ಬೆಂಗಳೂರು
ಕೋರಿಕೆ ಮೇರೆಗೆ ಶಿಕ್ಷಕರಿಗೆ ಮಾನವೀಯತೆ ಆಧಾರದ ಮೇಲೆ ವರ್ಗಾವಣೆ ಸೌಲಭ್ಯ ಕಲ್ಪಿಸಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶವು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ನಗರದ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿ ಶಿಕ್ಷಕರ ವರ್ಗಾವಣೆ ಹಾಗೂ ತಂತ್ರಾಂಶದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ, ತಕ್ಷಣ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಬೇಕು, ವರ್ಗಾವಣೆ ಕಾಯ್ದೆಯಲ್ಲಿರುವ ಅವೈಜ್ಞಾನಿಕ ಹಾಗೂ ಶಿಕ್ಷಕರಿಗೆ ಮಾರಕವಾಗಿರುವ ಅಂಶಗಳಿಗೆ ತಿದ್ದುಪಡಿ ತಂದು, ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆ ಜಾರಿ ಮಾಡಬೇಕು ಎಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಆಗ್ರಹಿಸಿದರು.
6ನೇ ವೇತನ ಆಯೋಗದ ಅಂತಿಮ ವರದಿ ಅನ್ವಯ ಮುಖ್ಯೋಪಾಧ್ಯಾಯರು ಹಾಗೂ ಬಡ್ತಿ ಹೊಂದುವುದರಿಂದ ವಂಚಿತರಾಗುವ ಶಿಕ್ಷಕರಿಗೆ 10, 15, 20, 25 ವರ್ಷಗಳ ಕಾಲಮಿತಿ ವೇತನ ವ್ಯಾತ್ಯಾಸ ಜಾರಿಗೊಳಿಸಬೇಕು. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ನೀಡಿರುವ ವರದಿಯನ್ನು ಅನುಷ್ಠಾನಗೊಳಿಸಬೇಕು. ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಬಡ್ತಿಗಾಗಿ ನಿಗಧಿ ಪಡಿಸಿರುವ ಪರೀಕ್ಷೆ ರದ್ದು ಪಡಿಸಬೇಕು.
ವೃಂಧ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದು ಪಡಿತರಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರಥಮ ದರ್ಜೆ ಸಹಾಯಕರು ಪಡೆಯುವ ವೇತನ ಶ್ರೇಣಿ ನಿಗದಿಪಡಿಸಬೇಕು. ಒಂದೇ ದೇಶ, ಒಂದೇ ತೆರಿಗೆ ಮಾದರಿಯಲ್ಲಿ ಒಂದೇ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನ ಶಾಲಾ ಶಿಕ್ಷಣ ನೀತಿ ಜಾರಿಗೆ ತರಬೇಕು. ಸೇರಿದಂತೆ ಶಿಕ್ಷಕರ ನೇಮಕಾತಿಯಲ್ಲಿನ ಕೃಂಪಾಕ ಜೇಷ್ಠತೆ ಆಧರಿಸಿ ಬಡ್ತಿ.
ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಮಾವೇಶವು ಸರ್ಕಾರವನ್ನು ಆಗ್ರಹಿಸಿದೆ
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಎನ್.ಮಹೇಸ್ ಅವರು ಸಮಾವೇಶದ ಪರವಾಗಿ ಕೋರಿಕೆ ಮೇರೆಗೆ ಶಿಕ್ಷಕರಿಗೆ ಮಾನವೀಯತೆ ಆಧಾರದ ಮೇಲೆ ವರ್ಗಾವಣೆ ಸೌಲಭ್ಯ ಕಲ್ಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಕಳೆದ 10 ರಿಂದ 15 ವರ್ಷಗಳಿಂದ ಶಿಕ್ಷಕರು ವರ್ಗಾವಣೆ ನಿರೀಕ್ಷೆಯಲ್ಲಿದ್ದಾರೆ.
ಸರ್ಕಾರ ಸಹ ವರ್ಗಾವಣೆ ಭರವಸೆಯನ್ನು ನೀಡಿದ್ದು, ಆದರೆ ವರ್ಗಾವಣೆ ನಿಯಮದಲ್ಲಿ ಆದ ಬದಲಾವಣೆಯಿಂದ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗಿದೆ ಎಂದು ಹೇಳಿದರು.ವರ್ಗಾವಣೆ ನಿಯಮದನ್ವಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಕಡ್ಡಾಯ ಶಿಕ್ಷಕರು ನಂತರ ಕೋರಿಕೆ ಶಿಕ್ಷಕರನ್ನು ವರ್ಗಾವಣೆ ಮಾಡುವ ನಿಯಮವಿದೆ ಎಂದ ಅವರು ಕೋರಿಕೆ ಶಿಕ್ಷಕರ ವರ್ಗಾವಣೆಯನ್ನು ಸಹ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.
ಚಾಮರಾಜನಗರ, ಬೆಂಗಳೂರು, ಕೋಲಾರ ಹಾಗೂ ಮೈಸೂರು ವಿಭಾಗದ ಸಾಕಷ್ಟು ಸಂಖ್ಯೆಯ ಶಿಕ್ಷಕರು ಕಳೆದ ಹಲವಾರು ವರ್ಷಗಳಿಂದ ಗುಲಬರ್ಗ, ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇಂತಹ ಶಿಕ್ಷಕರ ವರ್ಗಾವಣೆಗೆ ಸರ್ಕಾರ ಸ್ಪಂದಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ. ಶ್ರೀಕಂಠೇಗೌಡ, ಮರಿ ತಿಬ್ಬೇಗೌಡ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಶಿಕ್ಷಕ ಸಂಘದ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ವಿಭಾಗದ 12 ಶಿಕ್ಷಕರು, ಬೆಳಗಾವಿ ವಿಭಾಗದ 11 ಶಿಕ್ಷಕರು, ಮೈಸೂರು ವಿಭಾಗದ 8 ಶಿಕ್ಷಕರು, ಕಲುರ್ಗಿ ವಿಭಾಗದ 6 ಶಿಕ್ಷಕರು, ಉಳಿದಂತೆ 6 ಶಿಕ್ಷಕರು ಸೇರಿದಂತೆ ಒಟ್ಟು 43 ಶಿಕ್ಷಕರಿಗೆ ಮಾತೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








