ಹುಳಿಯಾರು:
ಜಿಲ್ಲಾ ಪಂಚಾಯತ್ ಶೇಕಡ 3 ರ ಮೀಸಲು ನಿಧಿಯಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ವಿಶೇಷ ವಿಕಲಚೇತನರಿಗೆ ಯಂತ್ರಚಾಲಿತ ತ್ರಿಚಕ್ರವಾಹನ ವಿತರಿಸಲಾಯಿತು.
ಹುಳಿಯಾರಿನ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ವಾಹನ ವಿತರಣಾ ಸಮಾರಂಭದಲ್ಲಿ ಜಿಪಂ ಸÀದಸ್ಯ ಸಿದ್ಧರಾಮಯ್ಯ ಫಲಾನುಭವಿಗಳಾದ ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯ ಚಿಕ್ಕಬಿದರೆ ಗ್ರಾಮದ ಸಂದೀಪ್ ಹಾಗೂ ತಿಮ್ಲಾಪುರ ಗ್ರಾಪಂ ವ್ಯಾಪ್ತಿಯ ಸೀಗೆಬಾಗಿ ಗ್ರಾಮದ ಮುನಿಯಪ್ಪ ಎಂಬುವವರಿಗೆ ತ್ರಿಚಕ್ರವಾಹನ ವಿತರಿಸಿ ಅವರು ಮಾತನಾಡಿದರು.
ಅಂಗವಿಕಲರ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ. ಸದ್ಯ ಶೇಕಡ ಮೂರರ ಅನುದಾನದಡಿಯಲ್ಲಿ ಇಬ್ಬರಿಗೆ ತ್ರಿಚಕ್ರವಾಹನ ವಿತರಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಂಡು ಅವರು ಕೂಡ ಎಲ್ಲರಂತೆ ಬದುಕಬೇಕು, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು, ಸ್ವಾವಲಂಬಿಯಾಗಿ ಜೀವನ ಸಾಗಿಸಬೇಕು ಎಂದು ಹೇಳಿದರು.
ವಿಕಲಚೇತನರಿಗೆ ಸೇರಿದಂತೆ ಹಿಂದುಳಿದವರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳು ಸರ್ಕಾರದ ವತಿಯಿಂದ ನಡೆಯುತ್ತಿದ್ದು ಅರ್ಹರಿಗೆ ಸೌಲಭ್ಯ ದೊರಕುವಂತೆ ನೋಡಿಕೊಳ್ಳಬೇಕು ಎಂದರು. ಜಿಪಂ ಅನುದಾನದಲ್ಲಿ ಅನೇಕ ಯೋಜನೆಗಳಿದ್ದು ನನ್ನ ಅವಧಿಯಲ್ಲಿ ಬಡವರ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ಇದಲ್ಲದೆ ಕೈಗಾರಿಕಾ ಇಲಾಖೆ ವತಿಯಿಂದ ಕಾರ್ಪೆಂಟರ್‍ಗಳಿಗೆ, ಕ್ಷೌರಿಕರಿಗೆ, ಕಮ್ಮಾರರಿಗೆ, ಇಸ್ತ್ರಿ ಮಾಡುವವರಿಗೆ ಅನೇಕ ಸೌಲಭ್ಯಗಳು ಬರಲಿದ್ದು ಶೀಘ್ರವೇ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಯ್ಯ, ಯಳನಾಡು ಗ್ರಾಪಂ ಅಧ್ಯಕ್ಷ ಕಾಟಲಿಂಗಯ್ಯ, ತಿಮ್ಲಾಪುರ ಗ್ರಾಪಂ ಅಧ್ಯಕ್ಷ ದೇವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೃಷ್ಣಮೂರ್ತಿ, ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಅನ್ನಪೂರ್ಣಮ್ಮ, ಕೆಂಕೆರೆ ಶಿವಕುಮಾರ್, ದಯಾನಂದ್, ಪೂರ್ಣಿಮಾ ಮೊದಲಾದವರಿದ್ದರು.