ಅರ್ಹರಿಗೆ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಿ : ಟಿ.ರಘುಮೂರ್ತಿ

ಚಿತ್ರದುರ್ಗ

     ಸರ್ಕಾರದ ವಿವಿಧ ಸೌಲಬ್ಯಗಳನ್ನು ಅರ್ಹರಿಗಷ್ಟೇ ಕಲ್ಪಿಸಿಕೊಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಯಾವುದೇ ತಾರತಮ್ಯ ಇರಕೂಡದು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ವಿವಿಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕರು,ಸರ್ಕಾರದ ವಿವಿಧ ಯೋಜನೆಗಳನ್ನು ಬಲ್ಲವರೇ ಪದೇ ಪದೇ ಪಡೆಯುತ್ತಾರೆ. ಇದರಿಂದ ನಿಜವಾದ ಬಡವರಿಗೆ ಅನ್ಯಾಯವಾಗಲಿದೆ.

     ಹೀಗಾಗಿ ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳಬೇಕು ಎಂದರು ಕೆಲವೊಮ್ಮೆ ತಾವು ಪತ್ರ ನೀಡಿದ್ದರೂ ಸಹ ಸೌಲಬ್ಯ ಕಲ್ಪಿಸಿಕೊಡುವಾಗ ಅಧಿಕಾರಿಗಳು ನನ್ನ ಗಮನಕ್ಕೆ ತರಬೇಕು. ಇಲ್ಲಿ ಏನಾದರೂ ಲೋಪ ಕಂಡು ಬಂದರೆ ಸರಿ ಪಡಿಸಿ ಅರ್ಹರಿಗೆ ನ್ಯಾಯ ಕಲ್ಪಿಸಿಕೊಡಲಾಗುವುದು ಎಂದರು ತುರುವನೂರು ಹೋಬಳಿಯಲ್ಲಿ 48 ರುದ್ರಭೂಮಿ ಅಭಿವೃದ್ದಿ ಪಡಿಸಲು ಉದ್ದೇಶಿಸಲಾಗಿತ್ತು. 41 ಪೂರ್ಣಗೊಂಡಿದೆ. 2 ಪ್ರಗತಿಯಲ್ಲಿದೆ. ಉಳಿದ ಕಡೆಗಳಲ್ಲಿ ಜಮೀನು ಸಮಸ್ಯೆ ಇದ್ದು ಖಾಸಗಿಯವರ ಮನವೊಲಿಸಿ ಜಮೀನು ಪಡೆಯುವಂತೆ ರಘುಮೂರ್ತಿ ಸಲಹೆ ನೀಡಿದರು.

      ಮುದ್ದಾಪುರ ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ರುದ್ರಭೂಮಿ ಇದ್ದು ಇದನ್ನು ತೋಟವನ್ನಾಗಿ ವ್ಯಕ್ತಿಯೊಬ್ಬ ಮಾಡಿಕೊಂಡಿದ್ದಾರೆ. ಇಲ್ಲಿ ಪಕ್ಷ ಬೇಧ ಬೇಡ. ಕೂಡಲೇ ಪೊಲೀಸರ ಸಹಾಯ ಪಡೆದು ಶವಂಸ್ಕಾರಕ್ಕೆ ಅನುಕೂಲ ಮಾಡಿಕೊಡಬೇಕು. ಜಮೀನು ಇದ್ದವರು ಅವರವರ ಜಮೀನಿನಲ್ಲಿ ಶವಸಂಸ್ಕಾರ ಮಾಡುತ್ತಾರೆ. ಜಮೀನು ಇಲ್ಲದವರು ಕೆರೆ ಸಮೀಪದಲ್ಲಿ ಹೂಳುತ್ತಾರೆ. ಇದರಿಂದ ಕೆರೆ ಹೂಳೆತ್ತಿದ್ದರೆ ಸಮಸ್ಯೆಯಾಗಲಿದೆ. ತಕ್ಷಣ ತೆರವುಗೊಳಿಸಿ ಎಂದರು.

