ದಾವಣಗೆರೆ:
ಪ್ರತಿಯೊಬ್ಬ ವೈದ್ಯರೂ ರೋಗಿಗಳನ್ನು ದೇವರೆಂದೇ ಭಾವಿಸಿ ಚಿಕಿತ್ಸೆ ನೀಡುವ ಮೂಲಕ ಅವರ ಸೇವೆ ಮಾಡಬೇಕೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪುರಸ್ಕøತ ಡಾ.ಎಸ್.ಎಂ.ಎಲಿ ಕಿವಿಮಾತು ಹೇಳಿದರು.
ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ಮೆಡಿಸನ್ ವಿಭಾಗದಲ್ಲಿ ಗುರುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವೈದ್ಯರ ಕಾಯಕವು ಅತ್ಯಂತ ಪವಿತ್ರವಾದುದ್ದಾಗಿದೆ. ಹೀಗಾಗಿ ಪ್ರತಿಯೊಬ್ಬ ವೈದ್ಯರು ಸಹ ರೋಗಿಗಳನ್ನು ದೇವರೆಂಬುದಾಗಿ ಪರಿಗಣಿಸಿ, ಉತ್ತಮ ಸೇವೆ ನೀಡಬೇಕೆಂದು ಸಲಹೆ ನೀಡಿದರು.
ಯುವ ವೈದ್ಯರು ಆದರ್ಶ ಗುಣ ರೂಢಿಸಿಕೊಂಡು, ಪರಿಶ್ರಮದಿಂದ ಕಾರ್ಯ ನಿರ್ವಹಿಸಬೇಕು ಹಾಗೂ ಗೌರವ ಮತ್ತು ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಬೇಕು. ಆಗ ಸನ್ಮಾನ, ಗೌರವಗಳು ತಾನಾಗಿಯೇ ಹುಡುಕಿಕೊಂಡು ಬರಲಿದೆ ಎಂದು ಹೇಳಿದರು.
ವಿಭಾಗದ ಮುಖ್ಯಸ್ಥ ಡಾ.ರವಿಕುಮಾರ್ ಮಾತನಾಡಿ, ನಡೆದಾಡುವ ದೇವರೆಂದೇ ಖ್ಯಾಯಾದ ತುಮಕೂರಿನ ಸಿದ್ಧಗಂಗಾ ಮಠದ ಶಿವೈಕ್ಯ ಶ್ರೀಶಿವಕುಮಾರ ಮಹಾಸ್ವಾಮೀಜಿಯವರನ್ನು ನೋಡಿ. ಅವರಂತೆ ಖ್ಯಾತ ವೈದ್ಯರಾಗಿರುವ ಎಸ್.ಎಂ.ಎಲಿಯವರು ಸಹ ನಡೆದಾಡುವ ವೈದ್ಯದೇವರಾಗಿದ್ದಾರೆ. ಯುವ ವೈದ್ಯರ ಇಂತಹ ಮಹಾನೀಯರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಡಾ. ಮಂಜುನಾಥ್ ಆಲೂರು ಮಾತನಾಡಿ, ವೈದ್ಯರಿಗೆ ಇರಬೇಕಾದ ಎಲ್ಲ ಗುಣಗಳು ಡಾ. ಎಸ್.ಎಂ.ಎಲಿ ಅವರಲ್ಲಿವೆ. ಎಲಿಯವರು ಸೌಮ್ಯ, ಶಾಂತ ಸ್ವಭಾವವುಳ್ಳವರಾಗಿದ್ದಾರೆ. ಅವರ ಆದರ್ಶ ಗುಣಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ವೈದ್ಯರಾದ ಡಾ.ಗುರುಪಾದಪ್ಪ, ಡಾ.ರಜನಿ, ಡಾ.ವಿಧು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