ಹುಳಿಯಾರು:
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ನೂತನ ಕೇಬಲ್ ಮತ್ತು ಡಿಟಿಎಚ್ ನೀತಿ ಅನ್ವಯ ಹುಳಿಯಾರಿನ ಕೇಬಲ್‍ನಲ್ಲಿ ಎಲ್ಲಾ ಪೇ ಚಾನೆಲ್‍ಗಳು ಸ್ಥಗಿತಗೊಂಡಿದ್ದು ಪೇ ಚಾಲನ್ ಆಯ್ಕೆ ಮಾಡಿಕೊಂಡವರಿಗೆ ಮಾತ್ರ ಮರು ಸಂಪರ್ಕ ಕೊಡುವ ವ್ಯವಸ್ಥೆ ಆರಂಭವಾಗಿದೆ.
ಹುಳಿಯಾರಿನಲ್ಲಿ ಬರೋಬ್ಬರಿ 1500 ಕೇಬಲ್ ಗ್ರಾಹಕರಿದ್ದು ಯಾವ ಬೀದಿಗೆ ಹೋದರೂ ಸಿನಿಮಾ ಹಾಡು, ದಾರವಾಹಿ ಡೈಲಾಗ್, ಕ್ರಿಕೇಟ್ ಕಾಮೆಂಟ್ರಿ, ಬ್ರೇಕಿಂಕ್ ನ್ಯೂಸ್‍ಗಳ ಹಿನ್ನೆಲೆ ಮ್ಯೂಸಿಕ್ ಕೇಳುತ್ತಿತ್ತು. ಆದರೆ ಟ್ರಾಯ್ ನೂತನ ನೀತಿಯನ್ವಯ ಕಳೆದ ಮೂರ್ನಲ್ಕು ದಿನಗಳಿಂದ ಟಿವಿ ಚಾನಲ್ ಪ್ರಸಾರ ಸ್ಥಗಿತಗೊಂಡಿದ್ದು ಟಿವಿ ಸೌಂಡ್ ಇಲ್ಲದೆ ಊರಿಗೆ ಊರೆ ನಿಶಬ್ಧವಾಗಿದೆ.
ಟ್ರಾಯ್ ನೂತನ ನೀತಿಯ ಪ್ರಕಾರ ಗ್ರಾಹಕರು ಜಿಎಸ್‍ಟಿ ಸೇರಿ ಮೊದಲು 154 ರೂ. ಮೂಲ ಶುಲ್ಕ ಆಯ್ದುಕೊಂಡ ನಂತರ ತಮಗೆ ಇಷ್ಟವಾದ ಪಾವತಿ ಚಾನೆಲ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಟಿವಿ ಪ್ರಸಾರ ಸ್ಥಗಿತಗೊಳಿಸಲಾಗುವುದೆಂದು ಕಳೆದ ಮೂರ್ನಲ್ಕು ತಿಂಗಳಿಂದ ಪ್ರಚಾರ ಮಾಡಲಾಗಿತ್ತು. ಕೇಬಲ್ ಆಪರೇಟರುಗಳು ಸಹ ಹಗಲು, ರಾತ್ರಿ ಎನ್ನದೆ ಚಾನೆಲ್‍ಗಳ ಪಟ್ಟಿಗಳನ್ನು ನೀಡಿ ತಮ್ಮ ಬಜೆಟ್‍ಗೆ ಹೊಂದುವಂತೆ ಚಾನಲ್‍ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಮನೆ ಮನೆಗೆ ತೆರಳಿ ಮನವಿ ಮಾಡಿದ್ದರು.