     ತಹಸೀಲ್ದಾರ್ ಅವರು ಪಂಚಾಯಿತಿ ಕಚೇರಿಗಳಲ್ಲಿ ಪಹಣಿ ನೀಡುವ ಬಗ್ಗೆ ಪತ್ರ ಬರೆದ ಮೇಲೆ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತುರುವನೂರು ಹೋಬಳಿಯಿಂದಲೇ ಮೊದಲು ಆರಂಭಿಸಭೇಕು ಎಂದರು. ಇದಕ್ಕೆ ಕೆಲವು ಪಂಚಾಯಿತಿ ಅಭಿವೃದ್ದಿ ಅಧಿಕಾರಿಳು ಇಂಟರ್‍ನೆಟ್ ಸಮಸ್ಯೆ ಇದೆ. ಇಂಟರ್‍ನೆಟ್ ಕೇಬಲ್ ಹಾಕಲು ತೊಂಧರೆ ಇದೆ ಎಂದು ಸಬೂಬು ಹೇಳಿದರು. ಇದಕ್ಕೆ ರಘುಮೂರ್ತಿ, ಸಣ್ಣಪುಟ್ಟ ಸಮಸ್ಯೆಗಳನ್ನು ಬಿಎಸ್‍ಎನ್‍ಎಲ್ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಿ ಏಂದರು.

     ತಹಸೀಲ್ದಾರ್ ವೆಂಕಟೇಶಯ್ಯ ಮಾತನಾಡಿ, ಅನೇಕ ಬಾರಿ ಪತ್ರ ಬರೆದು ಪಂಚಾಯಿತಿಗಳಲ್ಲಿ ಪಹಣಿ ನೀಡುವಂತೆ ಮನವಿ ಮಾಡಿದ್ದೇನೆ. ಒಂದು ಪಹಣಿ ಪಡೆಯಲು ರೈತರು ಚಿತ್ರದುರ್ಗಕ್ಕೆ ಬಂದರೆ ಒಂದು ದಿನ ಹಾಗೂ 50 ರಿಂದ 100 ರೂಪಾಯಿ ಖರ್ಚು ಮಾಡುತ್ತಾರೆ. ಪಂಚಾಯಿತಿ ಕೇಂದ್ರಗಳಲ್ಲಿಯೇ ನೀಡಿದರೆ ಅನುಕೂಲವಾಗಲಿದೆ. ಪಂಚಾಯಿತಿಗೂ ಒಂದು ಪಹಣಿಗೆ 10 ರೂಪಾಯಿ ಲಾಭ ಬರಲಿದೆ ಎಂದು ಹೇಳಿದರು. ಶಾಸಕರು ತಹಸೀಲ್ದಾರ್ ಅವರು ಹೇಳುವಂತೆ ಇದರ ಬಗ್ಗೆ ತುರ್ತಾಗಿ ಕ್ರಮ ಕೈಗೊಂಡು ಪಹಣಿ ವಿತರಿಸುವಂತೆ ತಿಳಿಸಿದರು.

     ಕೃಷಿ ಇಲಾಖೆ ತಾಲ್ಲೂಕು ಅಧಿಕಾರಿ ಭಾರತಿ ಮಾತನಾಡಿ, ಚಿತ್ರದುರ್ಗ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ 14,484 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ 14,573 ಹೆಕ್ಟೇರ್ ಬಿತ್ತನೆಯಾಗಿದ್ದು, ಶೇ.107 ರಷ್ಟು ಗುರಿಸಾಧನೆಯಾಗಿದೆ. 602 ಮಿ.ಮೀ. ವಾಡಿಕೆ ಮಳೆಗೆ 795 ಮಿ.ಮೀ. ಮಳೆಯಾಗಿದೆ. ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ 515 ಮಿ.ಮೀ. ಮಳೆಗೆ 807 ಮಿ.ಮೀ. ಮಳೆಯಾಗಿದೆ. ಮುಂಗಾರಿನಲ್ಲಿ 65135 ಹೆಕ್ಟೇರ್ ಗುರಿಗೆ 43138 ಹೆಕ್ಟೇರ್ ಬಿತ್ತನೆಯಾಗಿತ್ತು ಎಂದು ತಿಳಿಸಿದರು.

      ತಾಲ್ಲೂಕಿನಲ್ಲಿ 800 ಜನ ರೈತರು ಬೆಳೆವಿಮೆ ಮಾಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 13,59, 27,000 ರೂ. ವಿಮಾ ಮೊತ್ತವಾಗಿದೆ. ಇದರಲ್ಲಿ 10 ಕೋಟಿ ರೂ. ಅನುದಾನ ಬಂದಿದೆ. ಉಳಿದ 3.59 ಕೋಟಿ ಹಣ ಬರಬೇಕಿದೆ. ಮುಂಗಾರ ಹಂಗಾಮಿನಲ್ಲಿ 43,138 ಹೆಕ್ಟೇರ್ ಪ್ರದೇಶಲ್ಲಿ ಬರಪೀಡಿತ ಪ್ರದೇಶ ಎಂದು ಪರಿಗಣಿಸಲಾಗಿತ್ತು. ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 28 ಸಾವಿರ ರೈತರು ಬೆಳೆನಷ್ಟ ಅನುಭವಿಸಿದ್ದರು ಎಂದು ಸಭೆಗೆ ಮಾಹಿತಿ ನೀಡಿದರು.

