ತುಮಕೂರು
ಶಿಕ್ಷಕಸ್ನೇಹಿ ವರ್ಗಾವಣೆ ನೀತಿ ಹಾಗೂ ವಿದ್ಯಾರ್ಥಿಸ್ನೇಹಿ ಶಾಲಾ ವಾತಾವರಣ ನಿರ್ಮಾಣ ಮಾಡುವ ಚಿಂತನೆ ಇದ್ದು ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್‍ಕುಮಾರ್ ಹೇಳಿದರು.ನಗರದಲ್ಲಿ ಗುರುವಾರ ಸಂಜೆ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಸಿದ್ಧಗಂಗಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ(ಎಸ್‍ಎಚ್‍ಆರ್‍ಸಿ)ದಿಂದ ಶಿಕ್ಷಕ ಆರೋಗ್ಯ ಯೋಜನೆಗೆ ಚಾಲನೆ ನೀಡಿದ ಸಚಿವರುಆಸ್ಪತ್ರೆಯಲ್ಲಿ ಆರೋಗ್ಯ ಸಂಬಂಧಿ ಪ್ರಯೋಜನ ಪಡೆಯಲು ಶಿಕ್ಷಕರಿಗೆ ಎಸ್‍ಎಚ್‍ಆರ್‍ಸಿಯಿಂದ ಶಿಕ್ಷಕ ಆರೋಗ್ಯ ಚೀಟಿ ವಿತರಿಸಿದರು.
ಶಿಕ್ಷಕರಿಗೆ ಅನೇಕ ರೀತಿಯ ಸಮಸ್ಯೆಗಳಿವೆ, ಅವರ ಎಲ್ಲಾ ಸಮಸ್ಯೆಗಳನ್ನು ತಾವು ತಾಳ್ಮೆಯಿಂದ ಆಲಿಸಿದ್ದು, ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ ಸಚಿವರು, ಶಿಕ್ಷಕರು ಇಷ್ಟಪಟ್ಟು ಶಾಲೆಗೆ ಹೋದರೆ ಅವರು ಉತ್ಸಹದಿಂದ ಪಾಠ ಮಾಡುತ್ತಾರೆ, ಇಲ್ಲವಾದರೆ ಕಷ್ಟ, ಈ ಕಾರಣದಿಂದ ಶಿಕ್ಷಕರಿಗೆ ಅನುಕೂಲಕರವಾದ ವರ್ಗಾವಣೆ ನೀತಿ ಜಾರಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಪುಸ್ತಕದ ಭಾರದ ಬ್ಯಾಗ್ ಹೊರಿಸಲಾಗುತ್ತದೆ ಎಂಬ ಆರೋಪವಿದೆ. ಮಕ್ಕಳು ಶಾಲೆಗೆ ಸಂತೋಷದಿಂದ ಹೋಗಬೇಕು. ಪಠ್ಯದಿಂದ ಮಾತ್ರವಲ್ಲ, ಪಠ್ಯೇತರ ಚಟುವಟಿಕೆಯಿಂದಲೂ ಮಕ್ಕಳು ಹೆಚ್ಚು ಕಲಿಯುತ್ತಾರೆ. ಹಾಗಾಗಿ ವಾರಕ್ಕೆ ಒಂದು ದಿನವನ್ನು ಶಾಲಾ ಬ್ಯಾಗ್ ರಹಿತ ದಿನ ಯೋಜನೆ ಜಾರಿ ಮಾಡಲಾಗುವುದು ಅಂದು ಮಕ್ಕಳು ಶಾಲೆಗೆ ಪುಸ್ತಕದ ಬ್ಯಾಗ್ ತರುವಂತಿಲ್ಲ, ಅಂದು ಪಠ್ಯೇತರ ಚಟುವಟಿಕೆಗಳಲ್ಲಿ ಅವರು ಭಾಗಿಯಾಗುತ್ತಾರೆ. ಇಂತಹ ಸಂದರ್ಭದಲ್ಲಿ ಭೂಮಿ, ನೀರು, ವಾಯು, ಸೂರ್ಯನ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವಂತಹ ಚಿಂತನೆ ಬಂದಿದೆ ಎಂದು ಸಚಿವ ಸುರೇಶ್‍ಕುಮಾರ್ ಹೇಳಿದರು.
