ಗುಟ್ಕಾ ನಿರ್ಮೂಲನೆಗೂ ಪ್ರಯತ್ನಿಸಿ :ಬಿ.ಎನ್.ಮಲ್ಲೇಶ್

ದಾವಣಗೆರೆ:

   ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಮದ್ಯಪಾನ ನಿಷೇಧದ ಜೊತೆಗೆ ಗುಟ್ಕಾ ನಿರ್ಮೂಲನೆಗೂ ಪ್ರಯತ್ನಿಸಬೇಕೆಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಸಲಹೆ ನೀಡಿದರು.

   ಇಲ್ಲಿನ ಎಸ್.ಎಂ.ಕೆ. ನಗರದ ಬಾಬು ಜಗಜೀವ್‍ರಾಂ ಭವನದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ದಾವಣಗೆರೆ ತಾಲೂಕು ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ದಾವಣಗೆರೆ ಎ ವಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಶ್ರೀಶನೇಶ್ವರ ದೇವರ ಪೂಜೆ, ಶನಿ ಕಥೆ ಮತ್ತು ವಲಯ ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಸ್ತುತ ಮದ್ಯಪಾನದಂತೆ ಗುಟ್ಕಾವೂ ಸಮಾಜವನ್ನು ದೊಡ್ಡ ಪಿಡುಗಾಗಿ ಕಾಡುತ್ತಿದ್ದು, ಇದರಿಂದ ಕ್ಯಾನ್ಸರ್‍ನಂತಹ ಮಾರಕ ರೋಗಕ್ಕೆ ತುತ್ತಾಗುವ ಅಪಾಯವಿದೆ. ಹಿಂದೆ ಸರ್ಕಾರ ತಂಬಾಕು ನಿಷೇಧ ಮಾಡಿತು. ಆದರೆ, ಗುಟ್ಕಾ ಉತ್ಪಾದಿಸುವ ಕಂಪೆನಿಗಳು ಅಡಿಕೆ ಮತ್ತು ತಂಬಾಕು ಪಟ್ಟಣವನ್ನೇ ಬೇರೆ, ಬೇರೆಯಾಗಿ ಮಾರಾಟ ಮಾಡುತ್ತಿವೆ. ಇವೆರಡನ್ನೂ ಮಿಶ್ರಣ ಮಾಡಿಕೊಂಡು ಜಗಿಯುವವರು ದೇವಸ್ಥಾನ, ಶಾಲೆ ಹೀಗೆ ಯಾವುದನ್ನೂ ನೋಡದೇ, ಪಿಚಿ-ಪಿಚಿ ಉಗಿತಿರ್ತಾರೆ. ಆದ್ದರಿಂದ ಸಮಾಜದ ಸ್ವಾಸ್ಥ್ಯಕ್ಕೂ ಹಾಗೂ ವ್ಯಕ್ತಿಯ ಆರೋಗ್ಯಕ್ಕೂ ಮಾರಕವಾಗಿರುವ ಗುಟ್ಕಾ ನಿಮೂರ್ಲನೆಗೆ ಧರ್ಮಸ್ಥಳ ಸಂಸ್ಥೆಯವರು ಮುಂದಾಗಬೇಕು. ಅಲ್ಲದೇ, ಈ ಸಂಘದಲ್ಲಿ ಸದಸ್ಯೆಯರಾಗಿರುವವರು ತಮ್ಮ ಗಂಡಂದಿರ ಗುಟ್ಕಾ ಚಟ ಬಿಡಿಸುವ ಸಂಕಲ್ಪ ಮಾಡಬೇಕೆಂದು ಕಿವಿಮಾತು ಹೇಳಿದರು.

    ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಕೆಲಸ ಮಾಡುವ ಶಕ್ತಿ, ಸಾಮಥ್ರ್ಯ ಇದೆ ಎಂಬುದನ್ನು ಅರಿತು ಉಳಿತಾಯ ಯೋಜನೆಯ ಮೂಲಕ ಧರ್ಮಸ್ಥಳ ಸಂಸ್ಥೆಯವರು ಸಾಲಸೌಲಭ್ಯ ನೀಡಿ, ನಿಮ್ಮನ್ನು ಆರ್ಥಿಕ ಸಬಲರನ್ನಾಗಿ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವುದು ಅತ್ಯಂತ ಸ್ತುತಾರ್ಹವಾಗಿದೆ. ಈ ಕೆಲಸವನ್ನೂ ಸರ್ಕಾರದಿಂದಲೂ ಇನ್ನೂ ಮಾಡಲಾಗಿಲ್ಲ ಎಂದರು.

     ಸಮಾಜದ ಕಟ್ಟಕಡೆಯ ಹೆಣ್ಣುಮಕ್ಕಳು ಸಶಕ್ತವಾಗಿ ನಿಂತು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಾಕಬೇಕು. ಗಂಡಂದಿರನ್ನು ಸರಿದಾರಿಗೆ ತರಬೇಕೆಂಬ ಸದುದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವ ಆಶಯದಂತೆ ಸಂಸ್ಥೆಯು ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವ ಮೂಲಕ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕೆಂದು ಸಲಹೆ ನೀಡಿದರು.

     ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದ್ದಯ್ಯ ಮಾತನಾಡಿ, ನಮ್ಮ ಸಂಸ್ಥೆಯು ಬರೀ ಆರ್ಥಿಕ ಸಬಲೀಕರಣವಲ್ಲದೇ, ಧಾರ್ಮಿಕ ಹಾಗೂ ಆರ್ಥಿಕವಾಗಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಶ್ರಮಿಸುತ್ತಿದ್ದು, ಕಳೆದ ನೆರೆ ಬಂದು ದಾವಣಗೆರೆ ತಾಲೂಕಿನಲ್ಲಿ 140 ಮನೆಗಳು ಹಾನಿಗೆ ಒಳಗಾಗಿದ್ದವು. ಅವರಿಗೆ ತಲಾ 5 ಸಾವಿರ ನೆರವು, ಮಡಿಕೇರಿ ಪ್ರವಾಹ ಪೀಡಿತರಿಗೆ 12 ಕೋಟಿ ನೀಡಿರುವುದಲ್ಲದೇ, ಈ ಬಾರಿಯ ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ 25 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

     ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಒಟ್ಟು 284 ಶುದ್ಧ ಗಂಗಾ ಘಟಕಗಳನ್ನು ನಿರ್ಮಿಸಿದ್ದೇವೆ. ಮದ್ಯವರ್ಜನ ಶಿಬಿರದ ಮೂಲಕ ಕುಡಿತವನ್ನು ಬಿಡಿಸಿ, ದುಶ್ಚಟಕ್ಕೆ ದಾಸರಾಗಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುತ್ತಿದೆ. 82 ಕೆರೆಗಳ ಹೂಳು ಎತ್ತುವ ಮೂಲಕ ಅವುಗಳಿಗೆ ಕಾಯಕಲ್ಪ ನೀಡಲಾಗಿದೆ. ನಮ್ಮ ಸಂಸ್ಥೆಯು ಒಟ್ಟು 48 ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ದುರ್ಗಾಂಭಿಕಾ ದೇವಸ್ಥಾನ ಟ್ರಸ್ಟ್‍ನ ಗೌಡ್ರ ಚನ್ನಬಸಪ್ಪ, ಉದ್ಯಮಿ ಕುಸುಮ ಶ್ರೇಷ್ಠಿ, ಶ್ರೀಕಾಂತ್ ಭಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಯಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link