     ಕೃಷಿ ಇಲಾಖೆಯಿಂದ ಪ್ರತಿ ಹೋಬಳಿಗೆ 800 ರಂತೆ ತಾಡಪಾಲುಗಳನ್ನು ವಿತರಿಸಲಾಗಿದೆ ಎಂದು ಕೃಷಿ ಅಧಿಕಾರಿ ಭಾರತಿ ತಿಳಿಸಿದರು. ತಾ.ಪಂ. ಸದಸ್ಯ ಓಬಣ್ಣ ಮಾತನಾಡಿ, ನಾವು ಕೇಳಿದ ಯಾವುದೇ ರೈತರಿಗೆ ತಾಡಪಾಲು ನೀಡಿಲ್ಲ. ಕೇಳಿದರೆ ಶಾಸಕರಿಗೆ ಹೇಳಿದ್ದೇವೆ. ಅದರಂತೆ ತಾಡಪಾಲು ವಿತರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಆರೋಪ ಮಾಡಿದರು.

     ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರಘುಮೂರ್ತಿ, ಎಲ್ಲ ರೈತರಿಗೂ ಸರ್ಕಾರದ ಸೌಲಭ್ಯ ದೊರೆಯಬೇಕು. ಹಾಗಾಗಿ ಸೌಲಭ್ಯ ನೀಡಿ ಕುರಿತು ಒಂದು ರಿಜಿಸ್ಟರ್ ನಿರ್ವಹಿಸಬೇಕು. ಒಮ್ಮೆ ಸೌಲಭ್ಯ ಪಡೆದವರಿಗೆ ಮತ್ತೆ ನೀಡಬಾರದು. ಪ್ರತಿ ವರ್ಷ ಕೊಟ್ಟವರಿಗೆ ಕೊಟ್ಟಲ್ಲಿ ಕೆಲವರಿಗೆ ಮಾತ್ರ ನೀಡಿದಲ್ಲಿ ಉಳಿದವರು ಅವಕಾಶ ವಂಚಿತರಾಗುತ್ತಾರೆ. ಹಾಗಾಗಿ ಈ ಕುರಿತು ಅಧಿಕಾರಿಗಳು ಈ ಕುರಿತು ಎಚ್ಚರ ವಹಿಸಬೇಕೆಂದು ಸೂಚಿಸಿದರು.

      ತಾಲ್ಲೂಕುವಾರು ಜೊತೆಗೆ ಹೋಬಳಿವಾರು ಮಾಹಿತಿ ತರಬೇಕು. ನಿಮಗೆ ಮಾಹಿತಿ ತರಲು ಭಾರವಾಗುತ್ತದೆಯೇ? ಎಲ್ಲದಕ್ಕೂ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಕೇಳಲು ಸಾಧ್ಯವಿಲ್ಲ. ಇನ್ನೂ ಮುಂದೆ ಸರಿಯಾದ ಮಾಹಿತಿ ತರಬೇಕು ಎಂದು ತರಾಟೆಗೆ ತೆಗೆದುಕೊಂಡರು.

    ತಾಲ್ಲೂಕು ಪಂಚಾಯತ್ ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯದ ಕಾರಣಕ್ಕಾಗಿ ಅಧಿಕಾರಿಗಳು ಪರಿಪೂರ್ಣ ಮಾಹಿತಿ ಇಲ್ಲದೆ ಬರುತ್ತಾರೆ. ಸಾಮಾನ್ಯಸಭೆಯಲ್ಲಿಯೂ ಚರ್ಚೆ ನಡೆಸಬೇಕು ಎಂದರು. ಆಗ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಲಿಂಗರಾಜು, ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.ತಾ.ಪಂ. ಅಧ್ಯಕ್ಷ ಡಿ.ಎಂ.ಲಿಂಗರಾಜು, ತಹಸೀಲ್ದಾರ್ ವೆಂಕಟೇಶ್, ತಾ.ಪಂ. ಇಒ ಕೃಷ್ಣನಾಯ್ಕ್ ಹಾಗೂ ಕೆಲವು ತಾ.ಪಂ. ಸದಸ್ಯರು ಸಭೆಯಲ್ಲಿ ಹಾಜರಿದ್ದರು. ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap