ದಾವಣಗೆರೆ:
ಸಮಾಜ ಗಂಡು-ಹೆಣ್ಣು ಇಬ್ಬರನ್ನೂ ಸಮಾನವಾಗಿ ಕಂಡಾಗ ಮಾತ್ರ ಸಮತೋಲನ ಕಾಣಲು ಸಾಧ್ಯ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.
ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಬೆನಕ ಟಾಕೀಸ್ ತಂಡದಿಂದ ಏರ್ಪಡಿಸಿದ್ದ `ಪಾಪ’ ಚಿತ್ರದ ಪ್ರೀಮಿಯರ್ ಶೋ ಉದ್ಘಾಟಸಿ ಮಾತನಾಡಿದ ಅವರು, ಪ್ರಕೃತಿಯಲ್ಲಿ ಗಂಡು-ಹೆಣ್ಣು ಇಬ್ಬರೂ ಸಮಾನರಾಗಿದ್ದಾರೆ. ಇಬ್ಬರಲ್ಲಿ ಯಾರ ಸಂಖ್ಯೆಯಲ್ಲೇ ಹೆಚ್ಚು, ಕಡಿಮೆಯಾದರೂ ಅಸಮತೋಲನ ಉಂಟಾಗಲಿದೆ. ಆದ್ದರಿಂದ ಸಮತೋಲನ ಕಾಪಾಡಲು ಪುರುಷ ಮತ್ತು ಮಹಿಳೆಯರನ್ನು ಸಮಾನವಾಗಿ ಕಾಣಬೇಕೆಂದು ಕಿವಿಮಾತು ಹೇಳಿದರು.
ಪ್ರಸ್ತುತ ಎಲ್ಲಾ ರಂಗದಲ್ಲೂ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ. ಇತ್ತೀಚೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣಿಗೂ ಸಮಪಾಲು ನೀಡಬೇಕೆಂಬ ಕಾನೂನು ಜಾರಿಯಾಗಿದೆ. ಆದರೆ, ಪುರುಷರು ಹೆಣ್ಣಿಗೇಕೆ ಸಮಾನ ಅವಕಾಶ, ಆಸ್ತಿ ನೀಡಬೇಕೆಂಬುದಾಗಿ ಚಿಂತಿಸದೇ ಉದಾರಿಯಾದಾಗ ಮಾತ್ರ ಯಾವುದೇ ಸಮಸ್ಯೆ ಬರುವುದಿಲ್ಲ ಎಂದರು.
ಹೆಣ್ಣು ಭ್ರೂಣ ಹತ್ಯೆ ಮಹಾ ಪಾಪವಾಗಿದ್ದು, ಇದು ಅಕ್ಷಮ್ಯ ಅಪರಾಧ ಸಹವಾಗಿದೆ. ಆದ್ದರಿಂದ ಯಾರೂ ಸಹ ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗಬಾರದು. ಯಾವುದೇ ಮಕ್ಕಳು ಹುಟ್ಟಿದರೂ ಹೆಣ್ಣು-ಗಂಡೆಂಬ ಬೇಧಭಾವ ಮಾಡದೇ ಸಮಾನವಾಗಿ ಲಾಲನೆ-ಪಾಲನೆ ಮಾಡಬೇಕೆಂದು ಸಲಹೆ ನೀಡಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ ಮಾತನಾಡಿ, ಸ್ತ್ರೀಯನ್ನು ದೇವತೆ, ಶಕ್ತಿಗೆ ಹೋಲಿಸುತ್ತೇವೆ. ಅದೇ ಹೆಣ್ಣು ಹುಟ್ಟಿದರೆ ಬೇಡ ಎನ್ನುತ್ತೇವೆ. ಇಂತಹ ವೈರುದ್ಯಗಳಿಂದಾಗಿಯೇ ಪ್ರಸ್ತುತ ಭಾರತದ ಜನಸಂಖ್ಯೆಯಲ್ಲಿ ಶೇ.5ರಷ್ಟು ಹೆಣ್ಣಿನ ಕೊರತೆ ಉಂಟಾಗಿದೆ. ಈ ಕಾರಣಕ್ಕಾಗಿಯೇ 130 ಕೋಟಿ ಜನ ಸಂಖ್ಯೆಯಲ್ಲಿ 6.5 ಕೋಟಿ ಗಂಡಸರಿಗೆ ಹೆಣ್ಣು ಸಿಗುತ್ತಿಲ್ಲ ಎಂದರು.
ಕರ್ನಾಟಕದಲ್ಲಿ ಒಂದು ಸಾವಿರ ಪುರುಷರಿಗೆ 950 ಜನ ಮಹಿಳೆಯರು ಮಾತ್ರ ಇದ್ದಾರೆ. ಹೀಗೆ ಹೆಣ್ಣಿನ ಸಂಖ್ಯೆಯಲ್ಲಿ ಇಳಿಕೆಯಾದರೆ, ಅತ್ಯಾಚಾರ, ಲೈಂಗೀಕ ದೌರ್ಜನ್ಯದಂತ ಕೆಟ್ಟ ಪರಿಣಾಮಗಳು ಸಮಾಜದಲ್ಲಿ ಉಂಟಾಗಲಿವೆ. ಇದಕ್ಕೆ ಆಸ್ಪದ ನೀಡಬಾರದು ಎಂದರೆ, ಹೆಣ್ಣು ಭ್ರೂಣ ಹತ್ಯೆ ಮೊದಲು ನಿಲ್ಲಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಸಹನಾ ರವಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ.ಶಶಿಕಲಾ ಮೂರ್ತಿ, ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್, ಉಪನ್ಯಾಸಕಿ ಸುಮತಿ ಜಯಪ್ಪ , ಚಿತ್ರ ತಂಡದ ನಾಗರಾಜ, ಶಂಕರ, ನವೀನಕುಮಾರ, ವಿಜಯ, ಆಶಿತ, ಸುಬ್ರಹ್ಮಣ್ಯ, ಕಿರಣಕುಮಾರ, ಮಹೇಶ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