ಆದರೆ ಶೇ.90 ರಷ್ಟು ಗ್ರಾಹಕರು ಟ್ರಾಯ್ ನಿಯಮದಂತೆ ಚಾನಲ್ ಆಯ್ಕೆ ಮಾಡಿಕೊಳ್ಳದೆ ನಿರ್ಲಕ್ಷಿಸಿದ್ದರು. ಈಗ ಚಾನಲ್ ಸ್ಥಗಿತಗೊಂಡಿದ್ದರಿಂದ ತಮ್ಮ ಇತರೆ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಚಾನಲ್ ಆಯ್ಕೆ ಮಾಡಿ ಮುಗಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಗೃಹಿಣಿಯರಿಗಾಗಿ ಧಾರವಾಹಿ ಚಾನಲ್‍ಗಳು, ಮಕ್ಕಳಿಗಾಗಿ ಕಾರ್ಟುನ್ ನೆಟ್‍ವರ್ಕ್, ಪೋಗೋ, ಡಿಸ್ಕವರಿ, ತಮಗಾಗಿ ಕ್ರೀಡಾ ಚಾಲನ್ ಹೀಗೆ ಪಟ್ಟಿ ಮಾಡಿ ನೊಡಿದರೆ ಕನಿಷ್ಟ 300 ರೂ. ದಾಟುತ್ತದೆ. ಇದು ಇಲ್ಲಿಯವರೆವಿಗೂ ಕೇವಲ 150 ರೂ.ಗಳಿಗೆ ಅಷ್ಟೂ ಚಾನಲ್ ನೋಡಿದ್ದ ಗ್ರಾಹಕರಿಗೆ ಹೊರೆಯಾಗಿದೆ.
ಕೇಬಲ್ ಸಿಬ್ಬಂಧಿ ಮನೆಮನೆ ಎಡಬಿಡದೆ ಭೇಟಿ ನೀಡಿ ಕ್ಯಾಪ್ ಫಾರಂ ನೀಡಿ ಬೇಸಿಕ್ ಸ್ಕೀಂನಾದರೂ ಆಯ್ಕೆ ಮಾಡಿ ದುಂಬಾಲು ಬಿದ್ದ ಪರಿಣಾಮ ಶೇ.50 ರಷ್ಟು ಮಂದಿ ಪೇ ಚಾನಲ್ ಗ್ರಾಹಕರಾಗಿ ತಮ್ಮ ಮನೆ ಟಿವಿಯಲ್ಲಿ ಒಂದಿಷ್ಟು ಚಾನಲ್ ಬರುವಂತೆ ಮಾಡಿಕೊಂಡಿದ್ದಾರೆ. ಉಳಿದ ಗ್ರಾಹಕರು ತಮ್ಮ ಕುಟುಂಬದ ಬಜೆಟ್ ನೋಡಿ ಯಾವುದನ್ನು ಆಯ್ಕೆ ಮಾಡುವುದು, ಯಾವುದನ್ನು ಬಿಡುವುದೋ ಎಂದು ಗೊಂದಲಕ್ಕೀಡಾಗಿದ್ದಾರೆ. ಒಂದರ್ಥದಲ್ಲಿ ಇದು ಮನೆ ಯಜಮಾನನ ನಿದ್ದೆಗೆಡಿಸಿದೆ.
ಹುಳಿಯಾರು ಗ್ರಾಮೀಣ ಪ್ರದೇಶವಾಗಿರುವುದರಿಂದ ಇಲ್ಲಿರುವ ಬಹುತೇಕ ನಿವಾಸಿಗಳು ಕೂಲಿನಾಲಿ ಮಾಡಿ ಜೀವನ ನಡೆಸುವವರಾಗಿದ್ದು ಟ್ರಾಯ್‍ನ ಈ ಹೊಸ ನಿಯಮ ಈ ಕುಟುಂಬಗಳಿಗೆ ಆರ್ಥಿಕ ಬರೆ ಎಳೆದಂತ್ತಾಗಿದೆ. ಇವರಲ್ಲಿ ಬಹುತೇಕ ಮಂದಿ ನೋಡುವುದು ಕನ್ನಡ ಚಾನಲ್‍ಗಳಾಗಿದ್ದು 154 ರೂ. ಮೂಲ ಶುಲ್ಕದಲ್ಲಿ ಕನ್ನಡ ನ್ಯೂಸ್ ಚಾನಲ್ ಬಿಟ್ಟು ಉಳಿದವಾವುವು ಬರುವುದಿಲ್ಲ. ಹಾಗಾಗಿ ಜೇಬಿಗೆ ಕತ್ತರಿ ಬೀಳುವುದು ನಿಶ್ಚಿತವಾಗಿದೆ. ಈ ಹೊಸ ನೀತಿಗೆ ಇಲ್ಲಿನ ಗ್ರಾಹಕರು ಹೇಗೆ ಸ್ಪಂಧಿಸುವರೋ ಕಾದು ನೊಡಬೇಕಿದೆ.