ಚಿತ್ರದುರ್ಗ
ಕೊರೋನಾ ವೈರಸ್ ಸೋಂಕು ತಡೆಗಟ್ಟುವ ಕುರಿತು ಜಿಲ್ಲೆಯಾದ್ಯಂತ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶೇಷ ಪ್ರಚಾರ ವಾಹನ ಸಿದ್ಧಪಡಿಸಿದ್ದು, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಡಿಸಿ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಪ್ರಚಾರ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಕೊರೋನಾ ವೈರಸ್ ಸೋಂಕು ತಡೆಗಾಗಿ ಜಿಲ್ಲೆಯಲ್ಲಿ ಸಾರ್ವಜನಿಕರನ್ನು ಜಾಗೃತಗೊಳಿಸುವುದು ಅಗತ್ಯವಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯು ಹಲವು ಮಾಹಿತಿಯುಳ್ಳ ವಿಶೇಷ ವಾಹನವನ್ನು ಸಿದ್ಧಪಡಿಸಿ, ಪ್ರಚಾರಕ್ಕೆ ಅಣಿಮಾಡಿದೆ. ಈ ವಾಹನವು ಗ್ರಾಮಗಳಿಗೆ ತೆರಳಿ ಸಾರ್ವಜನಿಕರಿಗೆ ಮಾಹಿತಿ ನೀಡಲಿದೆ. ಕೊರೋನಾ ವೈರಸ್ ಸೋಂಕು ಕುರಿತಂತೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಅಲ್ಲದೆ ವದಂತಿಗಳು, ಊಹಾಪೋಹಗಳನ್ನು ನಂಬಬಾರದು. ಸೋಂಕು ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ. ಪಾಲಾಕ್ಷ ಅವರು ಮಾಹಿತಿ ನೀಡಿ, ಕೊರನಾ ವೈರಸ್ ರೋಗ ಲಕ್ಷಣಗಳಾದ ತೀವ್ರ ಜ್ವರ, ನಗಡೆ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿ ಈ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಯ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮುಜಾಂಗ್ರತಾ ದೃಷ್ಟಿಯಿಂದ ಕೆಮ್ಮುವಾಗ ಸೀನುವಾಗ ಕರ ವಸ್ತ್ರ ಅಡ್ಡ ಹಿಡಿಯಬೇಕು.
ಸಾರ್ವಜನಿಕ ಸ್ಥಳದಲ್ಲಿ ಉಗಳಬಾರದು, ಕೈಗಳನ್ನು ಸಾಬೂನುನಿಂದ ತೊಳೆದುಕೊಳ್ಳುವುದರ ಮೂಲಕ ಸ್ವಚ್ಛತೆಯನ್ನು ಕಾಪಾಡಬೇಕು. ರೋಗದ ಲಕ್ಷಣ ಹೊಂದಿರುವವರು ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು. ಸರಿಯಾಗಿ ಬೇಯಿಸದ ಹಸಿ ಮೊಟ್ಟೆ, ಮಾಂಸ, ಸೇವೆನೆ ಮಾಡಬಾರದು. ಕೊರೊನಾ ವೈರಸ್ ಬಗ್ಗೆ ಭಯಬೇಡ ಎಚ್ಚರವಿರಲ್ಲಿ ಎಂಬ ಸ್ಲೊಗನ್‍ನೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೆ ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 5 ಹಾಸಿಗೆಗಳ ಐಸೋಲೇಷನ್ ವಾರ್ಡ್, ಜಿಲ್ಲೆಯ 5 ತಾಲ್ಲೂಕು ಆಸ್ಪತ್ರೆಗಳಲ್ಲಿ 2 ಹಾಸಿಗೆಯ ಐಸೋಲೇಷನ್ ವಾರ್ಡ್‍ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ ಮಾತನಾಡಿ, ಜಿಲ್ಲೆಯ ತಾಲ್ಲೂಕುವಾರು ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರಿಗೆ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಿ ಕಾರ್ಯಾಗಾರ ಹಮ್ಮಿಕೊಂಡಿದೆ. ಮಾಹಿತಿ ಪಡೆದ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುವರು. ತಾಯಂದಿರ ಸಭೆಗಳಲ್ಲಿ, ಗ್ರಾಮ ಪಂಚಾಯತಿ ಸಭೆಗಳಲ್ಲಿ, ಇತರ ಸಭೆಗಳಲ್ಲಿ ಜಾಗೃತಿ ಮೂಡಿಸಲು ತಿಳಿಸಲಾಗಿದೆ. ಈ ಸಂಚಾರಿ ವಸ್ತು ಪ್ರಸದರ್ಶನ (ಟ್ಯಾಬ್ಲೊ) ವನ್ನು ಎಲ್ಲಾ ತಾಲ್ಲೂಕುಗಳ ಗ್ರಾಮಗಳಲ್ಲಿ ಧ್ವನಿವರ್ಧಕ ವ್ಯವಸ್ಥೆಯೊಂದಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಎಸ್. ಆನಂದ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಬಿ.ಪೂಜಾರ್, ಮತ್ತು ಸಿಬ್ಬಂದಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