ಶಿಕ್ಷಣ ಇಲಾಖೆಯಲ್ಲಿ ಹಲವು ಸವಾಲುಗಳಿವೆ, ಉತ್ತಮ ಕೆಲಸ ಮಾಡಲು ಅಷ್ಟೇ ಅವಕಾಶಗಳೂ ಇವೆ. ಶಿಕ್ಷಕರ ಮಗನಾದ ನನ್ನ ಮೇಲೆ ಇಲಾಖೆ ಋಣವಿದೆ, ಋಣ ತೀರಿಸುವ ಕೆಲಸ ಮಾಡುತ್ತೇನೆ. ರಾಜ್ಯದ ಒಂದು ಕೋಟಿ ಮಕ್ಕಳು, ಎರಡು ಲಕ್ಷಕ್ಕೂ ಹೆಚ್ಚು ಶಿಕ್ಷಕರು ನನ್ನ ಬಳಗ ಅವರಿಗೆ ಒಳಿತಾಗುವ ರೀತಿಯ ಕಾರ್ಯ ಮಾಡುತ್ತೇನೆ ಎಂದರು.
ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ಶಿಕ್ಷಕರು ಸಮಾಜ ನಿರ್ಮಾಣದಲ್ಲಿ ಪ್ರಬಲ ಸ್ಥಂಬಗಳಲ್ಲಿ ಒಬ್ಬರಾಗಿದ್ದು, ಜವಾಬ್ದಾರಿಯುತ ನಾಗರಿಕರಾಗಲು ಬೆಳೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಬುದ್ದಿಯನ್ನು ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಶಿಕ್ಷಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ. ವಿಶ್ವ ದರ್ಜೆಯ ಯೋಗಕ್ಷೇಮವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ನಮ್ಮ ಉದ್ದೇಶಕ್ಕೆ ಅನುಗುಣವಾಗಿ, ಕರ್ನಾಟಕದಾದ್ಯಂತ ಎಲ್ಲಾ ಶಿಕ್ಷಕರಿಗೆ ನಿಯಮಿತ ತಪಾಸಣೆ, ಚಿಕಿತ್ಸೆಗಳು, ಥೆರಪಿ ಇತ್ಯಾದಿ ಸಂಪೂರ್ಣ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಎಸ್‍ಎಚ್‍ಆರ್‍ಸಿ ಶಿಕ್ಷಣ ಆರೋಗ್ಯ ಯೋಜನೆಯನ್ನು ಆರಂಭಿಸಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ಅಧ್ಯಕ್ಷ ಡಾ. ಉಮಾಶಂಕರ್ ಮಾತನಾಡಿ, ಎಸ್‍ಎಚ್‍ಆರ್‍ಸಿಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳು ಮತ್ತು ಸೇವೆಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಆಸ್ಪತ್ರೆ ಸಮಾಲೋಚನೆಗಳು ಮತ್ತು ಚಿಕಿತ್ಸೆಗಳಿಗಾಗಿ ಇತರೆ ನಗರಗಳಿಗೆ ನಮ್ಮ ಜಿಲ್ಲೆಯವರು ತೆರಳುವುದನ್ನು ಕಡಿಮೆ ಮಾಡಲು ಇದು ಸಹಾಯಕವಾಗುತ್ತದೆ ಎಂದರು.
ಎಸ್‍ಎಚ್‍ಆರ್‍ಸಿ ಶಿಕ್ಷಕ ಆರೋಗ್ಯ ಯೋಜನೆ, ಸೇವೆಯಲ್ಲಿರುವ ಎಲ್ಲಾ ಶಿಕ್ಷಕರಿಗೂ ಚಿಕಿತ್ಸೆ ನೀಡುವ ಉದ್ದೇಶವನ್ನು ಹೊಂದಿದೆ ಮತ್ತು ನಿವೃತ್ತಿಯ ನಂತರಆರೋಗ್ಯ ಪ್ರಯೋಜನಗಳನ್ನು ಇದು ಖಾತರಿಪಡಿಸುತ್ತದೆ. ಈ ಯೋಜನೆಯ ಸ್ವಯಂ, ಸಂಗಾತಿ, ಇಬ್ಬರು ಅವಲಂಬಿತ ಮಕ್ಕಳು ಮತ್ತು ಅವಲಂಬಿತ ಪೋಷಕರು ಒಳಗೊಂಡಿರುತ್ತದೆ ಎಂದು ಹೇಳಿದರು.
ಶಾಸಕ ಜಿ ಬಿ ಜ್ಯೋತಿಗಣೇಶ್, ಸರ್ವೋದಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸೀತಾರಾಮ್, ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪರಮೇಶ್ ಮತ್ತಿತರರು ಭಾಗವಹಿಸಿದ್ದರು. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ 15 ಮಂದಿ ಹಿರಿಯ ಹಾಗೂ ಸಾಧಕ ಶಿಕ್ಷಕರನ್ನು ಸನ್ಮಾನಿಸಿ, ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಕೊಡುಗೆಯನ್ನು ಪ್ರಶಂಸಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








