದ ಒಂದು ಚರಂಡಿಯನ್ನೂ ಮಾಡಲು ಸಾಧ್ಯವಿಲ್ಲ. ಇದೇ ಸ್ಥಿತಿ ತಾಲ್ಲೂಕು ಪಂಚಾಯ್ತಿಯದ್ದೂ ಆಗಿದೆ. ಇವುಗಳು ನಾಮಕಾವಸ್ಥೆಯ ವ್ಯವಸ್ಥೆಯಾಗಿವೆ ಎಂದು ಕಿಡಿಕಾರಿದರು.

   ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳ ಸದಸ್ಯರು, ಗ್ರಾಮ ಪಂಚಾಯ್ತಿ ಸದಸ್ಯರಿಗಿಂತಲೂ ಕೆಳದರ್ಜೆಯಲ್ಲಿದ್ದಾರೆ. ಕನಿಷ್ಠ ಒಂದು ಮನೆಯನ್ನು, ಒಂದು ಬೋರ್ ವೆಲ್ ಕೊಡದ ಸ್ಥಿತಿಯಲ್ಲಿದ್ದಾರೆ. ಪ್ರತಿಯೊಂದು ಸಮಿತಿಯಲ್ಲಿ ಶಾಸಕರದ್ದೆ ಅಧ್ಯಕ್ಷತೆ. ಹೀಗಾಗಿ ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಾಗಿದೆ. ತಾಲ್ಲೂಕಿನ ದಬ್ಬೇಘಟ್ಟ ರಸ್ತೆ ಸಂಪೂರ್ಣ ಹಾಳಾಗಿದೆ. ಇದುವರೆಗೂ ಯಾವೊಬ್ಬ ಜನಪ್ರತಿನಿಧಿಗಳೂ ಇದನ್ನು ಸರಿಪಡಿಸುವ ಮನಸ್ಸು ಮಾಡಿಲ್ಲ. ಜಿಲ್ಲಾ ಪಂಚಾಯ್ತಿಯಿಂದಲೂ ಮಾಡಿಸಲು ಸಾಧ್ಯವಾಗುತ್ತಿಲ್ಲ. ನಾವೆಲ್ಲರೂ ಕೆಲಸಕ್ಕೆ ಬಾರದವರಾಗಿದ್ದೇವೆ. ಸೂಕ್ತ ಅನುದಾನ ನೀಡದೇ ಅವಮಾನ ಮಾಡುವ ಬದಲು ಇಂತಹ ಸಾಂಸ್ಥಿಕ ಸಂಸ್ಥೆಯನ್ನು ರದ್ದು ಮಾಡುವುದು ಒಳಿತು ಎಂದರು.

   ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ಜೆಡಿಎಸ್ ಯುವ ಮುಖಂಡ ಜಗದೀಶ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap